ಬಲರಾಮಪುರ: ಅಪರಾಧಗಳ ರಾಜಧಾನಿ ಅದರಲ್ಲೂ ಮಹಿಳೆಯರ ಮೇಲಿನ ಪೈಶಾಚಿಕ ಪಾತಕಗಳು ಹೆಚ್ಚಾಗುತ್ತಿರುವ ಉತ್ತರ ಪ್ರದೇಶದಲ್ಲಿ ಕುಕೃತ್ಯಗಳಿಗೆ ಕಡಿವಾಣ ಹಾಕಲು ಮಿಷನ್ ಶಕ್ತಿ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ತನ್ಮೂಲಕ ಹೆಣ್ಣುಮಕ್ಕಳನ್ನು ಸಬಲರನ್ನಾಗಿಸುವುದು ಯೋಜನೆಯ ಉದ್ದೇಶವಾಗಿದೆ.
ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ 1535 ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಕೊಠಡಿ ಮೀಸಲಿಡಲಾಗಿದ್ದು, ಮಹಿಳೆಯರು ನೇರವಾಗಿ ಇಲ್ಲಿ ದೂರು ದಾಖಲಿಸಬಹುದಾಗಿದೆ.
ನವರಾತ್ರಿ ಆರಂಭಗೊಂಡ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ Mission Shakti ಯೋಜನೆಯನ್ನು ಚಾಲೂಗೊಳಿಸಿದರು. ಮಿಷನ್ ಶಕ್ತಿ ಪೊಲೀಸ್ ಕೊಠಡಿಯಲ್ಲಿ ಒಬ್ಬ ಮಹಿಳಾ ಪೇದೆ ಕಾರ್ಯನಿರ್ವಹಿಸುತ್ತಾರೆ. ಮಹಿಳೆಯರ ಮೇಲೆ ಅಪರಾಧ ಎಸಗುವವರ ವಿರುದ್ಧ ಕ್ಷಿಪ್ರ ಕಾರ್ಯಾಚರಣೆ ಕೈಗೊಳ್ಳಲು ಇದು ಸಹಾಯಕವಾಗಲಿದೆ. ರಾಜ್ಯದ ಪ್ರತಿಯೊಬ್ಬ ಮಹಿಳೆಯನ್ನು ಸಂರಕ್ಷಿಸುವುದು ಇದರ ಧ್ಯೇಯವಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದರು.