ದೆಹಲಿ: ಛತ್ತೀಸ್‌ಗಢದ (Chhattisgarh) ಅಧಿಕಾರಿಯೊಬ್ಬರ ದುಬಾರಿ ಫೋನ್ ಜಲಾಶಯಕ್ಕೆ ಬಿದ್ದಿತ್ತು. ಅದನ್ನು ಹೊರ ತೆಗೆಯಲು ಜಲಾಶಯದಿಂದ (Reservoir) 21 ಲಕ್ಷ ಲೀಟರ್ ನೀರನ್ನು ಪಂಪ್ ಮಾಡಿ ಹೊರತೆಗೆದ ಆರೋಪದ ಮೇಲೆ ಸರ್ಕಾರಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ನೀರು “ಬಳಕೆಗೆ ಯೋಗ್ಯವಾಗಿಲ್ಲ” ಎಂದು ಹೇಳಿ ಆ ಅಧಿಕಾರಿ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದಿದ್ದರು. ಕಂಕೇರ್ ಜಿಲ್ಲೆಯ ಕೊಯಿಲಿಬೀಡ ಬ್ಲಾಕ್‌ನ ಆಹಾರ ಅಧಿಕಾರಿ ರಾಜೇಶ್ ವಿಶ್ವಾಸ್, ಖೇರ್ಕಟ್ಟಾ ಅಣೆಕಟ್ಟಿನಲ್ಲಿ(Kherkatta Dam) ರಜೆಯನ್ನು ಆನಂದಿಸುತ್ತಿದ್ದಾಗ ಆಕಸ್ಮಿಕವಾಗಿ ಅವರ ₹ 1 ಲಕ್ಷ ಮೌಲ್ಯದ ಸ್ಮಾರ್ಟ್‌ಫೋನ್ ಜಲಾಶಯಕ್ಕೆ ಬಿದ್ದಿತ್ತು. ಅದು 15 ಅಡಿ ಆಳದ ನೀರಿನಲ್ಲಿ ಬಿದ್ದಿದ್ದು, ಸ್ಥಳೀಯರು ಅದನ್ನು ಹುಡುಕಲು ಪ್ರಯತ್ನಿಸಿದರು. ಪ್ರಯತ್ನ ವಿಫಲವಾದಾಗ, ಅಧಿಕಾರಿ ಮೂರು ದಿನಗಳ ಕಾಲ ನಿರಂತರವಾಗಿ ಎರಡು 30 ಎಚ್‌ಪಿ ಡೀಸೆಲ್ ಪಂಪ್‌ಗಳನ್ನು ಬಳಸಿ ನೀರು ಖಾಲಿ ಮಾಡಿದ್ದಾರೆ. ಹೀಗೆ ಅವರು ಖಾಲಿಮಾಡಿದ್ದು 21 ಲಕ್ಷ ಲೀಟರ್ ನೀರು. ಅಂದರೆ ಇಷ್ಟೊಂದು ನೀರ 1,500 ಎಕರೆ ಕೃಷಿ ಭೂಮಿಗೆ ನೀರುಣಿಸಲು ಸಾಕುತ್ತಿತ್ತು.
ಸೋಮವಾರ ಸಂಜೆಯಿಂದ ಪಂಪ್ ಮಾಡಲು ಶುರು ಮಾಡಿದ್ದು ಗುರುವಾರದವರೆಗೆ ನೀರು ಬತ್ತಿಸುವ ಕಾರ್ಯ ನಡೆದಿತ್ತು, ದೂರಿನ ಮೇರೆಗೆ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಯನ್ನು ನಿಲ್ಲಿಸಿದರು. ಆದರೆ, ನೀರು ನಿಲ್ಲಿಸುವಷ್ಟರಲ್ಲಿ ಆರು ಅಡಿಗಳಷ್ಟು ನೀರು ಕಡಿಮೆಯಾಗಿತ್ತು. ಸರಿಸುಮಾರು 21 ಲಕ್ಷ ಲೀಟರ್ ಪಂಪ್ ಮಾಡಲಾಗಿದೆ. ಈ ಪ್ರದೇಶವು ಬೇಸಿಗೆಯಲ್ಲಿಯೂ ಸಹ 10 ಅಡಿ ಆಳದ ನೀರನ್ನು ಹೊಂದಿದ್ದು, ಪ್ರಾಣಿಗಳು ಇದನ್ನು ಹೆಚ್ಚಾಗಿ ಕುಡಿಯುತ್ತವೆ.
ಸೆಲ್ಫಿ ತೆಗೆದುಕೊಳ್ಳುವಾಗ ಫೋನ್ ಕೈಯಿಂದ ಜಾರಿದೆ. ಅದರಲ್ಲಿ ಅಧಿಕೃತ ಇಲಾಖೆಯ ಡೇಟಾ ಇದ್ದ ಕಾರಣ ಅದನ್ನು ಮರಳಿ ಪಡೆಯಬೇಕಾಯಿತು ಎಂದು ರಾಜೇಶ್ ವಿಶ್ವಾಸ್ ಹೇಳಿದ್ದಾರೆ. ಮುಳುಗುಗಾರರು ಅದನ್ನು ಪತ್ತೆಹಚ್ಚಲು ಪ್ರಯತ್ನಿಸಿದರು, ಆದರೆ ಮೇಲ್ಮೈ ಕಲ್ಲಿನಿಂದಾಗಿ ಅದು ಸಾಧ್ಯವಾಗಲಿಲ್ಲ. ಜಲಸಂಪನ್ಮೂಲ ಇಲಾಖೆಯ ಅಧಿಕಾರಿಯೊಬ್ಬರು ನೀರನ್ನು ಯಾವುದಕ್ಕೂ ಬಳಸುವುದಿಲ್ಲ ಎಂದು ಹೇಳಿದರು. ಹಾಗಾಗಿ ನೀರನ್ನು ಖಾಲಿ ಮಾಡಿದೆ ಎಂದಿದ್ದಾರೆ ಅವರು.
ನಾನು ನನ್ನ ಬಿಡುವಿನ ದಿನದಲ್ಲಿ ಸ್ನಾನ ಮಾಡಲು ಕೆಲವು ಸ್ನೇಹಿತರೊಂದಿಗೆ ಭಾನುವಾರ ಅಣೆಕಟ್ಟಿಗೆ ಹೋಗಿದ್ದೆ. ನನ್ನ ಫೋನ್ ಓವರ್‌ಫ್ಲೋ ಟ್ಯಾಂಕರ್‌ಗಳಿಗೆ ಜಾರಿದೆ, ಅದರ ನೀರು ಬಳಕೆಗೆ ಯೋಗ್ಯವಾಗಿಲ್ಲ. ಅದು 10 ಅಡಿ ಆಳವಾಗಿತ್ತು. ಸ್ಥಳೀಯರು ಅದನ್ನು ಹುಡುಕಲು ಪ್ರಯತ್ನಿಸಿದರು ಆದರೆ ವಿಫಲರಾದರು. ಎರಡು-ಮೂರು ಅಡಿ ಕಡಿಮೆ ನೀರು ಇದ್ದರೆ ಖಂಡಿತಾ ಸಿಗಬಹುದು ಎಂದು ಹೇಳಿದರು. ನಾನು ಎಸ್‌ಡಿಒಗೆ ಕರೆ ಮಾಡಿ ಯಾವುದೇ ತೊಂದರೆಯಿಲ್ಲದಿದ್ದರೆ ಹತ್ತಿರದ ಕಾಲುವೆಗೆ ಸ್ವಲ್ಪ ನೀರು ಹರಿಸಲು ಅವಕಾಶ ನೀಡುವಂತೆ ವಿನಂತಿಸಿದೆ. ಅದು ಆಗಲ್ಲ ಎಂದು ಅವರು ಹೇಳಿದರು. ಮೂರು-ನಾಲ್ಕು ಅಡಿ ಆಳದ ನೀರನ್ನು ಹರಿಸಿದರೆ ಸಮಸ್ಯೆ, ಮತ್ತು ವಾಸ್ತವವಾಗಿ ಹೆಚ್ಚು ನೀರು ಹೊಂದಿರುವ ರೈತರಿಗೆ ಪ್ರಯೋಜನವಾಗುತ್ತದೆ. ಅದಕ್ಕಾಗಿಯೇ ನಾನು ಸುಮಾರು ಮೂರು ಅಡಿಗಳಷ್ಟು ನೀರನ್ನು ಹರಿಸಲು ಸ್ಥಳೀಯರಿಂದ ಸಹಾಯವನ್ನು ಪಡೆದುಕೊಂಡೆ.ನನ್ನ ಫೋನ್ ಅನ್ನು ಮರಳಿ ಪಡೆದಿದ್ದೇನೆ ಎಂದಿದ್ದಾರೆ ವಿಶ್ವಾಸ್.
ಐದು ಅಡಿಗಳಷ್ಟು ನೀರನ್ನು ಹರಿಸುವುದನ್ನು ಒಪ್ಪಿಗೆ ಸಿಕ್ಕಿತ್ತು, ಆದರೆ ಅವರು ಇನ್ನೂ ಹೆಚ್ಚಿನ ನೀರು ಖಾಲಿ ಮಾಡಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಇಲಾಖೆ ಅಧಿಕಾರಿ ಹೇಳಿದ್ದಾರೆ.ಆಳವಾದ ನೀರಿನಲ್ಲಿ ಮೂರು ದಿನಗಳ ಬಿದ್ದಿದ್ದ ಕಾರಣ ಫೋನ್ ಕಾರ್ಯನಿರ್ವಹಿಸುತ್ತಿಲ್ಲ.
ಇದನ್ನೂ ಓದಿ: ಪುಸ್ತಕ, ಕಡತಗಳನ್ನು ತಡಕಾಡಿ ಸೆಂಗೋಲ್ ವಿವರಗಳನ್ನು ಪತ್ತೆ ಹಚ್ಚಲು ಮೋದಿ ಸರ್ಕಾರ ತೆಗೆದುಕೊಂಡಿದ್ದು 2 ವರ್ಷಗಳು!
ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ರಮಣ್ ಸಿಂಗ್, ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದು, ಸರ್ವಾಧಿಕಾರಿ ರಾಜ್ಯ ಸರ್ಕಾರದ ಅಡಿಯಲ್ಲಿ ಅಧಿಕಾರಿಗಳು ಈ ಪ್ರದೇಶವನ್ನು ತಮ್ಮ ಪೂರ್ವಜರ ಆಸ್ತಿ ಎಂದು ಪರಿಗಣಿಸುತ್ತಿದ್ದಾರೆ ಎಂದಿದ್ದಾರೆ.ವಿಪರೀತ ಬಿಸಿಲಿನಲ್ಲಿ ಜನರು ನೀರಿನ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಇಲ್ಲಿ ಅಧಿಕಾರಿಯೊಬ್ಬರು 21 ಲಕ್ಷ ಲೀಟರ್ ನೀರನ್ನು ಖಾಲಿ ಮಾಡುತ್ತಾರೆ ಎಂದು ಅವರು ಗುಡುಗಿದ್ದಾರೆ.
ಪತ್ರಕರ್ತರು ಪ್ರಶ್ನಿಸಿದಾಗ, ರಾಜ್ಯ ಕ್ಯಾಬಿನೆಟ್ ಸಚಿವ ಅಮರಜೀತ್ ಭಗತ್ ಅವರು ಘಟನೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಘಟನೆಯನ್ನು ನಾನು ಖಂಡಿತವಾಗಿ ಗಮನಿಸುತ್ತೇನೆ. ಸತ್ಯಾಸತ್ಯತೆಯ ಅರಿತ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ