ಪುದುಚೇರಿ ಕಾಂಗ್ರೆಸ್ ಸಭೆಯಲ್ಲಿ ಡಿಎಂಕೆ ಧ್ವಜ ಹಾರಾಟ, ಗಲಾಟೆ; ಭದ್ರತಾ ಸಿಬ್ಬಂದಿ ನಿಯೋಜನೆ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ನೀಡುವವರ ಹೆಸರು ಅಂತಿಮಗೊಳಿಸಲೆಂದು ಸಭೆ ಕರೆಯಲಾಗಿತ್ತು. ಮಾಜಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪುದುಚೇರಿ ಕಾಂಗ್ರೆಸ್ ಸಭೆಯಲ್ಲಿ ಡಿಎಂಕೆ ಧ್ವಜ ಹಾರಾಟ, ಗಲಾಟೆ; ಭದ್ರತಾ ಸಿಬ್ಬಂದಿ ನಿಯೋಜನೆ
ಕಾಂಗ್ರೆಸ್​ ಧ್ವಜ (ಪ್ರಾತಿನಿಧಿಕ ಚಿತ್ರ)
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Mar 14, 2021 | 6:17 PM

ಪುದುಚೇರಿ: ನಗರದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ (Congress Election Committee – CEC) ಸಭೆಯಲ್ಲಿ ನಾಯಕರೊಬ್ಬರು ಡಿಎಂಕೆ ಧ್ವಜ ಹಾರಿಸಿದ್ದರಿಂದ ಆಂತರಿಕ ಭಿನ್ನಮತ ಸ್ಫೋಟಗೊಂಡಿತು. ಪರಸ್ಪರ ಮಾತಿನ ಚಕಮಕಿ, ಘೋಷಣೆಗಳನ್ನು ಕೂಗುವ ವಿದ್ಯಮಾನವೂ ನಡೆಯಿತು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ನೀಡುವವರ ಹೆಸರು ಅಂತಿಮಗೊಳಿಸಲೆಂದು ಸಭೆ ಕರೆಯಲಾಗಿತ್ತು. ಮಾಜಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು. ಜಟಾಪಟಿ ತೀವ್ರಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಧಾನ ಕಚೇರಿ ಎದುರು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಯಿತು.

ಸಭೆಯ ವಿಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೊದಲ್ಲಿ ನಾಯಕರು ಪರಸ್ಪರ ಬೈದಾಡಿಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ. ಏಪ್ರಿಲ್ 6ರಂದು ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷವು ಡಿಎಂಕೆಯೊಂದಿಗೆ ಮೈತ್ರಿಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಕಾಂಗ್ರೆಸ್​ 15 ಮತ್ತು ಡಿಎಂಕೆ 13 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಏಪ್ರಿಲ್ 1ರಂದು ಮತದಾನ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

ಸಮೀಕ್ಷೆಯಲ್ಲಿ ಬಿಜೆಪಿ ಮುನ್ನಡೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಗಳು ಮುನ್ನಡೆ ಸಾಧಿಸಬಹುದು ಎಂಬ ಬಗ್ಗೆ ಈಚೆಗೆ ಟೈಮ್ಸ್ ನೌ ಹಾಗೂ ಸಿ-ವೋಟರ್ ಜಂಟಿಯಾಗಿ ನಡೆಸಿರುವ ಸಮೀಕ್ಷೆಯ ವರದಿಗಳು ಇಣುಕುನೋಟ ನೀಡಿದ್ದವು. ಸಮೀಕ್ಷೆಗಳು ಯಾವಾತ್ತೂ ನಿಜವಾಗುತ್ತವೆ ಎಂದೇನಲ್ಲ. ಹಲವು ಬಾರಿ ಚುನಾವಣಾ ಪೂರ್ವ ಸಮೀಕ್ಷೆಗಳು ಸುಳ್ಳಾಗಿದ್ದೂ ಇದೆ. ವಿಶೇಷವಾಗಿ ವಿವಿಧ ಸಮುದಾಯದ, ಜಾತಿ, ಧರ್ಮಗಳ ಜನರು ಇರುವ ರಾಜ್ಯಗಳಲ್ಲಿ ಸಮೀಕ್ಷೆಗಳು ವಿಫಲವಾಗಿದೆ. ಸಮೀಕ್ಷೆಯ ಮಾಹಿತಿ ಪ್ರಕಾರ ಪುದುಚೇರಿಯಲ್ಲಿ ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರ ಪಡೆಯುವ ನಿರೀಕ್ಷೆ ಇದೆ. ಪುದುಚೇರಿಯಲ್ಲಿ ಇರುವ 30 ಸೀಟ್​ಗಳ ಪೈಕಿ, ಬಿಜೆಪಿ 18 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ವರದಿ ಮಾಡಿತ್ತು.

10 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿ ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ 10 ಸೀಟುಗಳಲ್ಲಿ ಬಿಜೆಪಿ, 4 ಸೀಟುಗಳಲ್ಲಿ ಬಿಜೆಪಿ ಮಿತ್ರಪಕ್ಷ ಎಐಎಡಿಎಂಕೆ ಸ್ಪರ್ಧಿಸಲಿದೆ. ಸೀಟು ಹಂಚಿಕೆ ಬಗ್ಗೆ ಈಚೆಗೆ ನಡೆದ ಚರ್ಚೆಯಲ್ಲಿ ಎಐಎನ್​​ಆರ್ ಕಾಂಗ್ರೆಸ್ 18 ಸೀಟುಗಳಿಗೆ ಬೇಡಿಕೆಯೊಡ್ಡಿ ಕೊನೆಗೆ 16 ಸೀಟುಗಳಿಗೆ ತೃಪ್ತವಾಗಿತ್ತು. ಅದೇ ವೇಳೆ ಉಳಿದ 14 ಸೀಟುಗಳಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಸ್ಪರ್ಧಿಸಲಿದೆ. ಸೀಟು ಹಂಚಿಕೆ ಬಗ್ಗೆ ನಿರ್ಧಾರ ಪ್ರಕಟಿಸಿದ ಪುದುಚೇರಿ ಬಿಜೆಪಿ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನಾ ಎನ್​​ಆರ್ ಕಾಂಗ್ರೆಸ್ ಮತ್ತು ಎಐಎಡಿಎಂಕೆ ಜತೆಗೆ ಸೀಟು ಹಂಚಿಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಎಐಎನ್​​ಆರ್​ಸಿ, ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಕೂಟ ಪುದುಚೇರಿ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕಣಕ್ಕಿಳಿಯಲಿದೆ. ಎನ್​ಆರ್​ಸಿ 16 ಸೀಟುಗಳಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿ ಮತ್ತು ಎಐಎಡಿಎಂಕೆ 14 ಸೀಟು ಗಳಲ್ಲಿ ಸ್ಪರ್ಧಿಸಲಿದೆ. ಎನ್.ರಂಗಸ್ವಾಮಿ ನೇತೃತ್ವದಲ್ಲಿ ನಾವು ಈ ಚುನಾವಣೆ ಸ್ಪರ್ಧಿಸಲಿದ್ದೇವೆ ಎಂದಿದ್ದಾರೆ .

ಇದನ್ನೂ ಓದಿ: ಪುದುಚೇರಿ ಚುನಾವಣೆಯಲ್ಲಿ10 ಸೀಟುಗಳಲ್ಲಿ ಸ್ಪರ್ಧಿಸಲಿದೆ ಬಿಜೆಪಿ

ಇದನ್ನೂ ಓದಿ: ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು? ಸಮೀಕ್ಷೆ ಏನು ಹೇಳುತ್ತಿದೆ?

Published On - 6:16 pm, Sun, 14 March 21