‘ಭಾರತ್​ ಸರಣಿ’ಯಲ್ಲಿ ವಾಹನ ನೋಂದಣಿ; ಕೇಂದ್ರ ಸರ್ಕಾರ ಪರಿಚಯಿಸಿದ ನೂತನ ಪದ್ಧತಿಯ ಸಮಗ್ರ ವಿವರ ಇಲ್ಲಿದೆ

| Updated By: Lakshmi Hegde

Updated on: Aug 29, 2021 | 4:13 PM

BH Registration: ಸದ್ಯ ಭಾರತ್​ ಸರಣಿ (BH-Series) ನೋಂದಣಿ ಸೌಲಭ್ಯ ಸ್ವಯಂಪ್ರೇರಿತವಾಗಿದ್ದು, ಕಡ್ಡಾಯ ಮಾಡಿಲ್ಲ. ಸೆಪ್ಟೆಂಬರ್​ 15ರಿಂದ ಇದು ಪ್ರಾರಂಭವಾಗಲಿದೆ ಎನ್ನಲಾಗಿದೆ.

‘ಭಾರತ್​ ಸರಣಿ’ಯಲ್ಲಿ ವಾಹನ ನೋಂದಣಿ; ಕೇಂದ್ರ ಸರ್ಕಾರ ಪರಿಚಯಿಸಿದ ನೂತನ ಪದ್ಧತಿಯ ಸಮಗ್ರ ವಿವರ ಇಲ್ಲಿದೆ
ಸಾಂಕೇತಿಕ ಚಿತ್ರ
Follow us on

ಹೊಸ ವಾಹನಗಳಿಗೆ ನೂತನ ಮಾದರಿಯ ನೋಂದಣಿ ಪದ್ಧತಿ (Vehicles Registration)ಯನ್ನು ಪರಿಚಯಿಸಲಾಗುವುದು ಎಂದು ಕೇಂದ್ರ ಸರ್ಕಾರ ನಿನ್ನೆ (ಆಗಸ್ಟ್​ 28) ಹೇಳಿದೆ. ಅದು ಭಾರತ್​ ಸರಣಿ (ಬಿಎಚ್​ ಸೀರಿಸ್​-BH-Series)ನೋಂದಣಿ ಪದ್ಧತಿಯಾಗಿದ್ದು, ಇದರಿಂದ ವಾಹನ ಮಾಲೀಕರಿಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನ ವರ್ಗಾವಣೆ ಮಾಡುವಾಗ ತುಂಬ ಅನುಕೂಲವಾಗುತ್ತದೆ ಎಂದು ಕೇಂದ್ರ ರಸ್ತೆ ಸಂಚಾರ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. ಈ ಸರಣಿ ಪದ್ಧತಿ ಅನ್ವಯ ಆಗುವ ವಾಹನ ಮಾಲೀಕರು ಈ ಭಾರತ್​ ಸರಣಿಯಡಿ ತಮ್ಮ ವಾಹನವನ್ನು ನೋಂದಣಿ ಮಾಡಿಕೊಂಡರೆ, ಅವರು ಇನ್ನೊಂದು ರಾಜ್ಯಕ್ಕೆ ಹೋಗಿ ವಾಸ್ತವ್ಯ ಹೂಡಬೇಕಾಗಿ ಬಂದಾಗ ಅಲ್ಲಿ ಮರು ನೋಂದಣಿ ಮಾಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ.

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಸ್ತವ್ಯ ಬದಲಿಸುವಾಗ ಜತೆಗೆ ತಮ್ಮ ವಾಹನವನ್ನು ತೆಗೆದುಕೊಂಡು ಹೋಗುವುದು ಅನಿವಾರ್ಯವಾಗುತ್ತದೆ. ಹಾಗೇ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನಗಳನ್ನು (ಕಾರು, ಬೈಕ್​ ಅಥವಾ ಇನ್ಯಾವುದೇ ವಾಹನ) ತೆಗೆದುಕೊಂಡು ಹೋದಾಗ, ಅಲ್ಲಿ ಮರು ನೋಂದಣಿ ಅಗತ್ಯವಿರುತ್ತದೆ. ಅದೂ ಕೂಡ ವಿಳಂಬವಾಗಿ, ನಿಧಾನವಾಗಿ ನಡೆಯುವ ಪ್ರಕ್ರಿಯೆಯಾಗಿದ್ದರಿಂದ ಸಹಜವಾಗಿಯೇ ತೊಡಕು. ಆದರೆ ಈಗ ಕೇಂದ್ರ ಸರ್ಕಾರ ಭಾರತ್​ ಸರಣಿಯ ನೋಂದಣಿ ಪದ್ಧತಿ ಪರಿಚಯಿಸಿದ್ದರಿಂದ ಆ ಸಮಸ್ಯೆಯಿಂದ ಮುಕ್ತಿಸಿಗಲಿದೆ.

ಬಿಎಚ್​ ಸೀರಿಸ್​ ಹೊರತಾದ ನೋಂದಣಿ ಪ್ರಕ್ರಿಯೆ ಹೇಗಿತ್ತು?
1.ಇಷ್ಟು ದಿನ ಬಿಎಚ್​ ಸರಣಿ ನೋಂದಣಿ ಪ್ರಕ್ರಿಯೆ ಇರಲಿಲ್ಲ. ಹೀಗಾಗಿ ಯಾವುದೇ ವಾಹನ ಮಾಲೀಕರು ತಮ್ಮ ವಾಹನದೊಟ್ಟಿಗೆ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರ ಆದಾಗ, ಮೂಲ ರಾಜ್ಯ ಅಂದರೆ ಮೊದಲಿದ್ದ ರಾಜ್ಯದದಿಂದ ‘ಆಕ್ಷೇಪಣೆ ಇಲ್ಲ’ (No Objection Certificate (NoC) ಪ್ರಮಾಣ ಪತ್ರ ಬೇಕಾಗುತ್ತದೆ. ಈ ಪ್ರಮಾಣಪತ್ರ ಒದಗಿಸಿದರೆ ಮಾತ್ರ, ಹೋದ ರಾಜ್ಯದಲ್ಲಿ ವಾಹನ ಮರು ನೋಂದಣಿ ಆಗುತ್ತಿತ್ತು.
2. ಅದಾದ ಮೇಲೆ ಹೊಸ ರಾಜ್ಯದಲ್ಲಿ ಹೊಸ ನೋಂದಣಿ ಗುರುತು ಪಡೆಯಲು, ಮಾಲೀಕರು ಅಲ್ಲಿನ Pro-Rata ಆಧಾರದ ಮೇಲೆ ರಸ್ತೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
3. ನಂತರ ಮೂಲ ರಾಜ್ಯದಲ್ಲಿ, ರಸ್ತೆ ತೆರಿಗೆ ಮರುಪಾವತಿಗಾಗಿ ಮಾಲೀಕರು ಅರ್ಜಿ ಸಲ್ಲಿಸಬೇಕು. ಇದು ತುಂಬ ನಿಧಾನಗತಿಯ ಪ್ರಕ್ರಿಯೆಯಾಗಿದ್ದು, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬೇರೆಬೇರೆ ವಿಧದಲ್ಲಿ ಇರುತ್ತದೆ. ಅದೆಲ್ಲಕ್ಕೂ ಮಿಗಿಲಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬಂದು 12 ತಿಂಗಳೊಳಗೆ ವಾಹನ ನೋಂದಣಿ ಸಂಖ್ಯೆಯನ್ನು ಬದಲಿಸಿಕೊಳ್ಳಬೇಕಿತ್ತು.

ಬಿಚ್​ ಸರಣಿ ನೋಂದಣಿ ಹೇಗೆ ಸಹಕಾರಿ?
ಇದೀಗ ಕೇಂದ್ರ ಸರ್ಕಾರ ಪರಿಚಯಿಸಿರುವ ಭಾರತ್​ ಸರಣಿ ನೋಂದಣಿ ಪದ್ಧತಿಯಲ್ಲಿ, ವಾಹನ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಹೋದಾಗ ಅಲ್ಲಿ ಮರು ನೋಂದಣಿ ಅಗತ್ಯವಿರುವುದಿಲ್ಲ.

ಭಾರತ್​ ಸರಣಿ ಸೌಲಭ್ಯ ಯಾರಿಗೆ ಸಿಗಲಿದೆ?
ಸದ್ಯ ಭಾರತ್​ ಸರಣಿ (BH-Series) ನೋಂದಣಿ ಸೌಲಭ್ಯ ಸ್ವಯಂಪ್ರೇರಿತವಾಗಿದ್ದು, ಕಡ್ಡಾಯ ಮಾಡಿಲ್ಲ. ಸೆಪ್ಟೆಂಬರ್​ 15ರಿಂದ ಇದು ಪ್ರಾರಂಭವಾಗಲಿದೆ ಎನ್ನಲಾಗಿದೆ. ಇದೀಗ, ರಕ್ಷಣಾ ಸಿಬ್ಬಂದಿ, ಕೇಂದ್ರ ಸರ್ಕಾರಿ, ರಾಜ್ಯ ಸರ್ಕಾರಿ, ಕೇಂದ್ರ ಮತ್ತು ರಾಜ್ಯ ಸಾರ್ವಜನಿಕ ವಲಯಗಳಲ್ಲಿ ಕೆಲಸ ಮಾಡುವವರು ಮತ್ತು ನಾಲ್ಕು ಅಥವಾ ಅದಕ್ಕಿಂತಲೂ ಹೆಚ್ಚು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಖೆಗಳನ್ನು ಹೊಂದಿರುವ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸ್ವಯಂ ಪ್ರೇರಿತಾಗಿ ಈ ಬಿಎಚ್​ ಸರಣಿ ನೋಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು.

ತೆರಿಗೆ ಪದ್ಧತಿ ವಿವರ
ಬಿಎಚ್​ ಸರಣಿ ಪದ್ಧತಿಯಲ್ಲಿ ನೋಂದಣಿ ಮಾಡಿಕೊಂಡ ವಾಹನ ಮಾಲೀಕರಿಗೆ, ಆಯಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಆಯಾ ವಾಹನಗಳ ಮೌಲ್ಯಗಳ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. 10 ಲಕ್ಷ ರೂ.ಮೌಲ್ಯದವರೆಗಿನ ವಾಹನಗಳಿಗೆ ಶೇ.8, 10-20 ಲಕ್ಷ ರೂ.ವರೆಗಿನ ಮೌಲ್ಯದ ವಾಹನಗಳಿಗೆ ಶೇ.10 ಮತ್ತು 20 ಲಕ್ಷಕ್ಕೂ ಅಧಿಕ ಮೌಲ್ಯದ ವಾಹನಗಳಾದರೆ ಶೇ.12ರಷ್ಟು ವಾಹನ ತೆರಿಗೆ ವಿಧಿಸಲಾಗುತ್ತದೆ. ಇನ್ನು ರಸ್ತೆ ತೆರಿಗೆಯಲ್ಲೂ ನಿಯಮ ಸಡಿಲಿಕೆ ಮಾಡಲಾಗಿದ್ದು, ತೆರಿಗೆ ಪಾವತಿಗೆ ಎರಡು ವರ್ಷ ಸಮಯ ಇರುತ್ತದೆ.

ಬಿಎಚ್​ ಸರಣಿ ನಂಬರ್​ ಹೇಗಿರುತ್ತದೆ?
ಭಾರತ್ ಸರಣಿ ನೋಂದಣಿಯಲ್ಲಿ ನಂಬರ್ ಪ್ಲೇಟ್​ನಲ್ಲಿ YY BH #### XX YY ಮಾದರಿಯಲ್ಲಿ ಸಂಖ್ಯೆ ಇರುತ್ತದೆ. ಇಲ್ಲಿ YY ಅಂದರೆ ಮೊದಲ ನೋಂದಣಿಯ ವರ್ಷ. ಬಿಎಚ್​ ಎಂದರೆ ಭಾರತ್​ ಸರಣಿಯ ಕೋಡ್​. #### ಎಂದರೆ 0000 ದಿಂದ 9999ರವರೆಗಿನ ಯಾವುದೇ ನಂಬರ್​ ಮತ್ತು XX-AA ದಿಂದ ZZ ವರೆಗಿನ ಅಕ್ಷರಗಳು.

ಇದನ್ನೂ ಓದಿ: ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ; ಮತದಾರರ ಪಟ್ಟಿಯಲ್ಲಿ ತಮ್ಮನ್ನು ಸೇರಿಸಿಲ್ಲವೆಂದು ಸ್ಥಳೀಯ 1,540 ನಿವಾಸಿಗಳಿಂದ ಪ್ರತಿಭಟನೆ

ರಾಜ್​ಕುಮಾರ್​ ಸಿನಿಮಾ ಟೈಟಲ್​ ಮರುಬಳಕೆಗೆ ಶೀಘ್ರವೇ ಬೀಳಲಿದೆ ಬ್ರೇಕ್​?