ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅಧಿಕಾರಾವಧಿ ಮುಕ್ತಾಯ; ಇಂದಿನ ವಿಚಾರಣೆಯ ನೇರ ಪ್ರಸಾರ

| Updated By: ಸುಷ್ಮಾ ಚಕ್ರೆ

Updated on: Nov 07, 2022 | 8:28 AM

ಭಾರತದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ತಮ್ಮ ಕಚೇರಿಯನ್ನು ತ್ಯಜಿಸುವ ಮುನ್ನಾದಿನವಾದ ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ನಡೆಸುವ ಕಲಾಪದ ಪ್ರಕ್ರಿಯೆಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ.

ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅಧಿಕಾರಾವಧಿ ಮುಕ್ತಾಯ; ಇಂದಿನ ವಿಚಾರಣೆಯ ನೇರ ಪ್ರಸಾರ
ಯುಯು ಲಲಿತ್
Follow us on

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು ಲಲಿತ್ (CJI UU Lalit) ಅವರ ಅಧಿಕಾರಾವಧಿ ಮುಗಿಯಲಿದ್ದು, ಇಂದು ಅವರ ಕೆಲಸದ ಕೊನೆಯ ದಿನವಾಗಿದೆ. ಹೀಗಾಗಿ, ಯುಯು ಲಲಿತ್ ನೇತೃತ್ವದ ನ್ಯಾಯಪೀಠದ ಕಲಾಪವನ್ನು ಸುಪ್ರೀಂ ಕೋರ್ಟ್ (Supreme Court) ಇಂದು (ಸೋಮವಾರ) ನೇರ ಪ್ರಸಾರ ಮಾಡಲಿದೆ. ಸಿಜೆಐ ಯುಯು ಲಲಿತ್ ಅವರ ಅಧಿಕಾರಾವಧಿ ನವೆಂಬರ್ 8ರಂದು ಗುರುನಾನಕ್ ಜಯಂತಿಯಂದು ಕೊನೆಗೊಳ್ಳಲಿದೆ.

ಸಿಜೆಐ ನೇತೃತ್ವದ ಔಪಚಾರಿಕ ಪೀಠವು ಇಂದು ಮಧ್ಯಾಹ್ನ 2 ಗಂಟೆಗೆ ಊಟದ ಸಮಯದ ನಂತರದ ಕೋರ್ಟ್​ ಕಲಾಪದಲ್ಲಿ ಒಟ್ಟಾಗಿ ಸೇರಲಿದೆ. ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಅವರನ್ನು ಸಹ ಈ ನ್ಯಾಯಪೀಠ ಒಳಗೊಂಡಿರುತ್ತದೆ. ಈ ವೇಳೆ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿರುವ ಯುಯು ಲಲಿತ್ ಅವರು ಸುಪ್ರೀಂ ಕೋರ್ಟ್​ ಭಾವಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರೊಂದಿಗೆ ಪೀಠವನ್ನು ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: DY Chandrachud: ನ್ಯಾ. ಡಿವೈ ಚಂದ್ರಚೂಡ್​ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ: ಶಿಫಾರಸು ಮಾಡಿದ ನ್ಯಾ. ಯುಯು ಲಲಿತ್

ಭಾರತದ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಕಚೇರಿಯನ್ನು ತ್ಯಜಿಸುವ ಮುನ್ನಾದಿನವಾದ ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ನಡೆಸುವ ಕಲಾಪದ ಪ್ರಕ್ರಿಯೆಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ. ಭಾರತದ ಸರ್ವೋಚ್ಚ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಈ ನೇರ ಪ್ರಸಾರವಾಗಲಿದೆ. ಈ ಹಿಂದೆ ಸುಪ್ರೀಂ ಕೋರ್ಟ್​ ಇತಿಹಾಸದಲ್ಲೇ ಮೊದಲ ಬಾರಿಗೆ ಆಗಸ್ಟ್ 26ರಂದು ಆಗಿನ ಸಿಜೆಐ ಎನ್​.ವಿ ರಮಣ ಅವರ ಅಧಿಕಾರಾವಧಿಯ ಕೊನೆಯ ದಿನದಂದು ಅವರ ನೇತೃತ್ವದ ಔಪಚಾರಿಕ ಪೀಠದ ವಿಚಾರಣೆಯನ್ನು ನೇರ ಪ್ರಸಾರ ಮಾಡಲಾಗಿತ್ತು.

ಅದಾದ ಬಳಿಕ ಸೆಪ್ಟೆಂಬರ್ 27ರಿಂದ ಸುಪ್ರೀಂ ಕೋರ್ಟ್ ತನ್ನ ವೆಬ್‌ಕಾಸ್ಟ್ ಚಾನೆಲ್ ಮತ್ತು ಯೂಟ್ಯೂಬ್ ಮೂಲಕ ಸಂವಿಧಾನ ಪೀಠಗಳ ನೇರ ಪ್ರಸಾರದ ಪ್ರಕ್ರಿಯೆಗಳನ್ನು ಪ್ರಾರಂಭಿಸಿತು. ಇದುವರೆಗೂ 8 ಲಕ್ಷಕ್ಕೂ ಹೆಚ್ಚು ವೀಕ್ಷಕರು ಕಲಾಪವನ್ನು ವೀಕ್ಷಿಸಿದ್ದಾರೆ. ಆದರೆ, ವೈವಾಹಿಕ ವಿವಾದಗಳು ಅಥವಾ ಲೈಂಗಿಕ ದೌರ್ಜನ್ಯದಂತಹ ಸೂಕ್ಷ್ಮ ಪ್ರಕರಣಗಳನ್ನು ನೇರ ಪ್ರಸಾರ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ