ಮೇ 1ರಿಂದ ಮೂರನೇ ಹಂತದ ಕೊವಿಡ್​ ಲಸಿಕೆ ಅಭಿಯಾನ; ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಈ ಸಲಹೆಗಳ ಜತೆ ಸದ್ಯ ಹೆಚ್ಚುತ್ತಿರುವ ಕೊರೊನಾ ವೈರಸ್​ ವಿರುದ್ಧ ಹೋರಾಡಲು ಆಸ್ಪತ್ರೆಗಳಲ್ಲಿ ವ್ಯವಸ್ಥೆಗಳನ್ನು ಸುಧಾರಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ತಿಳಿಸಿದೆ.

ಮೇ 1ರಿಂದ ಮೂರನೇ ಹಂತದ ಕೊವಿಡ್​ ಲಸಿಕೆ ಅಭಿಯಾನ; ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ಪ್ರಾತಿನಿಧಿಕ ಚಿತ್ರ

Updated on: Apr 24, 2021 | 7:44 PM

ದೆಹಲಿ: ದೇಶದಲ್ಲಿ ಮೇ 1ರಿಂದ ಮೂರನೇ ಹಂತದ ಕೊವಿಡ್​ -19 ಲಸಿಕೆ ಅಭಿಯಾನ ಶುರುವಾಗಲಿದ್ದು, ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಇಂದು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. 18ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹೇಳಿದ್ದು, ಎಲ್ಲ ವಯಸ್ಸಿನವರಿಗೂ ಲಸಿಕೆ ಪಡೆಯಲು ಅವಕಾಶ ನೀಡಿದ ಮೊದಲ ದೇಶ ಭಾರತವಾಗಿದೆ. ಹಾಗೇ ಮೇ 1ರಿಂದ ದೊಡ್ಡಮಟ್ಟದಲ್ಲಿ ಲಸಿಕೆ ಅಭಿಯಾನ ಶುರುವಾಗುತ್ತಿರುವುದರಿಂದ, ಲಸಿಕೆ ಉತ್ಪಾದನಾ ಕಂಪನಿಗಳು ಶೇ.50ರಷ್ಟನ್ನು ಮುಕ್ತಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇಲ್ಲಿದೆ ನೋಡಿ ಮೂರನೇ ಹಂತದ ಲಸಿಕಾ ಅಭಿಯಾನಕ್ಕಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೀಡಿರುವ ಸಲಹೆಗಳು:

  • ಖಾಸಗಿ ಆಸ್ಪತ್ರೆಗಳು, ಕೈಗಾರಿಕಾ ಆಸ್ಪತ್ರೆಗಳು, ಕೈಗಾರಿಕಾ ಸಂಸ್ಥೆಗಳೊಂದಿಗೆ ಸೇರಿ,ಮಿಷನ್ ಮೋಡ್​​ನಲ್ಲಿ ಹೆಚ್ಚೆಚ್ಚು ಖಾಸಗಿ ಲಸಿಕಾ ಕೇಂದ್ರಗಳನ್ನು ನೋಂದಣಿ ಮಾಡಬೇಕು. ಕೊರೊನಾ ಲಸಿಕೆ ವಿತರಣೆ ಪ್ರಕ್ರಿಯೆಯಲ್ಲಿ ಅನುಮೋದಿತ ಆಡಳಿತದೊಂದಿಗೆ ಸಮನ್ವಯ ಸಾಧಿಸಬೇಕು.ತಮ್ಮಲ್ಲಿ ಲಭ್ಯ ಇರುವ ಲಸಿಕೆಗಳ ಡೋಸ್​, ಅದರ ಬೆಲೆಯನ್ನು ಕೊವಿನ್ ಆ್ಯಪ್​​ನಲ್ಲಿ ಘೋಷಿಸಿರುವ ಆಸ್ಪತ್ರೆಗಳನ್ನು ಮೇಲ್ವಿಚಾರಣೆ ಮಾಡಬೇಕು.
  • ಲಸಿಕೆ ಉತ್ಪಾದಕರಿಂದ ನೇರವಾಗಿ ಖರೀದಿಸುವ ನಿರ್ಧಾರಕ್ಕೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಆದ್ಯತೆ ನೀಡಬೇಕು.
  • ಕೊರೊನಾ ಲಸಿಕೆ ವಿತರಣಾ ಕೇಂದ್ರದ ಬಳಿ ಹೆಚ್ಚೆಚ್ಚು ನೂಕುನುಗ್ಗಲು ಆಗದಂತೆ ತಪ್ಪಿಸಲು, ಲಾ ಆ್ಯಂಡ್ ಆರ್ಡರ್​ ವ್ಯವಸ್ಥೆಯನ್ನು ಸರಿಯಾಗಿ ಇಡಬೇಕು. ರಕ್ಷಣಾ ಇಲಾಖೆ ಜತೆ ಸಮನ್ವಯ ಇರಬೇಕು.
  • 18-45 ವರ್ಷದವರು ಆನ್​ಲೈನ್ ಮೂಲಕವೇ ನೋಂದಣಿ ಮಾಡಿಕೊಳ್ಳಲು ಸರ್ಕಾರಗಳು ಹೆಚ್ಚೆಚ್ಚು ಪ್ರೇರೇಪಿಸಬೇಕು.
  • ಲಸಿಕೆ ನೀಡುವ ಬಗ್ಗೆ, ಲಸಿಕೆ ನೀಡಿದ ನಂತರ ಉಂಟಾಗಬಹುದಾದ ಸಮಸ್ಯೆಗಳ ನಿರ್ವಹಣೆ, ಕೊವಿನ್​ ಬಳಕೆ ಕುರಿತು ಕೊವಿಡ್​ ಲಸಿಕಾ ಕೇಂದ್ರದ ಎಲ್ಲ ಸಿಬ್ಬಂದಿಗೂ ಸೂಕ್ತ ತರಬೇತಿ ನೀಡಬೇಕು.

ಈ ಸಲಹೆಗಳ ಜತೆ ಸದ್ಯ ಹೆಚ್ಚುತ್ತಿರುವ ಕೊರೊನಾ ವೈರಸ್​ ವಿರುದ್ಧ ಹೋರಾಡಲು ಆಸ್ಪತ್ರೆಗಳಲ್ಲಿ ವ್ಯವಸ್ಥೆಗಳನ್ನು ಸುಧಾರಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ತಿಳಿಸಿದೆ. ಬೆಡ್, ಆಕ್ಸಿಜನ್​ ಅಭಾವ ನಿಯಂತ್ರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ.

ಇದನ್ನೂ ಓದಿ: ಕರ್ಫ್ಯೂ ನಿಯಮ ಉಲ್ಲಂಘಿಸಿ ತೆರಳುತ್ತಿದ್ದ ನಟ ಮಂಡ್ಯ ರಮೇಶ್​ರನ್ನು ಪ್ರಶ್ನಿಸಿದ ಪೊಲೀಸ್