ನವದೆಹಲಿ: ಭಾರತದಲ್ಲಿ ಈಗ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲ್ಲಿನ ಭಾರೀ ಕೊರತೆ ಉಂಟಾಗಿದೆ. ಕೆಲ ಥರ್ಮಲ್ ಪ್ಲಾಂಟ್ ಗಳಲ್ಲಿ ಕೇವಲ ನಾಲ್ಕು ದಿನದ ವಿದ್ಯುತ್ ಉತ್ಪಾದನೆಗೆ ಸಾಕಾಗುವಷ್ಟು ಕಲ್ಲಿದ್ದಲು ಮಾತ್ರ ದಾಸ್ತಾನು ಇದೆ. ಇದರಿಂದಾಗಿ ಭಾರತದಲ್ಲಿ ಈಗ ಹಬ್ಬದ ಸೀಸನ್ಗಳಲ್ಲಿ ವಿದ್ಯುತ್ ಕೊರತೆ ಎದುರಾಗುವ ಭೀತಿ ಕೂಡ ಇದೆ. ಹಾಗಾದರೆ, ಭಾರತದಲ್ಲಿ ಕಲ್ಲಿದ್ದಲ್ಲಿನ ಕೊರತೆಗೆ ಏನು ಕಾರಣ? ಯಾವಾಗ ಸಮಸ್ಯೆ ಸರಿ ಹೋಗಬಹುದು? ಎನ್ನುವುದರ ವಿಶೇಷ ವರದಿ ಇಲ್ಲಿದೆ.
ಭಾರತದಲ್ಲಿ ಈಗ ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ಮೂಲಗಳೆರಡರಿಂದಲೂ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕಲ್ಲಿದ್ದಲು ಅನ್ನು ಬಳಸಿ ಉಷ್ಣ ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಅನ್ನು ಉತ್ಪಾದನೆ ಮಾಡಲಾಗುತ್ತಿದೆ. ಜೊತೆಗೆ ಪವನ ಶಕ್ತಿ, ಜಲಶಕ್ತಿ, ಸೌರಶಕ್ತಿಯನ್ನು ಬಳಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. 1902 ರಲ್ಲೇ ನಮ್ಮ ಕರ್ನಾಟಕದ ಶಿವನಸಮುದ್ರದಲ್ಲಿ ಕಾವೇರಿ ನದಿ ನೀರು ಬಳಸಿ ವಿದ್ಯುತ್ ಉತ್ಪಾದಿಸಲಾಗಿತ್ತು. ಆ ವಿದ್ಯುತ್ ಅನ್ನು ಕೆಜಿಎಫ್ ನ ಗೋಲ್ಡ್ ಫೀಲ್ಡ್ ಗೆ ಹಾಗೂ ಬೆಂಗಳೂರಿಗೆ ಪೂರೈಸಲಾಗಿತ್ತು. ಏಷ್ಯಾದಲ್ಲಿ ವಿದ್ಯುತ್ ಕಂಡ ಮೊದಲ ನಗರ ಬೆಂಗಳೂರು ನಗರ ಎಂಬ ಖ್ಯಾತಿ ಕೂಡ ಇದೆ.
ಆದರೆ, ಈಗ ಭಾರತದಲ್ಲಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುವ ಉಷ್ಣ ವಿದ್ಯುತ್ ಸ್ಥಾವರ (ಥರ್ಮಲ್ ಪವರ್ ಪ್ಲಾಂಟ್)ಗಳಲ್ಲಿ ಕಲ್ಲಿದ್ದಲಿನ ಕೊರತೆ ಇದೆ. ಆಕ್ಟೋಬರ್ 4ರಂದು ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ದಾಖಲೆಯ ಪ್ರಕಾರ, ದೇಶದ 64 ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ನಾಲ್ಕು ದಿನಕ್ಕೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಮಾತ್ರ ಇದೆ. ದೇಶದ 25 ಉಷ್ಣು ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ 7 ದಿನಕ್ಕಾಗುವಷ್ಟು ಕಲ್ಲಿದ್ದಲು ಮಾತ್ರ ದಾಸ್ತಾನು ಇದೆ. ದೇಶದ 135 ವಿದ್ಯುತ್ ಉತ್ಪಾದನಾ ಘಟಕಗಳನ್ನು ಕೇಂದ್ರೀಯ ವಿದ್ಯುತ್ ಪ್ರಾಧಿಕಾರ ಮಾನಿಟರ್ ಮಾಡುತ್ತದೆ. ದೇಶದ 135 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಪ್ರತಿ ನಿತ್ಯ ಒಟ್ಟಾರೆ 165 ಗೀಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತೆ. ಆದರೇ, ದೇಶದಲ್ಲಿ ಕಲ್ಲಿದ್ದಲಿನ ಕೊರತೆಯಿಂದ ದೇಶದ ಯಾವುದೇ ಭಾಗದಲ್ಲೂ ಈಗ ವಿದ್ಯುತ್ ಪೂರೈಕೆಯಲ್ಲಿ ಕೊರತೆಯಾಗಿಲ್ಲ ಎಂದು ಕೇಂದ್ರದ ಇಂಧನ ಖಾತೆ ಸಚಿವ ರಾಜಕುಮಾರ್ ಸಿಂಗ್ ಹೇಳಿದ್ದಾರೆ. ಆದರೆ, ಕಲ್ಲಿದ್ದಲ್ಲಿನ ಕೊರತೆಯ ಅಹಿತಕರ ಸ್ಥಿತಿಯು ಮುಂದಿನ 6 ತಿಂಗಳವರೆಗೂ ಮುಂದುವರಿಯಬಹುದು ಎಂದು ರಾಜಕುಮಾರ್ ಸಿಂಗ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಶಿಫಾರಸ್ಸಿನ ಪ್ರಕಾರ, ದೇಶದ ಥರ್ಮಲ್ ಪವರ್ ಪ್ಲಾಂಟ್ ಗಳಲ್ಲಿ ಕನಿಷ್ಠ 14 ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇರಬೇಕು. ಆದರೆ, ಅಕ್ಟೋಬರ್ 4ರಂದು ದೇಶದ 16 ಥರ್ಮಲ್ ಪವರ್ ಪ್ಲಾಂಟ್ ಗಳಲ್ಲಿ ಒಂದು ದಿನಕ್ಕಾಗುವಷ್ಟು ಕಲ್ಲಿದ್ದಲು ಕೂಡ ದಾಸ್ತಾನು ಇರಲಿಲ್ಲ. ಈ 16 ಥರ್ಮಲ್ ಪವರ್ ಪ್ಲಾಂಟ್ ಗಳಿಂದ 17,475 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತೆ. ಇನ್ನೂ 45 ಥರ್ಮಲ್ ಪವರ್ ಪ್ಲಾಂಟ್ ಗಳಲ್ಲಿ ಎರಡು ದಿನಕ್ಕಾಗುವಷ್ಟು ಕಲ್ಲಿದ್ದಲು ಮಾತ್ರ ದಾಸ್ತಾನು ಇತ್ತು. 45 ಥರ್ಮಲ್ ಪವರ್ ಪ್ಲಾಂಟ್ ಗಳಿಂದ 59,790 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ.
ಒಂದು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಸೇರಿದರೆ ಒಂದು ಗೀಗಾ ವ್ಯಾಟ್ ವಿದ್ಯುತ್ ಎಂದರ್ಥ. ದೇಶದಲ್ಲಿ 165 ಗೀಗಾ ವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಪ್ರತಿ ನಿತ್ಯ ಮಾನಿಟರ್ ಮಾಡಲಾಗುತ್ತದೆ. ಕಲ್ಲಿದ್ದಲು ಉತ್ಪಾದನಾ ಘಟಕಗಳಿಂದ ದೂರ ಇರುವ ಥರ್ಮಲ್ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ತೀವ್ರವಾಗಿದೆ. 8 ದಿನಗಳಿಗಾಗುವಷ್ಟು ಕಲ್ಲಿದ್ದಲು ಮಾತ್ರ ದಾಸ್ತಾನು ಇದೆ. ಭಾರತದಲ್ಲಿ 388 ಗೀಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಘಟಕಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 208 ಗೀಗಾ ವ್ಯಾಟ್ ಅನ್ನು ಕಲ್ಲಿದ್ದಲು ಅನ್ನು ಉರಿಸಿ ಥರ್ಮಲ್ ಪವರ್ ಪ್ಲಾಂಟ್ ಗಳಿಂದ ಉತ್ಪಾದಿಸಲಾಗುತ್ತದೆ. ಅಂದರೆ, ದೇಶದಲ್ಲಿ ಉತ್ಪಾದನೆಯಾಗುವ ವಿದ್ಯುತ್ ಪೈಕಿ ಶೇ. 54ರಷ್ಟು ವಿದ್ಯುತ್ ಅನ್ನು ಕಲ್ಲಿದ್ದಲು ಬಳಸಿ ಥರ್ಮಲ್ ಪವರ್ ಪ್ಲಾಂಟ್ ಗಳಿಂದಲೇ ಉತ್ಪಾದನೆ ಮಾಡಲಾಗುತ್ತದೆ.
ಭಾರತದಲ್ಲಿ ಈಗ ಕೊರೊನಾದಿಂದ ಆರ್ಥಿಕತೆಯು ಚೇತರಿಸಿಕೊಂಡು ವಿದ್ಯುತ್ ಗೆ ಭಾರೀ ಬೇಡಿಕೆ ಬಂದಿದೆ. 2019ರ ಆಗಸ್ಟ್ ನಲ್ಲಿ ದೇಶದಲ್ಲಿ ಕೊರೊನಾ ತೀವ್ರವಾಗಿದ್ದಾಗ ಹಾಗೂ ಲಾಕ್ ಡೌನ್ ಕಾರಣದಿಂದ ಕಾರ್ಖಾನೆಗಳು ಬಂದ್ ಆಗಿದ್ದ ಕಾರಣದಿಂದ 106 ಬಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿತ್ತು. ಆದರೆ, 2021ರ ಆಗಸ್ಟ್ ವೇಳೆಗೆ ಭಾರತದಲ್ಲಿ 124 ಬಿಲಿಯನ್ ಯೂನಿಟ್ ಬಳಕೆಯಾಗಿದೆ. 2021ರ ಆಗಸ್ಟ್ ತಿಂಗಳಿನಲ್ಲಿ ಲಾಕ್ ಡೌನ್ ಇರಲಿಲ್ಲ, ಕಾರ್ಖಾನೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಿದ್ದವು. ಇದರಿಂದಾಗಿ ವಿದ್ಯುತ್ ಬಳಕೆ ಹೆಚ್ಚಾಗಿದೆ.
ಕಲ್ಲಿದ್ದಲು ಉರಿಸಿ ವಿದ್ಯುತ್ ಉತ್ಪಾದಿಸುವ ಘಟಕಗಳಿಂದ ಹೆಚ್ಚಿನ ವಿದ್ಯುತ್ ಪೂರೈಕೆಯಾಗಿದೆ. 2019ರಲ್ಲಿ ಒಟ್ಟಾರೆ ವಿದ್ಯುತ್ ನಲ್ಲಿ ಶೇ. 61.9ರಷ್ಟು ವಿದ್ಯುತ್ ಪೂರೈಸಿದ್ದ ಥರ್ಮಲ್ ಪವರ್ ಪ್ಲಾಂಟ್ ಗಳು ವಿದ್ಯುತ್ ಪೂರೈಕೆ ಪ್ರಮಾಣ ಶೇ. 66.4ಕ್ಕೆ ಏರಿಕೆಯಾಗಿತ್ತು. ಜೊತೆಗೆ ದೇಶದಲ್ಲಿ 2.8 ಕೋಟಿ ಮನೆಗಳಿಗೆ ಹೆಚ್ಚುವರಿಯಾಗಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಈ ಮನೆಗಳಲ್ಲಿ ಲೈಟ್, ಫ್ಯಾನ್, ಟಿವಿ ಸೇರಿದಂತೆ ಗೃಹ ಬಳಕೆಯ ಉದ್ದೇಶಗಳಿಗೆ ಹೆಚ್ಚಿನ ವಿದ್ಯುತ್ ಬಳಕೆ ಮಾಡಲಾಗಿದೆ. ಇದರಿಂದಾಗಿ ದೇಶದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಎಂದು ಕೇಂದ್ರದ ಇಂಧನ ಖಾತೆ ಸಚಿವ ರಾಜಕುಮಾರ್ ಸಿಂಗ್ ಹೇಳಿದ್ದಾರೆ.
ಕೋವಿಡ್ ಕಾಲದಲ್ಲೇ 200 ಗೀಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಮಟ್ಟ ಮುಟ್ಟಿದ್ದವು. ಆಗ ಬೇಡಿಕೆಯು 170-180 ಗೀಗಾ ವ್ಯಾಟ್ ಇತ್ತು. ಮತ್ತೆ ವಿದ್ಯುತ್ ಬೇಡಿಕೆಯು 200 ಗೀಗಾ ವ್ಯಾಟ್ ಮುಟ್ಟುವ ನಿರೀಕ್ಷೆ ಇಟ್ಟುಕೊಂಡಿದ್ದೆ ಎಂದು ಕೇಂದ್ರದ ಇಂಧನ ಖಾತೆ ಸಚಿವ ರಾಜಕುಮಾರ್ ಸಿಂಗ್ ಹೇಳಿದ್ದಾರೆ. ದೇಶದಲ್ಲಿ ದಿನೇದಿನೆ ವಿದ್ಯುತ್ಗೆ ಬೇಡಿಕೆ ಹೆಚ್ಚಾಗುತ್ತಿದೆ. ಅಕ್ಟೋಬರ್ 4ರಂದು ದೇಶದಲ್ಲಿ 174 ಗೀಗಾವ್ಯಾಟ್ ವಿದ್ಯುತ್ ಬಳಕೆಯಾಗಿದೆ. ಕಳೆದ ವರ್ಷದ ಆಕ್ಟೋಬರ್ 4ಕ್ಕೆ ಹೋಲಿಸಿದರೆ 15 ಗೀಗಾ ವ್ಯಾಟ್ ಹೆಚ್ಚಿನ ವಿದ್ಯುತ್ ಬಳಕೆಯಾಗಿದೆ.
ದೇಶದಲ್ಲಿ ಕಲ್ಲಿದ್ದಲು ಕೊರತೆಗೆ ಮತ್ತೊಂದು ಪ್ರಮುಖ ಕಾರಣವೆಂದರೆ, ಥರ್ಮಲ್ ಪವರ್ ಪ್ಲಾಂಟ್ ಗಳಲ್ಲಿ ಏಪ್ರಿಲ್-ಜೂನ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಕಲ್ಲಿದ್ದಲು ದಾಸ್ತಾನು ಇತ್ತು. ಜೊತೆಗೆ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಕಲ್ಲಿದ್ದಲು ಉತ್ಪಾದಿಸುವ ಸ್ಥಳಗಳಲ್ಲಿ ನಿರಂತರವಾಗಿ ಮಳೆ ಇತ್ತು. ಇದರಿಂದಾಗಿ ಕಡಿಮೆ ಕಲ್ಲಿದ್ದಲು ಉತ್ಪಾದನೆ ಆಗಿದೆ. ಕಲ್ಲಿದ್ದಲು ಉತ್ಪಾದನಾ ಘಟಕಗಳಿಂದ ಕಡಿಮೆ ಕಲ್ಲಿದ್ದಲು ಪೂರೈಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲ್ಲಿದ್ದಲು ಬೆಲೆ ಏರಿಕೆಯಾಗಿರುವುದರಿಂದ ಕಲ್ಲಿದ್ದಲು ಆಮದನ್ನು ಕಡಿಮೆ ಮಾಡಲು ನಿರಂತರವಾಗಿ ಯತ್ನಿಸಲಾಗುತ್ತಿದೆ. ಇದರಿಂದಾಗಿ ಥರ್ಮಲ್ ಪವರ್ ಪ್ಲಾಂಟ್ ಗಳು ವಿದೇಶಗಳಿಂದ ಕಡಿಮೆ ಕಲ್ಲಿದ್ದಲು ಅನ್ನು ಆಮದು ಮಾಡಿಕೊಳ್ಳುತ್ತಿವೆ. ಕಲ್ಲಿದ್ದಲು ಉತ್ಪಾದನೆ ಹಾಗೂ ಬಳಕೆಯಲ್ಲಿ ಆತ್ಮನಿರ್ಭರ ಭಾರತ್ ಆಗಬೇಕು ಎನ್ನುವುದು ಮೋದಿ ಸರ್ಕಾರದ ಮಹತ್ವಾಕಾಂಕ್ಷೆ. ಇದು ಕೂಡ ಕಡಿಮೆ ಕಲ್ಲಿದ್ದಲು ಆಮದಿಗೆ ಕಾರಣವಾಗಿದ್ದು, ಈಗ ದಾಸ್ತಾನು ಕೊರತೆ ಎದುರಾಗಲು ಕಾರಣ.
ಈಗ ದೇಶದಲ್ಲಿ ಕಲ್ಲಿದ್ದಲಿನ ಕೊರತೆ ಎದುರಾಗಿರುವುದರಿಂದ ಅಂತರ್ ಇಲಾಖೆಯ ಪ್ರತಿನಿಧಿಗಳ ತಂಡ ಪರಿಸ್ಥಿತಿಯನ್ನು ಮಾನಿಟರ್ ಮಾಡುತ್ತಿದೆ. ಇಂಧನ ಇಲಾಖೆ, ರೈಲ್ವೇ ಇಲಾಖೆ, ಕೋಲ್ ಇಂಡಿಯಾ ಲಿಮಿಟೆಡ್, ಸೆಂಟ್ರಲ್ ಎಲೆಕ್ಟ್ರಿಸಿಟಿ ಅಥಾರಿಟಿ, ಪವರ್ ಸಿಸ್ಟಂ ಆಪರೇಷನ್ ಕಾರ್ಪೋರೇಷನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಕಲ್ಲಿದ್ದಲು ಕೊರತೆಯ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ. ದೇಶದಲ್ಲಿ ಕೆಲವು ಥರ್ಮಲ್ ಪವರ್ ಪ್ಲಾಂಟ್ ಗಳಿಗೆ ತಮ್ಮದೇ ಆದ ಕಲ್ಲಿದ್ದಲು ಉತ್ಪಾದನಾ ಗಣಿಗಳಿವೆ. ಅವುಗಳಿಂದ ಹೆಚ್ಚಿನ ಕಲ್ಲಿದ್ದಲು ಉತ್ಪಾದಿಸುವಂತೆ ಸರ್ಕಾರ ಸೂಚಿಸಿದೆ. ತಮ್ಮ ಅಗತ್ಯತೆ ಇರುವಷ್ಟು ಕಲ್ಲಿದ್ದಲು ಅನ್ನು ಬಳಸಿಕೊಂಡು, ಉಳಿದಿದ್ದನ್ನು ದಾಸ್ತಾನು ಕೊರತೆ ಇರುವ ಥರ್ಮಲ್ ಪವರ್ ಪ್ಲಾಂಟ್ ಗಳಿಗೆ ನೀಡುವಂತೆ ಸೂಚಿಸಲಾಗಿದೆ. ಇನ್ನೂ ಈಗಾಗಲೇ ಕಲ್ಲಿದ್ದಲು ಉತ್ಪಾದನೆಗೆ ಎಲ್ಲ ಅಗತ್ಯ ಅನುಮತಿ ಪಡೆದಿರುವ ಗಣಿಗಳಿಂದ ಹೆಚ್ಚಿನ ಕಲ್ಲಿದ್ದಲು ಉತ್ಪಾದಿಸುವಂತೆ ಮಾಡಲು ಕೇಂದ್ರದ ಇಂಧನ ಇಲಾಖೆಯು ಯತ್ನಿಸುತ್ತಿದೆ.
ಕೆಲವು ಕಡೆ ಈಗಾಗಲೇ ಕಲ್ಲಿದ್ದಲು ಉತ್ಪಾದನೆಗೆ ಕ್ಲಿಯರೆನ್ಸ್ ಸಿಕ್ಕಿದೆ. ಇನ್ನೂ ಕೆಲವು ಕಡೆ ಮೈನ್ ಡೆವಲಪ್ ಮತ್ತು ಆಪರೇಟರ್ ಬಿಡ್ಡಿಂಗ್ ಕೂಡ ನಡೆಯುತ್ತಿದೆ. ಈಗಾಗಲೇ ಕಲ್ಲಿದ್ದಲು ಉತ್ಪಾದನೆಗೆ ಒಪ್ಪಿಗೆ ಸಿಕ್ಕಿರುವ ಕಡೆ ಕಲ್ಲಿದ್ದಲು ಉತ್ಪಾದನೆಯನ್ನು ಚುರುಕುಗೊಳಿಸಬಹುದು. ಕ್ಲಿಯರೆನ್ಸ್ ಪೆಂಡಿಂಗ್ ಇರುವುದರ ಬಗ್ಗೆ ಪರಿಸರ ಇಲಾಖೆ ಜೊತೆಗೆ ಚರ್ಚೆ ನಡೆಸುತ್ತಿದ್ದೇನೆ ಎಂದು ಕೇಂದ್ರದ ಇಂಧನ ಖಾತೆ ಸಚಿವ ರಾಜಕುಮಾರ್ ಸಿಂಗ್ ಹೇಳಿದ್ದಾರೆ.
ಥರ್ಮಲ್ ಪವರ್ ಪ್ಲಾಂಟ್ ಗೆ ಪೂರೈಸುವ ಕಲ್ಲಿದ್ದಲುನ್ನು ಕೇಂದ್ರ ಸರ್ಕಾರ ಹೆಚ್ಚಿಸುತ್ತಿದೆ. ಭಾನುವಾರ 248 ರೇಕ್ ಕಲ್ಲಿದ್ದಲು ರವಾನೆಯಾಗಿದ್ದರೆ ಸೋಮವಾರ 263 ರೇಕ್ ಗಳು ಕಲ್ಲಿದ್ದಲು ಗಣಿಗಳಿಂದ ರವಾನೆಯಾಗಿವೆ. ಇನ್ನೂ ಮುಂದಿನ ದಿನಗಳಲ್ಲಿ ಕಲ್ಲಿದ್ದಲು ರವಾನೆಯೂ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಕೇಂದ್ರ ಸರ್ಕಾರವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: 6 ತಿಂಗಳುಗಳವರೆಗೆ ಕಲ್ಲಿದ್ದಲು ಬಿಕ್ಕಟ್ಟು ಮುಂದುವರಿಯಬಹುದು: ಕೇಂದ್ರ ವಿದ್ಯುತ್ ಸಚಿವ
ಕಲ್ಲಿದ್ದಲು ಕಳ್ಳ ಸಾಗಣೆ ಹಗರಣ: ಇಡಿ ಮುಂದೆ ಹಾಜರಾದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ