ನುಸಾ ದುವಾ(ಇಂಡೋನೇಷ್ಯಾ): ಕೆಲವು ವಾರಗಳ ಕಾಲ ಬ್ರಿಟನ್ ಪ್ರಧಾನಿಯಾಗಿದ್ದ ಲಿಜ್ ಟ್ರಸ್ ಅವರಿಗಿಂತ ಭಿನ್ನವಾಗಿ ವ್ಯಾಪಾರ ಒಪ್ಪಂದಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ (Rishi Sunak) ತಮ್ಮ ಮಾತುಗಳ ಮೂಲಕ ಸೂಚಿಸಿದ್ದಾರೆ. ಯುರೋಪಿಯನ್ ಒಕ್ಕೂಟ ತೊರೆದ ನಂತರ ಬ್ರಿಟನ್ (Britain) ಮಾಡಿಕೊಂಡಿರುವ ಒಪ್ಪಂದಗಳ ಟೀಕೆಗಳ ನಂತರ, ಸುನಕ್ ಅವರು ಭಾರತದಂತಹ ದೇಶಗಳೊಂದಿಗೆ ಮಾತುಕತೆಗಳಿಗಾಗಿ ಆತುರಪಡುವುದಿಲ್ಲ ಎಂದು ಹೇಳಿದ್ದಾರೆ. ನನ್ನ ವಿಧಾನವು ವೇಗಕ್ಕಾಗಿ ಗುಣಮಟ್ಟವನ್ನು ತ್ಯಾಗ ಮಾಡದಿರುವ ಮಾರ್ಗವಾಗಿದೆ ಎಂದ ಸುನಕ್ , ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು “ಬದ್ಧರಾಗಿದ್ದೇವೆ” ಎಂದು ಹೇಳಿದರು. ವ್ಯಾಪಾರ ಒಪ್ಪಂದಗಳ (Trade Deal) ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ನಾನು ಸಮಯವನ್ನು ತೆಗೆದುಕೊಳ್ಳಲು ಬಯಸುತ್ತೇನೆ ಎಂದು ರಿಷಿ ಹೇಳಿದ್ದಾರೆ. ಬ್ರಿಟನ್ ಮತ್ತು ಯುನೈಟೆಡ್ ಸ್ಟೇಟ್ಸ್ ತಮ್ಮ ಆರ್ಥಿಕ ಸಂಬಂಧವನ್ನು ಗಾಢವಾಗಿಸಬಹುದು ಎಂದು ರಿಷಿ ಸುನಕ್ ಬುಧವಾರ ಆಶಾವಾದ ವ್ಯಕ್ತಪಡಿಸಿದ್ದಾರೆ. ಆದರೆ ತಾನು ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ವ್ಯಾಪಾರ ಒಪ್ಪಂದದ ಬಗ್ಗೆ ನಿರ್ದಿಷ್ಟವಾಗಿ ಮಾತನಾಡಿಲ್ಲ ಎಂದು ಅವರು ಹೇಳಿದರು.
ಜಿ 20 ಸಭೆಯಲ್ಲಿ, ಬಿಡೆನ್ ಅವರೊಂದಿಗೆ “ನಿರ್ದಿಷ್ಟವಾಗಿ ವ್ಯಾಪಾರ ಒಪ್ಪಂದವನ್ನು ಚರ್ಚಿಸಲಿಲ್ಲ”, ಆದರೆ ಆರ್ಥಿಕ ಸಹಕಾರದ ಬಗ್ಗೆ, ವಿಶೇಷವಾಗಿ ಶಕ್ತಿಯ ಬಗ್ಗೆ ಮಾತನಾಡಿರುವುದಾಗಿ ಸುನಕ್ ಹೇಳಿದ್ದಾರೆ.
ನಮ್ಮ ಆರ್ಥಿಕ ಸಂಬಂಧವನ್ನು ಗಾಢವಾಗಿಸಲು ಅಮೆರಿಕದೊಂದಿಗೆ ಹೆಚ್ಚು ವ್ಯಾಪಾರ ಮಾಡುವ ನಮ್ಮ ಸಾಮರ್ಥ್ಯದ ಬಗ್ಗೆ ನಾನು ಆಶಾವಾದ ಹೊಂದಿದ್ದೇನೆ. ಅದು ವಿಭಿನ್ನ ರೀತಿಯಲ್ಲಿ ಸಂಭವಿಸಬಹುದು, ಸುನಕ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಬಾಲಿಯಲ್ಲಿ ಮೋದಿ-ರಿಷಿ ಸುನಕ್ ಭೇಟಿ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬಾಲಿಯಲ್ಲಿ ಜಿ20 ಶೃಂಗಸಭೆಯಲ್ಲಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿದ್ದು ಉಭಯ ದೇಶಗಳ ನಡುವಿನ ವ್ಯಾಪಾರವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಿದರು. ಅಕ್ಟೋಬರ್‌ನಲ್ಲಿ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೋದಿ ಮತ್ತು ಭಾರತೀಯ ಮೂಲದ ಸುನಕ್ ನಡುವಿನ ಮೊದಲ ಭೇಟಿ ಇದಾಗಿದೆ.
Was great to meet PM @RishiSunak in Bali. India attaches great importance to robust ?? ?? ties. We discussed ways to increase commercial linkages, raise the scope of security cooperation in context of India’s defence reforms and make people-to-people ties even stronger. pic.twitter.com/gcCt35m1uw
— Narendra Modi (@narendramodi) November 16, 2022
ಯುನೈಟೆಡ್ ಕಿಂಗ್‌ಡಮ್‌ನೊಂದಿಗೆ ದೃಢವಾದ ಬಾಂಧವ್ಯಕ್ಕೆ ಭಾರತವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ನಾವು ವಾಣಿಜ್ಯ ಸಂಪರ್ಕಗಳನ್ನು ಹೆಚ್ಚಿಸುವ ಮಾರ್ಗ, ಭಾರತದ ರಕ್ಷಣಾ ಸುಧಾರಣೆಗಳ ಸಂದರ್ಭದಲ್ಲಿ ಭದ್ರತಾ ಸಹಕಾರದ ವ್ಯಾಪ್ತಿಯನ್ನು ಹೆಚ್ಚಿಸುವುದು ಮತ್ತು ಜನರ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವುದರ ಬಗ್ಗೆ ಚರ್ಚಿಸಿದ್ದೇವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.