Santro Ravi: ಸ್ಯಾಂಟ್ರೋ ರವಿ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ ಮೈಸೂರಿನ ಒಡನಾಡಿ ಸಂಸ್ಥೆ
ಮೈಸೂರಿನ ಒಡನಾಡಿ ಸಂಸ್ಥೆ ಸದಸ್ಯರಿಂದ ಸ್ಯಾಂಟ್ರೋ ರವಿ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಲಾಗಿದೆ. ಈ ಕುರಿತಾಗಿ ಟಿವಿ9ಗೆ ಒಡನಾಡಿ ಸಂಸ್ಥೆ ಸದಸ್ಯ ಎಂ.ಪರಶುರಾಮ್ ಪ್ರತಿಕ್ರಿಯೆ ನೀಡಿದರು.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸ್ಯಾಂಟ್ರೋ ರವಿ (Santro Ravi) ಪ್ರಕರಣ ಭಾರೀ ಸಂಚಲನ ಹುಟ್ಟು ಹಾಕಿದೆ. ಪ್ರಕರಣವನ್ನು ಬಗೆದಷ್ಟು ಸ್ಯಾಂಟ್ರೋ ರವಿಯ ನಿಜ ಬಣ್ಣ ಬಯಲಾಗುತ್ತಿದೆ. ಸದ್ಯ ಮೈಸೂರಿನ ಒಡನಾಡಿ ಸಂಸ್ಥೆ ಸದಸ್ಯರಿಂದ ಸ್ಯಾಂಟ್ರೋ ರವಿ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಲಾಗಿದೆ. ಈ ಕುರಿತಾಗಿ ಟಿವಿ9ಗೆ ಒಡನಾಡಿ ಸಂಸ್ಥೆ ಸದಸ್ಯ ಎಂ.ಪರಶುರಾಮ್ ಪ್ರತಿಕ್ರಿಯೆ ನೀಡಿದ್ದು, ಅಕ್ರಮವಾಗಿ ಹಣ, ಸೈಟ್ ಸಂಪಾದನೆ ಬಗ್ಗೆ ದಾಖಲೆ ಸಲ್ಲಿಸಿದ್ದೇವೆ. ಎರಡು ಕಂಪನಿಗಳ ಮೂಲಕ ಹವಾಲಾ ಹಣ ವರ್ಗಾವಣೆಯಾಗಿದೆ. ತನ್ನ ಆರ್ಥಿಕ ಅಪರಾಧಗಳಿಗೆ ಸ್ಯಾಂಟ್ರೋ ಕುಮಾರಕೃಪಾ ದುರ್ಬಳಕೆ ಮಾಡಿದ್ದಾರೆ. ಈ ಎಲ್ಲಾ ಅಂಶಗಳು ಒಳಗೊಂಡಂತೆ ಇಡಿಗೆ ದೂರು ನೀಡಿದ್ದೇವೆ. ಇಡಿ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಕುರಿತು ಮತ್ತಷ್ಟು ದಾಖಲೆಗಳನ್ನು ನೀಡುವಂತೆ ತಿಳಿಸಿದ್ದಾರೆ ಎಂದು ಒಡನಾಡಿ ಸಂಸ್ಥೆ ಸದಸ್ಯ ಎಂ.ಪರಶುರಾಮ್ ತಿಳಿಸಿದರು.
ಸ್ಯಾಂಟ್ರೋ ರವಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ಇನ್ನು ಸ್ಯಾಂಟ್ರೋ ರವಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಮೈಸೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಾಳೆ (ಜ.10) ಮುಂದೂಡಿದೆ. ಅಲ್ಲದೆ, ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕರಿಗೆ ನ್ಯಾಯಾಲಯವು ಸೂಚನೆ ನೀಡಿದೆ. ತನ್ನ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ಸ್ಯಾಂಟ್ರೋ ರವಿ, ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ.
ಇದನ್ನೂ ಓದಿ: Santro Ravi Case: ಮಹಿಳೆಯರಿಗೆ ಮತ್ತು ಬರಿಸುವ ಔಷಧಿ ಬೆರೆಸುತ್ತಿದ್ದ ಸ್ಯಾಂಟ್ರೋ ರವಿ ಆಪ್ತ ಪೊಲೀಸರ ವಶಕ್ಕೆ
ರಾಜ್ಯದಿಂದ ಪರಾರಿಯಾಗಿರುವ ಆರೋಪಿ ಸ್ಯಾಂಟ್ರೋ ರವಿ?
ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಸಲ್ಲಿಸಿರುವ ಸ್ಯಾಂಟ್ರೋ ರವಿ ಬಂಧನಕ್ಕೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ನಡುವೆ ಹೊರ ರಾಜ್ಯಕ್ಕೆ ಆರೋಪಿ ಸ್ಯಾಂಟ್ರೋ ರವಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಒಟ್ಟು 11 ತಂಡಗಳನ್ನು ರಚಿಸಿಕೊಂಡು ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಶೋಧ ನಡೆಸಲಾಗುತ್ತಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಪ್ರಕರಣದ ಬಗ್ಗೆ ಮೇಲುಸ್ತುವಾರಿಯನ್ನು ಮೈಸೂರು ಪೊಲೀಸ್ ಆಯುಕ್ತ ರಮೇಶ್ ವಹಿಸಿದ್ದಾರೆ. 11 ತಂಡಕ್ಕೂ ಇನ್ಸ್‌ಪೆಕ್ಟರ್‌ಗಳು ನೇತೃತ್ವ ವಹಿಸಿದ್ದು, ಪ್ರತಿ ತಂಡದಲ್ಲಿ 6 ರಿಂದ 10 ಮಂದಿ ಪೊಲೀಸರು ಇದ್ದಾರೆ.
ನೂರಾರು ಯುವತಿಯರಿಗೆ ಗರ್ಭಪಾತ ಮಾಡಿಸಿದ್ನಾ ರವಿ?
ದಿನಗಳು ಉರುಳುತ್ತಿದ್ದಂತೆ ಸ್ಯಾಂಟ್ರೋ ರವಿಯ ಒಂದೊಂದು ಬೆಚ್ಚಿಬೀಳಿಸುವ ಮಾಹಿತಿ ಹೊರಬೀಳುತ್ತಲೇ ಇದೆ. ಹಲವು ಯುವತಿಯರಿಗೆ ಗರ್ಭಪಾತ ಮಾಡಿಸಿರುವ ಆರೋಪವೂ ಇದೀಗ ಕೇಳಿಬರಲು ಆರಂಭವಾಗಿದೆ. ಹಣದ ಆಸೆ ತೋರಿಸಿ ವೈದ್ಯರನ್ನು ಬಳಸಿಕೊಂಡು ಈ ರೀತಿಯಾಗಿ ಮಾಡುತ್ತಿದ್ದನಂತೆ. ಒಂದು ಬಾರಿ ಪರಿಚಯವಾದ ವೈದ್ಯರಿಂದ ಕನಿಷ್ಟ 5 ಜನರಿಗೆ ಮಾತ್ರ ಗರ್ಭಪಾತ ಮಾಡಿಸುತ್ತಿದ್ದನಂತೆ. ನಂತರ ಬೇರೊಬ್ಬರ ವೈದ್ಯರನ್ನು ಪರಿಚತ ಮಾಡಿಕೊಂಡು ಗರ್ಭಪಾತ ನಡೆಸುತ್ತಿದ್ದನಂತೆ.
ಇದನ್ನೂ ಓದಿ: Santro Ravi: ಸ್ಯಾಂಟ್ರೋ ರವಿ ಸ್ಟೋರಿಯಲ್ಲಿ ಬಿಗ್ ಟ್ವಿಸ್ಟ್, ಬೆಂಗಳೂರು ಟು ಮೈಸೂರ್ ಕಹಾನಿ ಇಲ್ಲಿದೆ
ಏಳು ದಿನವಾದರೂ ಪತ್ತೆಯಾಗದ ಸ್ಯಾಂಟ್ರೋ ರವಿ
ವೇಶ್ಯಾವಾಟಿಕೆ ದಂಧೆ ಪ್ರಕರಣ ಸಂಬಂಧ ಪ್ರಕರಣ ದಾಖಲಾಗಿ ಏಳು ದಿನಗಳ ಕಳೆದರೂ ಪೊಲೀಸರಿಗೆ ಆರೋಪಿ ಸ್ಯಾಂಟ್ರೋ ರವಿಯನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಸಲ್ಲಿಸಿರುವ ಸ್ಯಾಂಟ್ರೋ ರವಿ, ಪೊಲೀಸರ ಕಣ್ಣಿಗೆ ಬೀಳದೆ ತಲೆಮರೆಸಿಕೊಳ್ಳುತ್ತಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:37 pm, Mon, 9 January 23