Quad Summit 2021: ಕ್ವಾಡ್​ ಸಭೆಗೂ ಮುನ್ನವೇ ಬೆಚ್ಚಿದ ಚೀನಾ; ನಾಲ್ಕು ಪ್ರಮುಖ ರಾಷ್ಟ್ರಗಳ ಮಾತುಕತೆ ಬಗ್ಗೆ ಹೆಚ್ಚಿದ ಕುತೂಹಲ

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮೆರಿಕಾದ ಅಧ್ಯಕ್ಷ ಜೋ ಬೈಡನ್, ಜಪಾನ್​ ಅಧ್ಯಕ್ಷ ಯೋಶಿಹಿಡೆ ಸೂಗ ಮತ್ತು ಆಸ್ಟ್ರೇಲಿಯಾ ಅಧ್ಯಕ್ಷ ಸ್ಕಾಟ್​ ಮಾರಿಸನ್​ ನಾಳೆ ಆನ್ಲೈನ್​ ಮೂಲಕ ನಡೆಯಲಿರುವ ಕ್ವಾಡ್​ ಸಭೆಯಲ್ಲಿ ಭಾಗವಹಿಸಲಿದ್ದು, ಈ ಸಭೆಗೂ ಮುನ್ನವೇ ಚೀನಾ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ.

Quad Summit 2021: ಕ್ವಾಡ್​ ಸಭೆಗೂ ಮುನ್ನವೇ ಬೆಚ್ಚಿದ ಚೀನಾ; ನಾಲ್ಕು ಪ್ರಮುಖ ರಾಷ್ಟ್ರಗಳ ಮಾತುಕತೆ ಬಗ್ಗೆ ಹೆಚ್ಚಿದ ಕುತೂಹಲ
ಪ್ರಾತಿನಿಧಿಕ ಚಿತ್ರ
Edited By:

Updated on: Mar 11, 2021 | 8:34 PM

ಭಾರತ, ಜಪಾನ್, ಅಮೆರಿಕಾ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳನ್ನು ಒಳಗೊಂಡ ಕ್ವಾಡ್​ ಒಕ್ಕೂಟದ ಸಭೆ ನಾಳೆ (ಮಾರ್ಚ್​ 12) ಜರುಗುತ್ತಿದ್ದು, ಸಭೆಗೆ ಮುನ್ನವೇ ಪ್ರಮುಖ ರಾಷ್ಟ್ರಗಳ ಮಾತುಕತೆ ಬಗ್ಗೆ ಚೀನಾಕ್ಕೆ ನಡುಕ ಹುಟ್ಟಿದಂತಿದೆ. ಕ್ವಾಡ್​ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ, ಸಭೆಯಲ್ಲಿ ಭಾಗವಹಿಸಲಿರುವ ರಾಷ್ಟ್ರಗಳು ಯಾವುದಾದರೂ ಶಾಂತಿ ಹಾಗೂ ಒಳಿತಿನ ಬಗ್ಗೆ ಚರ್ಚಿಸಿದರೆ ಒಳ್ಳೆಯದು. ಅದರ ಹೊರತಾಗಿ ಯಾವುದೇ ರಾಷ್ಟ್ರಕ್ಕೆ ವಿರುದ್ಧವಾಗಿ ಯೋಚಿಸುವುದಾದರೆ ಅದು ಆತಂಕಕಾರಿ ಬೆಳವಣಿಗೆ ಎಂಬರ್ಥದಲ್ಲಿ ಧ್ವನಿ ಹೊರಡಿಸಿದೆ.

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮೆರಿಕಾದ ಅಧ್ಯಕ್ಷ ಜೋ ಬೈಡನ್, ಜಪಾನ್​ ಅಧ್ಯಕ್ಷ ಯೋಶಿಹಿಡೆ ಸೂಗ ಮತ್ತು ಆಸ್ಟ್ರೇಲಿಯಾ ಅಧ್ಯಕ್ಷ ಸ್ಕಾಟ್​ ಮಾರಿಸನ್​ ನಾಳೆ ಆನ್ಲೈನ್​ ಮೂಲಕ ನಡೆಯಲಿರುವ ಕ್ವಾಡ್​ ಸಭೆಯಲ್ಲಿ ಭಾಗವಹಿಸಲಿದ್ದು, ಈ ಸಭೆಗೂ ಮುನ್ನವೇ ಚೀನಾ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಮಾತನಾಡಿರುವ ಚೀನಾ ವಿದೇಶಾಂಗ ಖಾತೆ ವಕ್ತಾರ ಜಾವೋ ಲಿಜಿಯಾನ್​, ಕ್ವಾಡ್​ನಲ್ಲಿ ಉತ್ತಮ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಚೀನಾ ನಂಬುತ್ತದೆ ಎಂದು ಹೇಳಿದ್ದಾರೆ.

ಚೀನಾ ಈಗಾಗಲೇ ದಕ್ಷಿಣ ಚೀನಾ ಸಾಗರದ ಮೇಲೆ ಪ್ರಾಬಲ್ಯ ಸಾಧಿಸುವ ವಿಚಾರದಲ್ಲಿ ಅಮೆರಿಕಾ ಮತ್ತು ಆಸ್ಟ್ರೇಲಿಯಾ ಜೊತೆ ದೊಡ್ಡ ಮಟ್ಟದ ತಕರಾರು ತೆಗೆದುಕೊಂಡು ಮುಖ ಕೆಂಪಾಗಿಸಿಕೊಂಡಿದೆ. ಇತ್ತ ಭಾರತದ ಜೊತೆಗೆ ಗಡಿ ವಿಚಾರದಲ್ಲಿಯೂ ಕಿರಿಕಿರಿ ಎಬ್ಬಿಸಿಕೊಂಡು ಮನಸ್ತಾಪ ಮಾಡಿಕೊಂಡಿದೆ.  ಮತ್ತೊಂದೆಡೆ ಟಿಬೆಟ್​ ವಿಚಾರದಲ್ಲಿಯೂ ಮೂಗು ತೂರಿಸಿರುವ ಚೀನಾ ಭಾರೀ ಪ್ರಮಾಣದ ವಿರೋಧವನ್ನು ಕಟ್ಟಿಕೊಳ್ಳುತ್ತಿದೆ. ಇಷ್ಟೆಲ್ಲಾ ವಿವಾದಗಳು ಸಾಲದೆಂಬಂತೆ ಪ್ರಸ್ತುತ ಹಾಂಕಾಂಗ್​ನಲ್ಲಿ ಆಗುತ್ತಿರುವ ಬೆಳವಣಿಗೆಗಳು ಚೀನಾಕ್ಕೆ ದೊಡ್ಡ ಕಪ್ಪು ಚುಕ್ಕೆಯನ್ನೇ ಇಟ್ಟಿದೆ. ಹೀಗೆ ಎಲ್ಲಾ ರಾಷ್ಟ್ರಗಳಿಂದಲೂ ವಿರೋಧ ಕಟ್ಟಿಕೊಂಡಿರುವ ಚೀನಾಕ್ಕೆ ಸಹಜವಾಗಿಯೇ ನಾಳೆ ನಡೆಯಲಿರುವ ಕ್ವಾಡ್​​ ಸಭೆ ಆತಂಕವನ್ನು ತರಿಸಿದೆ.

ನಾಳೆ ನಡೆಯಲಿರುವ ಸಭೆಯಲ್ಲಿ ನಾಲ್ಕೂ ದೇಶಗಳ ಪ್ರಧಾನ ಮಂತ್ರಿಗಳು ಭಾಗವಹಿಸಲಿದ್ದು ಬಹುಮುಖ್ಯ ಅಂಶಗಳನ್ನು ಚರ್ಚಿಸಲಿದ್ದಾರೆ. ಆ ಪೈಕಿ ಚೀನಾ ದೇಶದ ಆಕ್ರಮಣಕಾರಿ ಸ್ವಭಾವದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನುವುದು ವಿದೇಶಾಂಗ ತಜ್ಞರ ಬಲವಾದ ನಂಬಿಕೆ. ಈ ಬಗ್ಗೆ ಯಾವೊಂದು ರಾಷ್ಟ್ರಗಳೂ ಮುಕ್ತವಾಗಿ ಒಪ್ಪಿಕೊಳ್ಳುತ್ತಿಲ್ಲವಾದರೂ ಇದೊಂದು ಬಹಿರಂಗ ಗುಟ್ಟಿನಂತೆ ಆಗಿರುವ ಕಾರಣ ಸಭೆಯಲ್ಲಿ ಏನಾಗಬಹುದೆಂದು ಎಲ್ಲರೂ ಕುತೂಹಲಭರಿತರಾಗಿ ನೋಡುತ್ತಿದ್ದಾರೆ. ಈಗ ಸಭೆಗೂ ಮುನ್ನವೇ ಚೀನಾ ನೀಡಿರುವ ಹೇಳಿಕೆ ನಾಳಿನ ಸಭೆಗೆ ಮತ್ತಷ್ಟು ಮಹತ್ವ ನೀಡಿದೆ.

ಇದನ್ನೂ ಓದಿ:
Quad Summit 2021: ಭಾರತ, ಅಮೆರಿಕಾ, ಜಪಾನ್ ಮತ್ತು ಆಸ್ಟ್ರೇಲಿಯಾ ನಾಯಕರ ಸಭೆ, ಚೀನಾ ಬಗ್ಗೆ ಚರ್ಚೆ ಸಾಧ್ಯತೆ

ವಿಶ್ವದ ಸೂತ್ರ ಚೀನಾದ ಕೈಗೆ ಸಿಗಲು ಅವಕಾಶ ಕೊಡಲ್ಲ: ಅಮೆರಿಕ ಅಧ್ಯಕ್ಷ ಜೋ ಬೈಡೆನ್