ದೆಹಲಿ: ದೇಶದೆಲ್ಲೆಡೆ ಹೆಚ್ಚುತ್ತಿರುವ ಕೊರೊನಾ ಎರಡನೇ ಅಲೆಯಿಂದಾಗಿ ಶೈಕ್ಷಣಿಕ ವಲಯ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದಾಗಿ ಸಿಬಿಎಸ್ಇ ಬೋರ್ಡ್ನ 10 ಮತ್ತು 12ನೇ ತರಗತಿಗಳಿಗೆ ಪರೀಕ್ಷೆಗಳನ್ನು ನಡೆಸುವ ಕುರಿತು ಪ್ರಧಾನಿ ನರೇಂದ್ರ ಮೋದಿ, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹಾಗೂ ಶಿಕ್ಷಣ ಇಲಾಖೆಯ ಪ್ರಮುಖರು ಸಭೆ ನಡೆಸಿದ್ದಾರೆ. ವಿವಿಧ ರಾಜ್ಯಗಳ ಅಭಿಪ್ರಾಯವನ್ನು ಸಂಗ್ರಹಿಸಿ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ 10ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿ, 12ನೇ ತರಗತಿ ಪರೀಕ್ಷೆಯ ದಿನಾಂಕ ಮುಂದೂಡಿ ಆದೇಶ ಹೊರಡಿಸಲಾಗಿದೆ. ಈ ಸಂದರ್ಭ ವಿದ್ಯಾರ್ಥಿಗಳ ಹಿತರಕ್ಷಣೆ ಮುಖ್ಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾಗಿ ತಿಳಿದುಬಂದಿದೆ.
ಸದ್ಯದ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಕಷ್ಟವಿದೆ, ಹಾಗಂತ ಆನ್ಲೈನ್ ಪರೀಕ್ಷೆ ನಡೆಸಿದರೂ ದೇಶದ ಎಲ್ಲಾ ಭಾಗಗಳ ಮಕ್ಕಳಿಗೂ ಒಂದೇ ತೆರನಾಗಿ ತಂತ್ರಜ್ಞಾನ ಸೌಲಭ್ಯ ಸಿಗುತ್ತಿದೆ ಎಂದು ಹೇಳಲಾಗುವುದಿಲ್ಲ. ಹೀಗಾಗಿ ಪರೀಕ್ಷೆಗಳನ್ನು ರದ್ದುಪಡಿಸಬೇಕು ಅಥವಾ ಮುಂದೂಡಬೇಕು ಎಂಬ ಕೂಗು ಕೇಳಿಬಂದಿತ್ತು. ಇದೀಗ ಶಿಕ್ಷಣ ಇಲಾಖೆಯ ಜತೆ ನಡೆದ ಸಭೆಯ ಬಳಿಕ 12ನೇ ತರಗತಿ ಪರೀಕ್ಷೆಯನ್ನು ಮುಂದೂಡಲಾಗಿದ್ದು ಅತಿ ಶೀಘ್ರದಲ್ಲಿ ಪರೀಕ್ಷಾ ದಿನಾಂಕವನ್ನು ತಿಳಿಸಲಾಗುವುದು ಹಾಗೂ 10ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.
ಕೊರೊನಾ ಸೋಂಕಿನ ಹೆಚ್ಚಳದಿಂದ ಸಿಬಿಎಸ್ಇ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಕೋರಿ 2 ಲಕ್ಷಕ್ಕೂ ಹೆಚ್ಚು ಪಿಟಿಷನ್ ಸಲ್ಲಿಸಲಾಗಿತ್ತು. #cancelboardexam2021 ಎಂಬ ಹ್ಯಾಷ್ಟ್ಯಾಗ್ನಡಿ ಪರೀಕ್ಷೆ ರದ್ದುಗೊಳಿಸಲು ಟ್ವಿಟರ್ನಲ್ಲಿ ಆಗ್ರಹಿಸಲಾಗಿತ್ತು. ಈ ಹ್ಯಾಷ್ಟ್ಯಾಗ್ನಡಿ ಕಳೆದ ರವಿವಾರ ಒಂದೇ ದಿನ 5 ಲಕ್ಷಕ್ಕೂ ಹೆಚ್ಚು ಟ್ವೀಟ್ಗಳನ್ನು ಮಾಡಲಾಗಿತ್ತು. ಈ ಮುನ್ನ ಬಿಡುಗಡೆಯಾಗಿದ್ದ ವೇಳಾಪಟ್ಟಿಯ ಪ್ರಕಾರ ಮೇ 4ರಿಂದ ಜೂನ್ 10ರವರೆಗೆ ಎರಡು ತರಗತಿಗಳಿಗೆ ಪರೀಕ್ಷೆ ನಡೆಯಲಿದೆ ಎನ್ನಲಾಗಿತ್ತು. ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಮೊದಲ ಪರೀಕ್ಷೆ ಮತ್ತು ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಎರಡನೇ ಪರೀಕ್ಷೆ ನಡೆಯಲಿದೆ ಎನ್ನಲಾಗಿತ್ತು.
ಇದನ್ನೂ ಓದಿ:
CBSE Board Exams 2021: ಈ ವರ್ಷದ ಸಿಬಿಎಸ್ಇ ಪರೀಕ್ಷೆ ದಿನಾಂಕ ಮುಂದೂಡಲ್ಪಡುವ ಸಂಭವ
Karnataka Exam 2021 News: ಎಲ್ಲವೂ ಸರಿಹೋದ ತಕ್ಷಣ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ; ಡಾ.ಅಶ್ವತ್ಥ ನಾರಾಯಣ
Published On - 1:59 pm, Wed, 14 April 21