ಐವರು ಹಿರಿಯ ನಾಯಕರ ಟ್ವಿಟರ್​ ಖಾತೆ ತಾತ್ಕಾಲಿಕ ಅಮಾನತು: ಲಾರ್ಡ್​ ನರೇಂದ್ರ ಮೋದಿ ಕಾರಣವೆಂದ ಕಾಂಗ್ರೆಸ್​

| Updated By: Lakshmi Hegde

Updated on: Aug 12, 2021 | 9:45 AM

ಟ್ವಿಟರ್ ಖಾತೆ ಲಾಕ್​ ಆಗಿದ್ದು ಲಾರ್ಡ್ ನರೇಂದ್ರ ಮೋದಿಯವರಿಂದಲೇ ಎಂದು ಕಾಂಗ್ರೆಸ್​ನ ಸಂವಹನ ವಿಭಾಗದ ಉಸ್ತುವಾರಿ ಪ್ರಣವ್​ ಝಾ ಟ್ವೀಟ್ ಮಾಡಿದ್ದಾರೆ..

ಐವರು ಹಿರಿಯ ನಾಯಕರ ಟ್ವಿಟರ್​ ಖಾತೆ  ತಾತ್ಕಾಲಿಕ ಅಮಾನತು: ಲಾರ್ಡ್​ ನರೇಂದ್ರ ಮೋದಿ ಕಾರಣವೆಂದ ಕಾಂಗ್ರೆಸ್​
ಟ್ವಿಟರ್​ ಪ್ರಾತಿನಿಧಿಕ ಚಿತ್ರ
Follow us on

ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ (Rahul Gandhi) ಯವರ ಟ್ವಿಟರ್​ ಖಾತೆ (Twitter Account)ಯನ್ನು ಲಾಕ್​ ಮಾಡಿದ್ದ ಟ್ವಿಟರ್​, ಬುಧವಾರ ರಣದೀಪ್​ ಸುರ್ಜೇವಾಲಾ ಸೇರಿ ಒಟ್ಟು ಐವರು ಹಿರಿಯ ನಾಯಕರ ಟ್ವಿಟರ್​ ಅಕೌಂಟ್​ಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿತ್ತು ಎಂದು ಕಾಂಗ್ರೆಸ್ (Congress) ಆರೋಪ ಮಾಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್​ ಮೇಕನ್​, ಲೋಕಸಭೆಯ ಕಾಂಗ್ರೆಸ್​ ಸಚೇತಕ ಮಾಣಿಕ್ಯಂ ಠಾಗೋರ್​, ಕಾಂಗ್ರೆಸ್​ನ ಅಸ್ಸಾಂ ಉಸ್ತುವಾರಿ ಮತ್ತು ಮಾಜಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್​, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಷ್ಮಿತಾ ದೇವ್​ ಅವರ ಟ್ವಿಟರ್ ಖಾತೆಗಳನ್ನು ಸಹ ತಾತ್ಕಾಲಿಕವಾಗಿ ಲಾಕ್​ ಮಾಡಲಾಗಿತ್ತು ಎಂದು ಕಾಂಗ್ರೆಸ್ ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಎಐಸಿಸಿ ಸಂವಹನ ವಿಭಾಗದ ಉಸ್ತುವಾರಿ ಪ್ರಣವ್​ ಝಾ, ಟ್ವಿಟರ್ ಖಾತೆ ಲಾಕ್​ ಆಗಿದ್ದು ಲಾರ್ಡ್ ನರೇಂದ್ರ ಮೋದಿಯವರಿಂದಲೇ ಎಂದೂ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ನಮ್ಮನ್ನು ಎಷ್ಟೇ ಲಾಕ್​ ಮಾಡಿದರೂ, ನಾವು ಬೀಗದ ಹಿಂದಿನಿಂದಲೇ ಹೋರಾಟ ಮಾಡುತ್ತೇವೆ ಎಂದೂ ಹೇಳಿಕೊಂಡಿದ್ದಾರೆ.

ಟ್ವಿಟರ್​ ಸರ್ಕಾರದ ಒತ್ತಡಕ್ಕೆ ಮಣಿದು, ರಾಹುಲ್​ ಗಾಂಧಿ ವಿರುದ್ಧ ಇಂಥ ಕ್ರಮಕ್ಕೆ ಮುಂದಾಗುತ್ತಿದೆ ಎಂದೂ ಕಾಂಗ್ರೆಸ್ ಆರೋಪ ಮಾಡಿದೆ. ದೆಹಲಿಯಲ್ಲಿ ಇತ್ತೀಚೆಗೆ 9ವರ್ಷದ ದಲಿತ ಹುಡುಗಿಯನ್ನು ಚಿತಾಗಾರದಲ್ಲಿ ಗ್ಯಾಂಗ್​ರೇಪ್​ ಮಾಡಿ ಹತ್ಯೆ ಮಾಡಲಾಗಿತ್ತು. ಆಕೆಯ ಕುಟುಂಬವನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ್ದ ರಾಹುಲ್​ ಗಾಂಧಿ ಪಾಲಕರ ಫೋಟೋವನ್ನು ಟ್ವೀಟ್ ಮಾಡಿಕೊಂಡಿದ್ದರು. ಹೀಗೆ ಸಂತ್ರಸ್ತೆಯ ಕುಟುಂಬದ ಫೋಟೋ ಬಹಿರಂಗ ಪಡಿಸಿದ ರಾಹುಲ್ ಗಾಂಧಿ ವಿರುದ್ಧ ದೂರು ಕೂಡ ದಾಖಲಾಗಿತ್ತು. ಅವರ ಟ್ವಿಟರ್​​ನ್ನು ಅಮಾನತು ಮಾಡುವಂತೆ ಮಕ್ಕಳ ಹಕ್ಕು ರಕ್ಷಣಾ ರಾಷ್ಟ್ರೀಯ ಆಯೋಗ ಟ್ವಿಟರ್​ ಇಂಡಿಯಾಕ್ಕೆ ಹೇಳಿತ್ತು. ಅದೆಲ್ಲ ಆದ ನಂತರ ರಾಹುಲ್​ ಗಾಂಧಿಯವರ ಟ್ವಿಟರ್ ಖಾತೆ ತಾತ್ಕಾಲಿಕವಾಗಿ ಅಮಾನತುಗೊಂಡಿತ್ತು. ಅದರ ಬೆನ್ನಲ್ಲೇ ಕಾಂಗ್ರೆಸ್​ನ ಕೆಲವು ಹಿರಿಯ ನಾಯಕರ ಅಕೌಂಟ್​ಗಳೂ ಕೂಡ ಲಾಕ್​ ಆಗಿವೆ ಎಂಬುದು ಈಗಿನ ಆರೋಪ.

ಇದನ್ನೂ ಓದಿ: ಕೊರೊನಾ ಮೂರನೇ ಅಲೆ ಆತಂಕ; ಇಂದಿನಿಂದ ತುಮಕೂರಿನಲ್ಲಿ ನಿಷೇಧಾಜ್ಞೆ ಜಾರಿ

ಆಫ್ರಿಕಾ ಪ್ರಜೆಗಳ ಪುಂಡಾಟಕ್ಕೆ ಬ್ರೇಕ್ ಹಾಕಲು ಬೆಂಗಳೂರು ಪೊಲೀಸರಿಂದ ‘ಹಲೋ ಆಫ್ರಿಕಾ’ ಕಾರ್ಯಕ್ರಮ