Puducherry Assembly Elections 2021: ಪುದುಚೇರಿ ಚುನಾವಣೆಯಲ್ಲಿ10 ಸೀಟುಗಳಲ್ಲಿ ಸ್ಪರ್ಧಿಸಲಿದೆ ಬಿಜೆಪಿ
Puducherry Elections: ಮಂಗಳವಾರ ಸೀಟು ಹಂಚಿಕೆ ಬಗ್ಗೆ ನಡೆದ ಚರ್ಚೆಯಲ್ಲಿ ಎಐಎನ್ಆರ್ ಕಾಂಗ್ರೆಸ್ (AINRC) 18 ಸೀಟುಗಳಿಗೆ ಬೇಡಿಕೆಯೊಡ್ಡಿ ಕೊನೆಗೆ 16 ಸೀಟುಗಳಿಗೆ ತೃಪ್ತವಾಗಿತ್ತು. ಅದೇ ವೇಳೆ ಉಳಿದ 14 ಸೀಟುಗಳಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಸ್ಪರ್ಧಿಸಲಿದೆ.
ಪುದುಚೇರಿ: ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ 10 ಸೀಟುಗಳಲ್ಲಿ ಬಿಜೆಪಿ (BJP), 4 ಸೀಟುಗಳಲ್ಲಿ ಎಐಎಡಿಎಂಕೆ (AIADMK) ಸ್ಪರ್ಧಿಸಲಿದೆ. ಮಂಗಳವಾರ ಸೀಟು ಹಂಚಿಕೆ ಬಗ್ಗೆ ನಡೆದ ಚರ್ಚೆಯಲ್ಲಿ ಎಐಎನ್ಆರ್ ಕಾಂಗ್ರೆಸ್ (AINRC) 18 ಸೀಟುಗಳಿಗೆ ಬೇಡಿಕೆಯೊಡ್ಡಿ ಕೊನೆಗೆ 16 ಸೀಟುಗಳಿಗೆ ತೃಪ್ತವಾಗಿತ್ತು. ಅದೇ ವೇಳೆ ಉಳಿದ 14 ಸೀಟುಗಳಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಸ್ಪರ್ಧಿಸಲಿದೆ. ಸೀಟು ಹಂಚಿಕೆ ಬಗ್ಗೆ ಮಂಗಳವಾರ ನಿರ್ಧಾರ ಪ್ರಕಟಿಸಿದ ಪುದುಚೇರಿ ಬಿಜೆಪಿ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನಾ ಎನ್ಆರ್ ಕಾಂಗ್ರೆಸ್ ಮತ್ತು ಎಐಎಡಿಎಂಕೆ ಜತೆಗೆ ಸೀಟು ಹಂಚಿಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಎಐಎನ್ಆರ್ಸಿ, ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಕೂಟ ಪುದುಚೇರಿ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕಣಕ್ಕಿಳಿಯಲಿದೆ. ಎನ್ಆರ್ಸಿ 16 ಸೀಟುಗಳಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿ ಮತ್ತು ಎಐಎಡಿಎಂಕೆ 14 ಸೀಟು ಗಳಲ್ಲಿ ಸ್ಪರ್ಧಿಸಲಿದೆ. ಎನ್.ರಂಗಸ್ವಾಮಿ ನೇತೃತ್ವದಲ್ಲಿ ನಾವು ಈ ಚುನಾವಣೆ ಸ್ಪರ್ಧಿಸಲಿದ್ದೇವೆ ಎಂದಿದ್ದಾರೆ .
ಅದೇ ವೇಳೆ ಪಿಎಂಕೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿದೆ. ಎಐಎಡಿಎಂಕೆ,ಬಿಜೆಪಿ, ಎಐಎನ್ಆರ್ಸಿ ಯಾವುದೇ ಪಕ್ಷ ಸೀಟು ಹಂಚಿಕೆ ಮಾಡಿಕೊಳ್ಳುತ್ತಿರುವುದರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಪಿಎಂಕೆ ಪುದುಚೇರಿ ಘಟಕದ ಸಂಚಾಲಕ ಕೆ.ಧನರಾಜು ಮಂಗಳವಾರ ಹೇಳಿದ್ದರು . ಎನ್ ಡಿಎ ಮೈತ್ರಿಕೂಟದ ಅಂಗವಾದರೆ ಪಿಎಂಕೆ ಪಕ್ಷಕ್ಕೆ 5 ಸೀಟುಗಳನ್ನು ನೀಡಬೇಕು ಎಂದು ತಾನು ಸೋಮವಾರ ಬಿಜೆಪಿಗೆ ಪತ್ರ ಬರೆದಿದ್ದೆ. ಆದರೆ ಎಐಎನ್ಆರ್ಸಿ, ಬಿಜೆಪಿ ಮತ್ತು ಎಐಎಡಿಎಂಕೆ ನಡುವೆ ಸೀಟು ಹಂಚಿಕೆ ಮಾತುಕತೆಗಳು ನಡೆದಿರುವ ಬಗ್ಗೆ ನಮಗೆ ತಿಳಿದಿರಲಿಲ್ಲ ಎಂದು ಧನರಾಜು ಹೇಳಿದ್ದಾರೆ.
ಇಡೀ ಪ್ರಕ್ರಿಯೆ ಬಗ್ಗೆ ತಮ್ಮ ಪಕ್ಷಕ್ಕೆ ಏನೂ ಹೇಳದಿರುವುದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಅವರು, ಪಿಎಂಕೆ ಅಧಿಕೃತವಾಗಿ ಗುರುತಿಸಲ್ಪಟ್ಟ ಪಕ್ಷ, ನಾವು ಈ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ. ಪುದುಚೇರಿಯಲ್ಲಿ 30 ವಿಧಾನಸಭಾ ಸೀಟುಗಳಿವೆ. ಈ ಎಲ್ಲ ಸೀಟುಗಳಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದಿದ್ದಾರೆ.
NR Congress, BJP & AIADMK are going to contest the elections together. NRC to contest on 16 seats while BJP & AIADMK to contest on 14. We will face elections in Puducherry under the leadership of N Rangaswamy: Nirmal Kumar Surana, Puducherry BJP incharge#PuducherryElections pic.twitter.com/AKKF3DkPct
— ANI (@ANI) March 9, 2021
ಈ ಹಿಂದೆ ಎನ್ ರಂಗಸ್ವಾಮಿ ನೇತೃತ್ವದ ಎನ್ ಆರ್ ಕಾಂಗ್ರಸ್ ಈ ಬಾರಿ ಏಕಾಂಗಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿತ್ತು. ಪುದುಚೇರಿಯಲ್ಲಿ ಏಪ್ರಿಲ್ 6ರ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೇರಲಿದೆ ಎಂದು ಅಮಿತ್ ಶಾ ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು. ಬಿಜೆಪಿ ಅಧಿಕಾರಕ್ಕೇರುತ್ತದೆ, ಬಿಜೆಪಿಯವರೇ ಮುಖ್ಯಮಂತ್ರಿ ಆಗುತ್ತಾರೆ ಎಂಬ ಅಮಿತ್ ಶಾ ಅವರ ಮಾತು ಎನ್ ಆರ್ ಕಾಂಗ್ರೆಸ್ ಗೆ ಹಿಡಿಸಿರಲಿಲ್ಲ. ಆದರೆ ಈಗ ರಂಗಸ್ವಾಮಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿರುವುದರಿಂದ ಆ ಅಸಮಧಾನ ದೂರವಾಗಿದೆ. ಎನ್. ರಂಗಸ್ವಾಮಿ ಎರಡು ಬಾರಿ ಪುದುಚೇರಿ ಮುಖ್ಯಮಂತ್ರಿ ಆಗಿದ್ದರು. ಒಂದು ಬಾರಿ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಪದವಿಗೇರಿದ್ದು, ಎರಡನೇ ಬಾರಿ ತಮ್ಮದೇ ಆದ ಪಕ್ಷ ಎನ್ಆರ್ ಕಾಂಗ್ರೆಸ್ ನಿಂದ ಅಧಿಕಾರಕ್ಕೇರಿದ್ದರು.
ಪುದುಚೇರಿಯಲ್ಲಿ ಏಪ್ರಿಲ್ 6ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಪುದುಚೇರಿಯಲ್ಲಿ ಅಮಿತ್ ಶಾ ಉದ್ಯೋಗ ಮಂತ್ರ: ನಿರುದ್ಯೋಗ ನಿವಾರಣೆಗೆ ಬಿಜೆಪಿಗೆ ಮತ ನೀಡಿ ಎಂದ ‘ಚಾಣಕ್ಯ’