ಕಲ್ಲಿದ್ದಲು ಪ್ರಕರಣ: ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ನಾಯಕರು,ಪದಾಧಿಕಾರಿಗಳ ಸ್ಥಳಗಳಲ್ಲಿ ಇಡಿ ದಾಳಿ

|

Updated on: Feb 20, 2023 | 2:01 PM

Coal levy case ರಾಜ್ಯದ ರಾಜಧಾನಿ ರಾಯ್‌ಪುರ ಮತ್ತು ದುರ್ಗ್ ಜಿಲ್ಲೆಯಲ್ಲಿ ಇಡಿ ಶೋಧ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲವು ಹಿರಿಯ ನಾಯಕರು, ವಕ್ತಾರರು ಮತ್ತು ಶಾಸಕರ ಆವರಣದ ಮೇಲೆ ಇಡಿ ದಾಳಿ ನಡೆಸಿದೆ.

ಕಲ್ಲಿದ್ದಲು ಪ್ರಕರಣ: ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ನಾಯಕರು,ಪದಾಧಿಕಾರಿಗಳ ಸ್ಥಳಗಳಲ್ಲಿ ಇಡಿ ದಾಳಿ
ಛತ್ತೀಸ್‌ಗಢದಲ್ಲಿ ಇಡಿ ದಾಳಿ
Follow us on

ಛತ್ತೀಸ್‌ಗಢದಲ್ಲಿ (Chhattisgarh) ಆಪಾದಿತ ಕಲ್ಲಿದ್ದಲು ಸುಂಕ ಹಗರಣಕ್ಕೆ (Coal levy case)ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಎಂಟು ಕಾಂಗ್ರೆಸ್ ನಾಯಕರು ಮತ್ತು ಪದಾಧಿಕಾರಿಗಳಿಗೆ ಸಂಬಂಧಿಸಿರುವ ರಾಯ್‌ಪುರದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ED) ಸೋಮವಾರ ದಾಳಿ ನಡೆಸಿದೆ. ಫೆಬ್ರವರಿ 24 ರಿಂದ 26 ನಡೆಯಲಿರುವ ಸರ್ವಸದಸ್ಯರ ಅಧಿವೇಶನಕ್ಕೆ ಕೆಲವು ದಿನಗಳು ಬಾಕಿ ಉಳಿದಿದ್ದು,ಇದರ ನಡುವೆಯೇ ಇಡಿ ದಾಳಿ ನಡೆಸಿದೆ.ಪ್ರಸ್ತುತ ಅಧಿವೇಶನದಲ್ಲಿ 10,000 ಕ್ಕೂ ಹೆಚ್ಚು ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯದ ರಾಜಧಾನಿ ರಾಯ್‌ಪುರ ಮತ್ತು ದುರ್ಗ್ ಜಿಲ್ಲೆಯಲ್ಲಿ ಇಡಿ ಶೋಧ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲವು ಹಿರಿಯ ನಾಯಕರು, ವಕ್ತಾರರು ಮತ್ತು ಶಾಸಕರ ಆವರಣದ ಮೇಲೆ ಇಡಿ ದಾಳಿ ನಡೆಸಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಹಿರಿಯ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು ಮತ್ತು ಮಧ್ಯವರ್ತಿಗಳನ್ನು ಒಳಗೊಂಡ ಕಾರ್ಟೆಲ್ ರಾಜ್ಯದಲ್ಲಿ ಸಾಗಿಸುವ ಪ್ರತಿ ಟನ್ ಕಲ್ಲಿದ್ದಲಿಗೆ ಪ್ರತಿ ಟನ್‌ಗೆ ₹ 25 ಅಕ್ರಮ ಸುಲಿಗೆ ಮಾಡಲಾಗುತ್ತಿದೆ ಎಂದು ಈ ಹಿಂದೆ ಇಡಿ ಚಾರ್ಜ್‌ಶೀಟ್ ಉಲ್ಲೇಖಿಸಿದೆ. ಅಕ್ಟೋಬರ್ 11 ರಂದು ರಾಜ್ಯದಲ್ಲಿ ಬಹು ನಗರಗಳ ದಾಳಿಯನ್ನು ಪ್ರಾರಂಭಿಸಿದ ನಂತರ ಇಡಿ ಮೊದಲು ಐಎಎಸ್ ಅಧಿಕಾರಿ ವಿಷ್ಣೋಯ್, ಇಂದರ್ಮಣಿ ಗ್ರೂಪ್ ಮಾಲೀಕ ಸುನಿಲ್ ಅಗರವಾಲ್ ಮತ್ತು ಪರಾರಿಯಾದ ಉದ್ಯಮಿ ಮತ್ತು ಕಿಂಗ್‌ಪಿನ್ ಸೂರ್ಯಕಾಂತ್ ತಿವಾರಿಯ ಚಿಕ್ಕಪ್ಪ ಲಕ್ಷ್ಮಿಕಾಂತ್ ತಿವಾರಿ ಅವರನ್ನು ಬಂಧಿಸಿತ್ತು.

ನಂತರ, ತಿವಾರಿ ಅವರನ್ನು ಇಡಿ ಬಂಧಿಸಿ ವಿಚಾರಣೆಯ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಇಡಿ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಇದನ್ನು ಬೃಹತ್ ಹಗರಣ” ಎಂದು ಬಣ್ಣಿಸಿದೆ. ಕಲ್ಲಿದ್ದಲು ಸಾಗಣೆಯ ಮೂಲಕ ಅಕ್ರಮ ಹಣದ ಹಗರಣದ ಮೂಲವನ್ನು ಭೂವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆಯು 2020, ಜುಲೈ 15 ರಂದು ಅಧಿಸೂಚನೆಯನ್ನು ಹೊರಡಿಸಿದ ನಂತರ ಪ್ರಾರಂಭವಾಯಿತು.

ಛತ್ತೀಸ್‌ಗಢದಲ್ಲಿ ಕಲ್ಲಿದ್ದಲು ಸಾಗಣೆಯಲ್ಲಿ “ದೊಡ್ಡ ಹಗರಣ” ನಡೆಯುತ್ತಿದೆ ಎಂದು ಇಡಿ ಹೇಳಿಕೆಯಲ್ಲಿ ಹೇಳಿಕೊಂಡಿದೆ, ಇದರ ಅಡಿಯಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಇತರರ “ಕಾರ್ಟೆಲ್” “ಅಕ್ರಮ ಸುಲಿಗೆ ಮಾಡುವ ಸಮಾನಾಂತರ ವ್ಯವಸ್ಥೆಯನ್ನು” ನಡೆಸುತ್ತಿದೆ ಎಂದು ಆರೋಪಿಸಲಾಗಿದೆ. ಈ ಮೂಲಕ ಪ್ರತಿನಿತ್ಯ ಸುಮಾರು ₹2-3 ಕೋಟಿ ಸಂಗ್ರಹಿಸಲಾಗುತ್ತಿದೆ.

“ಈ ಹಗರಣದ ಪ್ರಮುಖ ಕಿಂಗ್‌ಪಿನ್ ಸೂರ್ಯಕಾಂತ್ ತಿವಾರಿ ಮತ್ತು ಅವರ ಸಹಚರರು ಕಲ್ಲಿದ್ದಲಿನ ಮೇಲೆ ಅಕ್ರಮ ಸುಲಿಗೆ ಮಾಡುವ ಸಮಾನಾಂತರ ವ್ಯವಸ್ಥೆಯನ್ನು ನಡೆಸಲು ಕ್ರಿಮಿನಲ್ ಸಂಚು ರೂಪಿಸಿದರು ಮತ್ತು ಅಕ್ರಮ ಮತ್ತು ಲೆಕ್ಕಕ್ಕೆ ರಹಿತ ನಗದು ಸಾಗಣೆಯನ್ನು ಮಾಡುತ್ತಿದ್ದಾರೆ” ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ.

ಬಿಜೆಪಿ ವಿರುದ್ಧ ಸಿಎಂ ಬಘೇಲ್ ವಾಗ್ದಾಳಿ

ಇಂದು ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಸಮಿತಿಯ ಖಜಾಂಚಿ, ಪಕ್ಷದ ಮಾಜಿ ಉಪಾಧ್ಯಕ್ಷ ಮತ್ತು ಶಾಸಕ ಸೇರಿದಂತೆ ನನ್ನ ಅನೇಕ ಸಹೋದ್ಯೋಗಿಗಳ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ ಎಂದು ಬಘೇಲ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.


“ನಾಲ್ಕು ದಿನಗಳ ನಂತರ ರಾಯ್‌ಪುರದಲ್ಲಿ ಕಾಂಗ್ರೆಸ್‌ನ ಸರ್ವಸದಸ್ಯರ ಅಧಿವೇಶನವಿದೆ. ಇಂತಹ ಕೃತ್ಯಗಳ ಮೂಲಕ ಅಧಿವೇಶನದ ಸಿದ್ಧತೆಯಲ್ಲಿ ತೊಡಗಿರುವ ನಮ್ಮ ಸಹೋದ್ಯೋಗಿಗಳನ್ನು ನಿಲ್ಲಿಸುವುದರಿಂದ ನಮ್ಮ ಉತ್ಸಾಹವನ್ನು ಮುರಿಯಲು ಸಾಧ್ಯವಿಲ್ಲ. ‘ಭಾರತ್ ಜೋಡೋ ಯಾತ್ರೆ’ಯ ಯಶಸ್ಸಿನಿಂದ ಬಿಜೆಪಿಗೆ ನಿರಾಸೆಯಾಗಿದೆ. ಅದಾನಿಯ ನಿಜ ಸಂಗತಿ ಬಯಲಿಗೆಳೆದಿದ್ದಾರೆ. ಈ ದಾಳಿ ಗಮನ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ. ದೇಶಕ್ಕೆ ಸತ್ಯ ತಿಳಿದಿದೆ, ನಾವು ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ ಎಂದು ಸಿಎಂ ಹೇಳಿದ್ದಾರೆ.

ಎಲ್ಲೆಲ್ಲಿ ಇಡಿ ದಾಳಿ

ಅಧಿಕಾರಿಗಳ ಪ್ರಕಾರ, ಭಿಲಾಯಿ (ದುರ್ಗ ಜಿಲ್ಲೆ) ಶಾಸಕ ದೇವೇಂದ್ರ ಯಾದವ್, ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಸಮಿತಿಯ ಖಜಾಂಚಿ ರಾಮಗೋಪಾಲ್ ಅಗರವಾಲ್, ಛತ್ತೀಸ್‌ಗಢ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧ್ಯಕ್ಷ ಸುಶೀಲ್ ಸನ್ನಿ ಅಗರವಾಲ್ ಮತ್ತು ಪಕ್ಷದ ವಕ್ತಾರ ಆರ್ ಪಿ ಸಿಂಗ್ ಅವರಿಗೆ ಸೇರಿದ  ಸ್ಥಳಗಳಲ್ಲಿ ಇಂದು ಬೆಳಗ್ಗೆಯಿಂದ ಶೋಧ ನಡೆಯುತ್ತಿದೆ

ಇನ್ನು ಕೆಲವು ಆಡಳಿತ ಪಕ್ಷದ ನಾಯಕರ ಮನೆಗಳ ಮೇಲೂ ದಾಳಿ ನಡೆದಿದೆ.

ಪ್ರಸ್ತುತ ಸರ್ಕಾರದ ಅವಧಿಯಲ್ಲಿ ನಡೆಸಲಾದ ಕಲ್ಲಿದ್ದಲು ಲೆವಿ ಹಗರಣದ ಅಪರಾಧದ ಆದಾಯದ ಫಲಾನುಭವಿಗಳಾಗಿರುವವರ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:09 pm, Mon, 20 February 23