ಕೊರೊನಾ ಲಸಿಕೆ ಎಲ್ಲರಿಗೂ ಸಿಗಲ್ವಂತೆ.. ಅಗತ್ಯವಿರೋರಿಗೆ ಮಾತ್ರ ಕೊಡ್ತಾರಂತೆ

|

Updated on: Dec 02, 2020 | 6:53 AM

ಡೆಡ್ಲಿ ಕೊರೊನಾಗೆ ವ್ಯಾಕ್ಸಿನ್ ಸಿಕ್ಕರೂ ದೇಶದ ಎಲ್ಲ ಜನರಿಗೆ ಲಸಿಕೆ ನೀಡೋ ಕುರಿತು ನಿರ್ಧರಿಸಿಲ್ಲ ಅಂತಾ ಕೇಂದ್ರ ಸರ್ಕಾರ ಹೇಳಿದೆ. ಈ ಮೂಲಕ ಕೊರೊನಾಗೆ ಲಸಿಕೆ ಸಿಕ್ಕರೂ ಎಲ್ಲರಿಗೂ ಚುಚ್ಚುಮದ್ದು ನೀಡಲ್ಲ ಅನ್ನೋ ಪರೋಕ್ಷ ಸಂದೇಶವನ್ನ ಸರ್ಕಾರ ರವಾನಿಸಿದೆ. ಇದರ ನಡುವೆ ಕೊವಿಶೀಲ್ಡ್ ವಿರುದ್ಧ ಕೇಳಿಬಂದಿದ್ದ ಆರೋಪವನ್ನ ಸರ್ಕಾರ ತಳ್ಳಿ ಹಾಕಿದ್ದು, ಕೊವಿಶೀಲ್ಡ್ 3ನೇ ಹಂತದ ಪ್ರಯೋಗಕ್ಕೆ ಸರ್ಕಾರ ಅನುಮತಿ ನೀಡಿದೆ.

ಕೊರೊನಾ ಲಸಿಕೆ ಎಲ್ಲರಿಗೂ ಸಿಗಲ್ವಂತೆ.. ಅಗತ್ಯವಿರೋರಿಗೆ ಮಾತ್ರ ಕೊಡ್ತಾರಂತೆ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಡೆಡ್ಲಿ ಕೊರೊನಾ ವೈರಸ್​ಗೆ ಲಸಿಕೆ ಕಂಡುಹಿಡಿಯಲು ಹಲವು ಕಂಪನಿಗಳು ನಾ ಮುಂದು.. ತಾ ಮುಂದು ಅಂತಾ ಪ್ರಯತ್ನ ಮುಂದುವರಿಸಿವೆ. ಇದ್ರಲ್ಲಿ ಫೈಜರ್-ಬಯೋಎನ್​ಟೆಕ್ ಮತ್ತು ಮಾಡೆರ್ನಾ ಲಸಿಕೆಗಳು ಅತಿ ಹೆಚ್ಚು ಪರಿಣಾಮಕಾರಿ ಅನ್ನೋ ವರದಿಗಳು ಬರ್ತಿವೆ. ಹೀಗಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಲಸಿಕೆ ಖರೀದಿಗೆ ಅತಿ ಹೆಚ್ಚಿನ ಆಸಕ್ತಿ ತೋರಿಸ್ತಿವೆ. ಅಲ್ದೆ, ತಮ್ಮ ದೇಶದ ಎಲ್ಲ ಪ್ರಜೆಗಳಿಗೆ ಸಾಧ್ಯವಾದಷ್ಟು ಬೇಗ ಲಸಿಕೆ ನೀಡಲು ಸಾಧ್ಯವಾಗುವಂತೆ, ಲಸಿಕೆ ಪೂರೈಕೆಗೆ ಈ ಕಂಪನಿಗಳ ಜೊತೆಗೆ ಒಪ್ಪಂದಗಳನ್ನ ಮಾಡಿಕೊಳ್ತಿವೆ. ಇದಕ್ಕೆ ತದ್ವಿರುದ್ಧವಾಗಿ ಭಾರತದಲ್ಲಿ ಸಾಮೂಹಿಕವಾಗಿ ಲಸಿಕೆ ನೀಡಲ್ಲ ಅನ್ನೋ ಪರೋಕ್ಷ ಸಂದೇಶವನ್ನ ಕೇಂದ್ರ ಸರ್ಕಾರ ರವಾನಿಸಿದೆ.

ಸಾಮೂಹಿಕವಾಗಿ ಲಸಿಕೆ ನೀಡಲ್ಲ ಎಂದ ಕೇಂದ್ರ ಸರ್ಕಾರ!
ಇಡೀ ವಿಶ್ವದಲ್ಲಿ ಡೆಡ್ಲಿ ಕೊರೊನಾ ವೈರಸ್ ಅಬ್ಬರ ನಡೆಸ್ತಿದೆ. ಹೀಗಾಗಿ ಬಹುತೇಕ ಎಲ್ಲ ದೇಶಗಳು ಕೋವಿಡ್ ವ್ಯಾಕ್ಸಿನ್ ಪೂರೈಕೆ ಮಾಡಲು ಕಂಪನಿಗಳ ಜೊತೆ ಒಪ್ಪಂದಕ್ಕೆ ಮುಗಿಬಿದ್ದಿರೋದ್ರಿಂದ ಎಲ್ಲ ದೇಶಗಳಿಗೆ ಅಗತ್ಯವಾಗುವಷ್ಟು ಲಸಿಕೆ ಪೂರೈಸಲು ಕಂಪನಿಗಳಿಗೆ ಸಾಧ್ಯವಿಲ್ಲ. ಪ್ರಸ್ತುತ ಈಗಿರುವ ಪರಿಸ್ಥಿತಿಯಲ್ಲಿ ಎಲ್ಲ ದೇಶಗಳಿಗೆ ಲಸಿಕೆ ಪೂರೈಕೆ ಆರಂಭವಾಗೋದು ಏಪ್ರಿಲ್-ಮೇ ನಂತರ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ. ಈಗ ಲಸಿಕೆ ಕಂಡು ಹಿಡಿದು, ಅದಕ್ಕೆ ವಿವಿಧ ದೇಶಗಳ ಲಸಿಕೆ ನಿಯಂತ್ರಕರು ಅನುಮೋದನೆ ನೀಡಿದ್ರೂ. ಈ ತಿಂಗಳ ಅಂತ್ಯ ಅಥವಾ ಜನವರಿ ಬಳಿಕ ಉತ್ಪಾದನೆ ಆರಂಭವಾಗಲಿದೆ. ಇದನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ, ಸಾಮೂಹಿಕವಾಗಿ ಕೊರೊನಾ ಲಸಿಕೆ ನೀಡಲ್ಲ. ಬದಲಿಗೆ ಕೊರೊನಾದಿಂದ ಅತ್ಯಂತ ವಿಷಮ ಪರಿಸ್ಥಿತಿಯಲ್ಲಿರೋರಿಗೆ ಮಾತ್ರ ಲಸಿಕೆ ನೀಡುತ್ತೇವೆ ಅಂತಾ ಹೇಳಿದೆ. ಇವರಿಗೆ ಲಸಿಕೆ ನೀಡಿದ್ರೆ, ಕೊರೊನಾ ಚೈನ್​ ಲಿಂಕ್ ಬ್ರೇಕ್ ಮಾಡಬಹುದು ಅಂತಾ ಕೇಂದ್ರ ಸರ್ಕಾರ ಹೇಳಿದೆ.

ಕೊರೊನಾ ಲಸಿಕೆ ಬಂದರೂ ‘ಮಾಸ್ಕ್’ಧಾರಣೆ ಕಡ್ಡಾಯ!
ದೇಶದಲ್ಲಿ ಕೊರೊನಾ ಲಸಿಕೆ ಮಾರುಕಟ್ಟೆಗೆ ಬಂದರೂ, ತೀರಾ ವಿಷಮ ಪರಿಸ್ಥಿತಿಯಲ್ಲಿರುವವರಿಗೆ ಸರ್ಕಾರವೇ ಉಚಿತವಾಗಿ ಲಸಿಕೆ ನೀಡಲಿದೆ. ಆದ್ರೆ, ಗುಣಲಕ್ಷಣ ಕಂಡು ಬರದ ಸೋಂಕಿತರು, ಅವಶ್ಯವಿದ್ರೆ ದುಡ್ಡು ಕೊಟ್ಟು ಲಸಿಕೆ ಕೊಂಡುಕೊಳ್ಳಬೇಕು ಅಂತಾ ಕೇಂದ್ರ ಸರ್ಕಾರ ಹೇಳಿದೆ. ಅಲ್ದೆ, ಲಸಿಕೆ ಬಂದ ತಕ್ಷಣ ಕೊರೊನಾ ಹೊರಟು ಹೋಗುತ್ತೆ ಅಂತಾ ಅಲ್ಲ. ಬದಲಿಗೆ ಜನ ಎಚ್ಚರಿಕೆಯಿಂದ ಇರಬೇಕು. ಈಗಿನಂತೆ ಲಸಿಕೆ ಬಂದ ಮೇಲೂ ಮಾಸ್ಕ್ ಧಾರಣೆ ಮಾಡಬೇಕು. ಇಲ್ಲದೇ ಹೋದ್ರೆ, ಮಹಾಮಾರಿಗೆ ಕಡಿವಾಣ ಹಾಕೋದು ಕಷ್ಟ ಅಂತಾ ಕೇಂದ್ರ ಸರ್ಕಾರ ಹೇಳಿದೆ.

ಕೊರೊನಾ ಸ್ವಯಂಸೇವಕನ ವಾದ ತಳ್ಳಿಹಾಕಿದ ಸೆರಂ ಸಂಸ್ಥೆ!
ಆಕ್ಸ್​ಫರ್ಡ್​ ವಿವಿ ಮತ್ತು ಆಸ್ಟ್ರಾಜೆನೆಕಾ ಸಹಯೋಗದಲ್ಲಿ ತಯಾರಿಸುತ್ತಿರುವ ಕೊವಿಶೀಲ್ಡ್ ಲಸಿಕೆಯನ್ನ ಭಾರತದಲ್ಲಿ ಮಾನವರ ಮೇಲೆ ಪ್ರಯೋಗ ಮಾಡ್ತಿದ್ರು. ಈ ರೀತಿ ಸ್ವಯಂಪ್ರೇರಿತನಾಗಿ ಪ್ರಯೋಗಕ್ಕೆ ಒಳಗಾಗಿದ್ದ ಚೆನ್ನೈನ ವ್ಯಕ್ತಿಯೊಬ್ಬ, ತಾನು ಲಸಿಕೆ ಪಡೆದ ಮೇಲೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದೆ ಅಂತಾ ಆರೋಪಿಸಿದ್ದ. ಅಲ್ದೆ, 5 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದ. ಈ ಕುರಿತು ಪ್ರತಿಕ್ರಿಯಿಸಿರೋ ಸೆರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ, ಆ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಲು ಲಸಿಕೆ ಕಾರಣವಲ್ಲ. ಅದಕ್ಕೆ ಬೇರೆ ಕಾರಣಗಳಿವೆ. ಹೀಗಾಗಿ ಭಾರತದಲ್ಲಿ ಕೊವಿಶೀಲ್ಡ್ 3ನೇ ಹಂತದ ಪ್ರಯೋಗಕ್ಕೆ ತಡೆ ನೀಡಲ್ಲ. ಬದಲಿಗೆ ಮೂರನೇ ಹಂತದ ಪ್ರಯೋಗಕ್ಕೆ ಅನುಮತಿ ನೀಡಿದ್ದೇವೆ ಅಂತಾ ಹೇಳಿದೆ.

ವಿಶ್ವದಲ್ಲಿ ಕೊರೊನಾಗೆ ಲಸಿಕೆ ಕಂಡು ಹಿಡಿದ್ರೂ.. ಭಾರತದಲ್ಲಿ ಎಲ್ಲರಿಗೂ ಲಸಿಕೆ ಸಿಗಲ್ಲ ಅನ್ನೋದನ್ನ ಸರ್ಕಾರ ಪರೋಕ್ಷವಾಗಿ ಹೇಳಿದೆ. ಈ ಮೂಲಕ ದೇಶದ ಎಲ್ಲರಿಗೂ ಲಸಿಕೆ ನೀಡಲು ಸಿದ್ಧ ಅಂತಾ ಹೇಳ್ತಿದ್ದ ಕೇಂದ್ರ ಸರ್ಕಾರ, ಈಗ ಉಲ್ಟಾ ಹೊಡೆದಿದೆ. ಹೀಗಾಗಿ ಭಾರತದಲ್ಲಿ ಕೊರೊನಾ ಸದ್ಯಕ್ಕೆ ನಿಯಂತ್ರಣಕ್ಕೆ ತರುವ ಸಾಧ್ಯತೆ ಇದೆಯೇ ಹೊರತು ಸಂಪೂರ್ಣ ತೊಲಗಿಸಲು ಸಾಧ್ಯವಿಲ್ಲ ಅನ್ನೋ ಪರೋಕ್ಷ ಸಂದೇಶ ದೇಶದ ಜನರಿಗೆ ಸಿಕ್ಕಿದೆ.