ಹಿಂಸಾಚಾರಕ್ಕೆ ತಿರುಗಿದ ಉಷ್ಣ ವಿದ್ಯುತ್​ ಸ್ಥಾವರ ಕಾರ್ಮಿಕರ ಪ್ರತಿಭಟನೆ; 20 ಪೊಲೀಸರಿಗೆ ಗಾಯ, ವಾಹನಗಳೆಲ್ಲ ಧ್ವಂಸ

| Updated By: Lakshmi Hegde

Updated on: Jan 03, 2022 | 8:52 AM

ಪ್ರತಿಭಟನಾ ನಿರತ ಕಾರ್ಮಿಕರು ಛತ್ತೀಸ್​ಗಢ ರಾಜ್ಯ ವಿದ್ಯುತ್​ ಕಂಪನಿ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲು ಜನವರಿ 4ರಂದು ಸಮಯ ನಿಗದಿ ಮಾಡಲಾಗಿತ್ತು.

ಹಿಂಸಾಚಾರಕ್ಕೆ ತಿರುಗಿದ ಉಷ್ಣ ವಿದ್ಯುತ್​ ಸ್ಥಾವರ ಕಾರ್ಮಿಕರ ಪ್ರತಿಭಟನೆ; 20 ಪೊಲೀಸರಿಗೆ ಗಾಯ, ವಾಹನಗಳೆಲ್ಲ ಧ್ವಂಸ
ಪ್ರತಿಭಟನೆ ಸ್ಥಳ
Follow us on

ಛತ್ತೀಸ್​ಗಢ್​ನ ಜಂಗಿರ್​-ಚಂಪಾ ಜಿಲ್ಲೆಯ ಮಾಡ್ವಾದಲ್ಲಿರುವ ಅಟಲ್​ಬಿಹಾರಿ ವಾಜಪೇಯಿ ಉಷ್ಣ ವಿದ್ಯುತ್​ ಸ್ಥಾವರದ(Atal Bihari Vajpayee Thermal Power Plant) ಗುತ್ತಿಗೆ ಕಾರ್ಮಿಕರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪರಿಸ್ಥಿತಿ ನಿಭಾಯಿಸಲು ಹೋಗಿದ್ದ ಪೊಲೀಸರಲ್ಲಿ ಸುಮಾರು 20 ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಉಷ್ಣ ವಿದ್ಯುತ್​ ಸ್ಥಾವರ ಛತ್ತೀಸ್​ಗಢ್​ ರಾಜ್ಯ ಸರ್ಕಾರದಿಂದ ನಡೆಯುತ್ತಿರುವುದಾಗಿದೆ.  ನಾವೆಲ್ಲ ಇನ್ನೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ಸೇವೆಯಲ್ಲಿ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಕೆಲಸಗಾರರು ಕಳೆದ ಹಲವು ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಆದರೆ ಅವರ ಪ್ರತಿಭಟನೆ ಭಾನುವಾರ ಹಿಂಸಾಚಾರ ಸ್ವರೂಪಕ್ಕೆ ತಿರುಗಿತ್ತು. 

ಇವರ ಪ್ರತಿಭಟನೆಯಿಂದ ಸ್ಥಳೀಯರಿಗೆ ಸಮಸ್ಯೆಯಾಗುತ್ತಿತ್ತು. ಅಷ್ಟೇ ಅಲ್ಲ ಕೊವಿಡ್​ 19 ಕೇಸ್​ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಗುಂಪುಗೂಡುವಿಕೆಯನ್ನು ನಿರ್ಬಂಧಿಸಬೇಕಿತ್ತು. ಹೀಗಾಗಿ ಸ್ಥಳೀಯ ಆಡಳಿತ ಮತ್ತು ಪೊಲೀಸರು ಸೇರಿ ಇವರನ್ನು ಅಲ್ಲಿಂದ ಹೊರಹಾಕುವ ಪ್ರಯತ್ನ ಮಾಡಿದಾಗ ಹಿಂಸಾಚಾರ ನಡೆದಿದೆ. ಪ್ರತಿಭಟನಾ ನಿರತರು ಕೋಪಗೊಂಡು ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ್ದಾರೆ. ಸುಮಾರು 20 ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಖಾಸಗಿ ವಾಹನವೊಂದಕ್ಕೂ ಬೆಂಕಿ ಹಚ್ಚಿದ್ದಾರೆ. ಸದ್ಯ ಅಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಲಾಗಿದೆ.

ಪ್ರತಿಭಟನೆ ತೀವ್ರ ಹಂತಕ್ಕೆ ತಲುಪಿತ್ತು. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು, ಡಯಾಬಿಟಿಸ್​ ರೋಗಿಗಳು ಕೂಡ ಪ್ರತಿಭಟನೆ ನಡೆಸುತ್ತಿದ್ದರು. ಅವರ ಆರೋಗ್ಯದ ದೃಷ್ಟಿಯಿಂದ ಅಲ್ಲಿಂದ ಅವರನ್ನು ಕಳಿಸಬೇಕಿತ್ತು. ನಾವು ಅದನ್ನು ಹೇಳಿದರೆ ಅವರ್ಯಾರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಪ್ರತಿಭಟನಾಕಾರರು ನಮ್ಮಮೇಲೆ ದಾಳಿ ಮಾಡಿದರು. ಅವರನ್ನು ನಿಯಂತ್ರಣ ಮಾಡಲು ನಂತರ ಜಲಫಿರಂಗಿ ಪ್ರಯೋಗ ಮಾಡಬೇಕಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರತಿಭಟನಾ ನಿರತ ಕಾರ್ಮಿಕರು ಛತ್ತೀಸ್​ಗಢ ರಾಜ್ಯ ವಿದ್ಯುತ್​ ಕಂಪನಿ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲು ಜನವರಿ 4ರಂದು ಸಮಯ ನಿಗದಿ ಮಾಡಲಾಗಿತ್ತು.  ಆದರೆ ಪ್ರತಿಭಟನಾ ನಿರತರಲ್ಲಿ ಕೆಲವರು ಭಾನುವಾರವೇ ಈ ಮಾತುಕತೆ ನಡೆಯಬೇಕು. ಅದೂ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆಯಬೇಕು ಎಂದು ಆಗ್ರಹಿಸಿದರು. ಜನವರಿ 4ರಂದು ಖಂಡಿತವಾಗಿಯೂ ಮಾತುಕತೆಗೆ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾಗ್ಯೂ ಕೂಡ ಜಾಗ ಖಾಲಿ ಮಾಡಲು ಪ್ರತಿಭಟನಾ ನಿರತರು ಒಪ್ಪುತ್ತಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: India vs South Africa: ಎರಡನೇ ಟೆಸ್ಟ್ ಆರಂಭಕ್ಕೆ ಇದೆಯೇ ಮಳೆಯ ಕಾಟ?: ಜೋಹನ್ಸ್​​ಬರ್ಗ್​​ ವಾತಾವರಣ ಹೇಗಿದೆ?