ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದ ಕಾರಣ ತಲೆಕೂದಲು ಬೋಳಿಸಿ ಪ್ರತಿಭಟನೆ ನಡೆಸಿದ ಲತಿಕಾ ಸುಭಾಶ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪಟ್ಟಿಯಲ್ಲಿ ನನ್ನಂಥಾ ಮಹಿಳೆಗೆ ಸ್ಥಾನ ನೀಡಿಲ್ಲ ಎಂಬುದು ದುಃಖವನ್ನುಂಟು ಮಾಡಿದೆ. ಮಹಿಳಾ ಕಾಂಗ್ರೆಸ್ ಶೇಕಡಾ 20 ಸೀಟುಗಳನ್ನು ಮಹಿಳೆಯರಿಗೆ ನೀಡಬೇಕು ಎಂದು ಒತ್ತಾಯಿಸಿತ್ತು. ಶೇಕಡಾ 20ರಷ್ಟು ಸೀಟುಗಳನ್ನು ನೀಡದೇ ಇದ್ದರೂ ಒಂದು ಜಿಲ್ಲೆಯಿಂದ ಒಬ್ಬರು ಎಂದು ಹದಿನಾಲ್ಕು ಮಹಿಳೆಯರಿಗೆ ಸ್ಥಾನ ಸಿಗಲಿದೆ ಎಂದು ನಾನು ಆಶಿಸಿದ್ದೆ. ಈ ಪಕ್ಷಕ್ಕಾಗಿ 18 ವರ್ಷಗಳಿಂದ ಕೆಲಸ ಮಾಡುತ್ತಿರುವ ಮಹಿಳೆಯರಿದ್ದಾರೆ. ತಿರುವನಂತಪುರಂನ ಹಿರಿಯ ನಾಯಕಿ ಕೆಪಿಸಿಸಿ ಕಾರ್ಯದರ್ಶಿ ರಮಣಿ.ಪಿ.ನಾಯರ್ ಸೇರಿದಂತೆ ಹಲವರನ್ನು ಕಡೆಗಣಿಸಲಾಗಿದೆ. ಪ್ರತಿ ದಿನ ಪಕ್ಷಕ್ಕಾಗಿ ದುಡಿಯುತ್ತೇವೆ. ಚುನಾವಣೆ ಪ್ರಚಾರಕ್ಕಾಗಿ ಓಡಾಡುತ್ತಿದ್ದ ಮಹಿಳಾ ನಾಯಕಿಯರನ್ನು ಅಭ್ಯರ್ಥಿಗಳಾಗಿ ಪರಿಗಣಿಸಿಲ್ಲ. ಪಕ್ಷಕ್ಕಾಗಿ ದುಡಿಯುವ ಮಹಿಳೆಯರನ್ನು ಪರಿಗಣಿಸದೇ ಇರುವುದು ನೋವು ತಂದಿದೆ ಎಂದಿದ್ದಾರೆ ಲತಿಕಾ.
ಮಹಿಳಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ಬಿಂದು ಕೃಷ್ಣಾ ಅವರಿಗೆ ಕೊಲ್ಲಂನಲ್ಲಿ ಸೀಟು ಸಿಗಬೇಕಾದರೆ ಕಣ್ಣೀರು ಹಾಕಬೇಕಾಗಿಬಂತು. ಕಾಯಂಕುಳಂನಲ್ಲಿ ಆರತಿ , ಆರೂರಿನಲ್ಲಿ ಶಾನಿ ಮೋಳ್ ಅವರಿಗೆ ಅವಕಾಶ ಸಿಕ್ಕಿದ್ದಕ್ಕೆ ಖುಷಿ ಇದೆ. ನಾನು ಏಟ್ಟುಮಾನ್ನೂರ್ ಸೀಟು ಬಯಸಿದ್ದೆ. 16ನೇ ವರ್ಷದಿಂದ ನಾನು ಈ ಪಕ್ಷದೊಂದಿಗೆ ನಿಂತವಳು. ಇಂದು ಶಾಸಕರಾಗಿರುವ ಹಲವಾರು ನಾಯಕರಿಗಿಂತ ಹೆಚ್ಚು ಕಾಲ ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಕಳೆದ 20 ವರ್ಷಗಳಲ್ಲಿ ಚುನಾವಣೆ ನಡೆಯುವ ಮುನ್ನ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರು ಕೇಳಿಬರುತ್ತದೆ, ಆದರೆ ಪಟ್ಟಿಯಲ್ಲಿರುವುದಿಲ್ಲ. ಆದರೂ ಪಕ್ಷಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದೆ.
Kerala Mahila Congress chief Lathika Subhash gets her head tonsured in front of the party office in Thiruvananthapuram in protest after being denied the party ticket for Assembly elections.
“I am not joining any party but I’ll resign from my post,” she says. pic.twitter.com/FWme31IEdU
— ANI (@ANI) March 14, 2021
ಒಬ್ಬ ವಿವಾಹಿತೆಯಾದ ಮಹಿಳೆ ಎಂದೂ ಬಯಸದ ತಾಳಿ (ಮಾಂಗಲ್ಯ ಸರ)ದ ಬಗ್ಗೆಯೂ ಕಾಮೆಂಟ್ ಮಾಡಿ ಕೆಲವರು ಪ್ರಶ್ನಿಸಿದ್ದರು. ಪಕ್ಷಕ್ಕಾಗಿ ನಾನು ಅದನ್ನೂ ಸಹಿಸಿದೆ. ಏಟ್ಟುಮಾನ್ನೂರ್ನಲ್ಲಿ ಕೈ ಚಿಹ್ನೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಬಯಸಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಇಷ್ಟವಿತ್ತು. ಆರು ವರ್ಷವಿದ್ದಾಗ ಉಮ್ಮನ್ ಚಾಂಡಿ ಅವರನ್ನು ನೋಡಿ ಕಲಿತು ಬೆಳೆದೆ. 24ನೇ ವರ್ಷದಿಂದ ರಮೇಶ್ ಚೆನ್ನಿತ್ತಲ ಅವರ ಹೆಸರನ್ನು ಜೋಶ್ನಿಂದ ಹೇಳುತ್ತಿದ್ದೆ. ಈ ಬಾರಿ ಏಟ್ಟುಮಾನ್ನೂರ್ ಸೀಟು ಗೆಲ್ಲಬೇಕೆಂದು ನಾಯಕರಲ್ಲಿ ಕಾಂಗ್ರೆಸ್ ಹೇಳಿತ್ತು. ಪಂಚಾಯತ್ ಚುನಾವಣೆ ಮುಗಿಯಲಿ, ಏಟ್ಟುಮಾನ್ನೂರ್ ಸೀಟು ಸಿಗಬಹುದೇ ಎಂಬುದನ್ನು ನೋಡೋಣ ಎಂದಿದ್ದರು . ಆಮೇಲೆ ಅದೇನಾಯ್ತು ಎಂಬುದು ನನಗೆ ತಿಳಿದಿಲ್ಲ ಎಂದಿದ್ದಾರೆ ಲತಿಕಾ.
ಕೇಶಮುಂಡನ ಮಾಡಿ ಪ್ರತಿಭಟನೆ
ಅಭ್ಯರ್ಥಿಗಳ ಪಟ್ಟಿಯಲ್ಲಿ ತನ್ನ ಹೆಸರು ಇಲ್ಲ ಎಂದು ತಿಳಿದ ಕೂಡಲೇ ಲತಿಕಾ ಕೆಪಿಸಿಸಿ ಪ್ರಧಾನ ಕಚೇರಿ ಮುಂದೆ ತಲೆಕೂದಲು ಬೋಳಿಸಿ ಪ್ರತಿಭಟನೆ ನಡೆಸಿದ್ದಾರೆ. ಆನಂತರ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದಾರೆ. ಬೇರೆ ಯಾವುದೇ ಪಕ್ಷ ಸೇರಲ್ಲ, ಕಾಂಗ್ರೆಸ್ ಪಕ್ಷದಲ್ಲೇ ಮುಂದುವರಿಯುತ್ತೇನೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಯೋಚಿಸಿಲ್ಲ. ಊರಿನ ಜನರು ಮತ್ತು ಕುಟುಂಬದವರೊಡನೆ ಮಾತುಕತೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವೆ ಎಂದು ಅವರು ಹೇಳಿದ್ದಾರೆ.
ಇಂದಿರಾಗಾಂಧಿಯ ಅಭಿಮಾನಿಯಾಗಿದ್ದ ಲತಿಕಾ ಬಾಬ್ ಕಟ್ ಮಾಡಿದ್ದರು. ಇದೀಗ ಆ ಕೂದಲನ್ನು ಬೋಳಿಸುತ್ತಿರುವಾಗ ಇತರ ಸದಸ್ಯೆಯರು ಏನೋ ತೋಚದೆ ಕಣ್ಣೀರು ಹಾಕಿದ್ದಾರೆ. ಕೇಶಮುಂಡನದ ನಂತರ ಕಾಂಗ್ರೆಸ್ ಕಾರ್ಯಕರ್ತೆಯರು ಲತಿಕಾ ಅವರನ್ನು ತಬ್ಬಿ ಅತ್ತಿದ್ದಾರೆ. ಆದಾಗ್ಯೂ, ಕೇರಳ ರಾಜಕೀಯದಲ್ಲಿ ಇಲ್ಲಿಯವರೆಗೆ ಕಾಣದ ಪ್ರತಿಭಟನೆಯೊಂದಕ್ಕೆ ಇಲ್ಲಿನ ಜನರು ಸಾಕ್ಷಿಯಾಗಬೇಕಾಗಿ ಬಂತು.