ಮತ್ತೊಮ್ಮೆ ಮಾತುಕತೆ ನಡೆಸೋಣ: ಚಳವಳಿ ನಿರತರಿಗೆ ಪತ್ರ ಬರೆದ ಕೃಷಿ ಸಚಿವಾಲಯ

| Updated By: Team Veegam

Updated on: Dec 21, 2020 | 6:06 PM

ನಿಮ್ಮ ಹಿತಾಸಕ್ತಿಗಳ ಬಗ್ಗೆ ನೀವು ತಿಳಿಸಿದ ದಿನವೇ ವಿಜ್ಞಾನ ಭವನದಲ್ಲಿ ಚರ್ಚಿಸೋಣ, ದಯವಿಟ್ಟು ನಿಮಗೆ ಒಪ್ಪಿತವಾದ ದಿನಾಂಕವನ್ನು ತಿಳಿಸಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಮತ್ತೊಮ್ಮೆ ಮಾತುಕತೆ ನಡೆಸೋಣ: ಚಳವಳಿ ನಿರತರಿಗೆ ಪತ್ರ ಬರೆದ ಕೃಷಿ ಸಚಿವಾಲಯ
ಪ್ರತಿಭಟನಾ ನಿರತ ರೈತರು (ಪಿಟಿಐ ಚಿತ್ರ)
Follow us on

ದೆಹಲಿ: ‘ನೀವು ಸೂಚಿಸಿದ ದಿನವೇ ಮಾತುಕತೆ ನಡೆಸೋಣ’ ಎಂಬ ಉಲ್ಲೇಖಿವಿರುವ ಪತ್ರವನ್ನು ಕೇಂದ್ರ ಕೃಷಿ ಸಚಿವಾಲಯ ದೆಹಲಿ ಚಲೋ ಚಳವಳಿ ನಡೆಸುತ್ತಿರುವ ರೈತ ಮುಖಂಡ ದರ್ಶನ್ ಪಾಲ್ ಅವರಿಗೆ ಸೋಮವಾರ ರವಾನಿಸಿದೆ.

ನಿಮ್ಮ ಹಿತಾಸಕ್ತಿಗಳ ಬಗ್ಗೆ ನೀವು ತಿಳಿಸಿದ ದಿನವೇ ವಿಜ್ಞಾನ ಭವನದಲ್ಲಿ ಚರ್ಚಿಸೋಣ, ದಯವಿಟ್ಟು ನಿಮಗೆ ಒಪ್ಪಿತವಾದ ದಿನಾಂಕವನ್ನು ತಿಳಿಸಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ. ಅಲ್ಲದೇ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಒಂದೆರಡು ದಿನಗಳಲ್ಲಿ ಚಳವಳಿ ನಿರತರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಎರಡು ದಿನಗಳ ಪಶ್ಚಿಮ ಬಂಗಾಳ ಭೇಟಿಯ ವೇಳೆ ಪತ್ರಕರ್ತರನ್ನುದ್ದೇಶಿಸಿ ಅವರು ಈ ವಿಷಯ ತಿಳಿಸಿದ್ದಾರೆ.

ರೈತರಿಂದ ಉಪವಾಸ ಸತ್ಯಾಗ್ರಹ
ಇತ್ತ, ಪಂಜಾಬ್ ರೈತರು ಮತ್ತೊಮ್ಮೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸರದಿ ಪ್ರಕಾರ ಉಪವಾಸ ಸತ್ಯಾಗ್ರಹ ನಡೆಸಲಿದ್ದು, ಇಂದು 11 ರೈತರು ಉಪವಾಸ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಬೇಡಿಕೆಗಳನ್ನು ಈಡೇರಿಸುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಯಲಿದೆ ಎಂದು ರೈತ ಒಕ್ಕೂಟಗಳು ತಿಳಿಸಿವೆ.

‘ಕೆಲವು ರೈತ ಸಂಘಟನೆಗಳು ನೂತನ ಕೃಷಿ ಕಾಯ್ದೆಗೆ ಬೆಂಬಲ ಸೂಚಿಸಿವೆ. ಅಂತಹ ಸಂಘಟನೆಗಳ ನಾಯಕರನ್ನು ಭೇಟಿಯಾಗಿ ನೂತನ ಕೃಷಿ ಕಾಯ್ದೆಗಳಿಂದ ಅವರು ಪಡೆಯಲಿರುವ ಲಾಭವಾದರೂ ಏನು, ಕೃಷಿ ಕಾಯ್ದೆಗಳು ಕೃಷಿಕರಿಗೆ ಹೇಗೆ ತಾನೇ ಉಪಯೋಗವಾಗಬಲ್ಲವು ಎಂದು ಅರಿಯುತ್ತೇವೆ’ ಎಂದು ಭಾರತೀಯ ಕಿಸಾನ್ ಯೂನಿಯನ್​ನ ಮಾಧ್ಯಮ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ವಿಶೇಷ ಅಧಿವೇಶನ ಕರೆದ ಕೇರಳ
ಡಿಸೆಂಬರ್ 23ರಂದು ನೂತನ ಕೃಷಿ ಕಾಯ್ದೆಗಳ ಕುರಿತು ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ಕೇರಳ ಸರ್ಕಾರ ನಿರ್ಧರಿಸಿದೆ. ಕೇರಳ ಸರ್ಕಾರವು ರೈತರ ಹೋರಾಟಕ್ಕೆ ಬೆಂಬಲ ನೀಡಲಿದೆ. ವಿಶೇಷ ಅಧಿವೇಶನ ಕರೆಯುವ ಕುರಿತು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ ಎಂದು ಕೇರಳ ರಾಜ್ಯ ಸರ್ಕಾರ ತಿಳಿಸಿದೆ.

ಮಹಾರಾಷ್ಟ್ರದ ನಾಸಿಕ್​ನಿಂದ ಸಾವಿರಾರು ರೈತರು ದೆಹಲಿ ಚಲೋ ಕೂಡಿಕೊಳ್ಳಲು ಹೊರಟಿದ್ದಾರೆ. ಮಹಾರಾಷ್ಟ್ರದ 21 ಜಿಲ್ಲೆಗಳ ರೈತರ ಮೆರವಣಿಗೆಯ ನೇತೃತ್ವವನ್ನು ಇಂಡಿಯನ್ ಕಿಸಾನ್ ಸಭಾ ವಹಿಸಿದೆ.

Inside Story ದೆಹಲಿ ಚಲೋ ರೈತ ಚಳವಳಿಯ ಪರ-ವಿರೋಧ ಚರ್ಚೆಯ ತಿರುಳೇನು?

Published On - 5:54 pm, Mon, 21 December 20