10ನೇ ತರಗತಿ ಬೋರ್ಡ್ ಎಕ್ಸಾಂ ಬರೆಯುತ್ತಿದ್ದ ಬಾಲಕಿಗೆ ಹೆರಿಗೆ; ಆಕೆ ಗರ್ಭಿಣಿಯೆಂದೇ ಗೊತ್ತಿರಲಿಲ್ಲ!

ಎಸ್​ಎಸ್​ಎಲ್​ಸಿ ಬೋರ್ಡ್ ಪರೀಕ್ಷೆ ಬರೆಯುತ್ತಿದ್ದ ಬಾಲಕಿಗೆ ಇದ್ದಕ್ಕಿದ್ದಂತೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಈ ವೇಳೆ ಬಾತ್​ರೂಂಗೆ ಹೋದ ಆ ಬಾಲಕಿಗೆ ಅಲ್ಲೇ ಹೆರಿಗೆಯಾಗಿದೆ. ವಿಚಿತ್ರವೆಂದರೆ, ಆ ಬಾಲಕಿ ಗರ್ಭಿಣಿಯಾಗಿದ್ದಾಳೆಂಬ ವಿಷಯ ಆಕೆಯ ಹೆತ್ತವರಿಗೆ ಗೊತ್ತೇ ಇರಲಿಲ್ಲ. ಹಾಗಾದರೆ, ಆ ಬಾಲಕಿಯ ದೇಹದಲ್ಲಾದ ಬದಲಾವಣೆ ಯಾರ ಗಮನಕ್ಕೂ ಬಾರಲಿಲ್ಲವೇ? 9 ತಿಂಗಳ ತುಂಬು ಗರ್ಭಿಣಿ ಶಾಲೆಯ ಯೂನಿಫಾರ್ಮ್ ಹಾಕಿಕೊಂಡು ಬಂದು ಪರೀಕ್ಷೆ ಬರೆಯುವಾಗ ಶಿಕ್ಷಕರು, ಆಕೆಯ ಸಹಪಾಠಿಗಳಿಗೂ ಅನುಮಾನ ಬರಲಿಲ್ಲವೇ? ತನಗೆ ಇನ್ನೇನು ಕೆಲವೇ ದಿನಗಳಲ್ಲಿ ಹೆರಿಗೆಯಾಗಲಿದೆ ಎಂದು ಆ ಬಾಲಕಿಗೂ ಗೊತ್ತಿರಲಿಲ್ಲವೇ? ಗೊತ್ತಿದ್ದರೆ ಆಕೆ ಬೋರ್ಡ್ ಎಕ್ಸಾಂ ಬರೆಯಲು ಬಂದಿದ್ದೇಕೆ? ಎಂಬಿತ್ಯಾದಿ ಹಲವು ಪ್ರಶ್ನೆಗಳು ಮೂಡಿವೆ.

10ನೇ ತರಗತಿ ಬೋರ್ಡ್ ಎಕ್ಸಾಂ ಬರೆಯುತ್ತಿದ್ದ ಬಾಲಕಿಗೆ ಹೆರಿಗೆ; ಆಕೆ ಗರ್ಭಿಣಿಯೆಂದೇ ಗೊತ್ತಿರಲಿಲ್ಲ!
Newborn Baby

Updated on: Feb 25, 2026 | 8:16 PM

ಧಾರ್, ಫೆಬ್ರವರಿ 25: ಈಗಿನ ಕಾಲದಲ್ಲಿ ಮಕ್ಕಳ ಕೈಯಲ್ಲಿ ಮೊಬೈಲ್ ಇರುವುದರಿಂದ ಅವರ ಬೆರಳ ತುದಿಯಲ್ಲೇ ಎಲ್ಲ ಮಾಹಿತಿ ಲಭ್ಯವಿರುತ್ತದೆ. ತಮಗೆ ಬೇಕಾದ ಎಲ್ಲ ವಿಷಯವನ್ನೂ ಮಕ್ಕಳು ಮೊಬೈಲಿನಿಂದಲೇ ತಿಳಿದುಕೊಳ್ಳುತ್ತಾರೆ. ಹೀಗಿದ್ದರೂ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತಾನು ಗರ್ಭಿಣಿಯಾದ (Pregnant) ವಿಷಯ ಮುಚ್ಚಿಟ್ಟು ಮಗುವನ್ನು ಹೆತ್ತಿದ್ದಾಳೆ. ಬೋರ್ಡ್ ಎಕ್ಸಾಂ ಬರೆಯುವಾಗ ಪರೀಕ್ಷಾ ಕೇಂದ್ರದಲ್ಲಿಯೇ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ! ಎಸ್​ಎಸ್​ಎಲ್​ಸಿ ಓದುವ ಹುಡುಗಿಗೆ ತನ್ನ ದೇಹದಲ್ಲಾದ ಬದಲಾವಣೆಗಳು ಗೊತ್ತಾಗಲಿಲ್ಲವೇ? ಹೆರಿಗೆಯ ಸಮಯ ಬಂದರೂ ಆಕೆ ಪರೀಕ್ಷೆ ಬರೆಯಲು ನಿರ್ಧರಿಸಿದ್ದೇಕೆ? ಆಕೆ ತನ್ನ ತಂದೆ-ತಾಯಿಯಿಂದ ತಾನು ಗರ್ಭಿಣಿಯಾದ ವಿಷಯ ಮುಚ್ಚಿಟ್ಟಿದ್ದೇಕೆ? ಆಕೆ ಗರ್ಭಿಣಿಯಾಗಲು ಕಾರಣ ಯಾರು? ಎಂಬ ಹಲವು ಪ್ರಶ್ನೆಗಳು ಈ ಘಟನೆಯ ಬಳಿಕ ಎದ್ದಿವೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯ ಕೈಗಾರಿಕಾ ಪ್ರದೇಶವಾದ ಪಿತಾಂಪುರದಲ್ಲಿ ಮಂಗಳವಾರ ಬೋರ್ಡ್ ಪರೀಕ್ಷೆ ಬರೆಯುತ್ತಿದ್ದಾಗ 10ನೇ ತರಗತಿಯ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ಪರೀಕ್ಷಾ ಕೇಂದ್ರದ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿರುವುದು ತೀವ್ರ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ. ವಿದ್ಯಾವಂತೆಯಾದ ಬಾಲಕಿ ತಾನು ಗರ್ಭಿಣಿಯಾದರೂ ಆ ವಿಷಯ ಮುಚ್ಚಿಟ್ಟಿದ್ದೇಕೆ? ಮೊದಲೇ ಹೇಳಿದ್ದರೆ ಇಷ್ಟು ಚಿಕ್ಕ ವಯಸ್ಸಿಗೆ ತಾಯಿಯಾಗುವ ಅಪಾಯ ತಪ್ಪಿಸಬಹುದಿತ್ತು, ಆ ಮಗುವಿನ ತಂದೆ ಯಾರು ಎಂಬಿತ್ಯಾದಿ ಪ್ರಶ್ನೆಗಳೆದ್ದಿವೆ.

ಇದನ್ನೂ ಓದಿ: ಧರ್ಮಗುರುವಿನಿಂದ ಬಾಲಕಿಗೆ ಲೈಂಗಿಕ ಕಿರುಕುಳ; ಮಗು ಹುಟ್ಟೋವರೆಗೂ ಗರ್ಭಿಣಿಯಾದ ವಿಷಯವೇ ಗೊತ್ತಾಗಲಿಲ್ಲ!

ಮಧ್ಯಪ್ರದೇಶದ ಮಾಧ್ಯಮಿಕ ಶಿಕ್ಷಣ ಮಂಡಳಿಯ ಪರೀಕ್ಷೆಗಳ ಕೇಂದ್ರವಾದ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಗಣಿತ ಪತ್ರಿಕೆ ಬರೆಯಲು ಹಾಜರಾಗಿದ್ದ ಬಾಲಕಿ ಒಂದೂವರೆ ಗಂಟೆ ಪರೀಕ್ಷೆ ಬರೆದಿದ್ದಳು. ಆದರೆ, ಆಗ ಇದ್ದಕ್ಕಿದ್ದಂತೆ ಆಕೆಗೆ ಹೊಟ್ಟೆನೋವು ಜೋರಾಗಿತ್ತು. ಹೀಗಾಗಿ, ಪರೀಕ್ಷೆಯ ಮಧ್ಯದಲ್ಲಿ ಆಕೆ ಬಾತ್​ರೂಂಗೆ ಹೋಗಲು ಅನುಮತಿ ಕೇಳಿದ್ದಳು. ವಿಪರೀತ ಹೊಟ್ಟೆನೋವಿದ್ದುದರಿಂದ ಆಕೆಗೆ ಬಾತ್​ರೂಂಗೆ ಹೋಗಲು ಅನುಮತಿ ನೀಡಲಾಗಿತ್ತು. ಅದಾದ ಕೆಲವೇ ನಿಮಿಷಗಳಲ್ಲಿ ಬಾತ್​ರೂಂನಿಂದ ಮಗು ಅಳುವ ಶಬ್ದ ಕೇಳಿತ್ತು.

ಆಕೆ ಬಾತ್​​ರೂಂಗೆ ಹೋದಾಗ ಅಲ್ಲೇ ಆಕೆಗೆ ಹೆರಿಗೆಯಾಗಿದೆ. ಟಾಯ್ಲೆಟ್​​ನಲ್ಲೇ ಆ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಅಳುವ ಶಬ್ದ ಕೇಳಿದ್ದರಿಂದ ಶಿಕ್ಷಕಿ ಟಾಯ್ಲೆಟ್ ಒಳಗೆ ಹೋಗಿ ನೋಡಿದರು. ಅಲ್ಲಿ ಆ ಬಾಲಕಿ ಹಾಗೂ ರಕ್ತ ಮೆತ್ತಿಕೊಂಡಿದ್ದ ಮಗುವನ್ನು ಕಂಡು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ವಿಷಯ ತಿಳಿಸಿದರು.

ಇದನ್ನೂ ಓದಿ: ಹೆರಿಗೆಯ ನಂತರ ಮುಟ್ಟು ವಿಳಂಬವಾಗುವುದು ಅಪಾಯಕಾರಿಯೇ? ಯಾವಾಗ ವೈದ್ಯರ ಸಲಹೆ ಪಡೆಯಬೇಕು?

ಪರೀಕ್ಷಾ ಕೇಂದ್ರದ ಆಡಳಿತ ಮಂಡಳಿಯು ತಕ್ಷಣ 108 ತುರ್ತು ಆಂಬ್ಯುಲೆನ್ಸ್ ಸೇವೆಗೆ ಮಾಹಿತಿ ನೀಡಿತು. ಆ ವಿದ್ಯಾರ್ಥಿನಿ ಮತ್ತು ಆಕೆಯ ನವಜಾತ ಶಿಶುವನ್ನು ಪಿತಾಂಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ದೃಢಪಡಿಸಿದರು. ಪ್ರಸ್ತುತ ತಾಯಿ ಹಾಗೂ ಮಗುವನ್ನು ಅಬ್ಸರ್ವೇಷನ್​​ನಲ್ಲಿಡಲಾಗಿದೆ.

ಈ ಘಟನೆಯು ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಕೇಂದ್ರದ ಸಿಬ್ಬಂದಿಯಲ್ಲಿ ಭಯವನ್ನುಂಟುಮಾಡಿದೆ. ವಿಚಿತ್ರವೆಂದರೆ, ಆ ಬಾಲಕಿ ಗರ್ಭಿಣಿಯಾದ ವಿಷಯ ಆಕೆಯ ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಹೀಗಾಗಿ, ಮಗಳಿಗೆ ಹೆರಿಗೆಯಾಗಿದೆ ಎಂಬ ವಿಷಯ ತಿಳಿದು ಅವರು ಶಾಕ್ ಆಗಿದ್ದಾರೆ. ಆದರೆ, 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಆಕೆ ಈ ವಿಷಯವನ್ನು ಮನೆಯವರಿಂದ, ಶಾಲೆಯವರಿಂದ ಹೇಗೆ ಮುಚ್ಚಿಟ್ಟಳು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಸದ್ಯದ ಪೊಲೀಸ್ ತನಿಖೆಯ ಪ್ರಕಾರ, ಆ ಅಪ್ರಾಪ್ತ ಬಾಲಕಿ ಕಳೆದ 2 ವರ್ಷಗಳಿಂದ ಯುವಕನೊಂದಿಗೆ ಸಂಪರ್ಕದಲ್ಲಿದ್ದಾಳೆ ಎಂಬುದು ಗೊತ್ತಾಗಿದೆ. ಕಳೆದ ವರ್ಷದಿಂದ ಆಕೆ ಆತನೊಂದಿಗೆ ಪದೇ ಪದೇ ದೈಹಿಕ ಸಂಬಂಧ ಹೊಂದಿದ್ದಳು. ಇದರಿಂದಾಗಿ ಆಕೆ ಗರ್ಭಿಣಿಯಾಗಿದ್ದಾಳೆ. ಆಕೆ ಈ ವಿಷಯವನ್ನು ಮನೆಯವರ ಬಳಿ ಹೇಳಿರಲಿಲ್ಲ. ಆರೋಪಿಯನ್ನು ಗುರುತಿಸಲಾಗಿದೆ. ಅವನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us