ಮತ ಬ್ಯಾಂಕ್ ರಾಜಕೀಯ, ತ್ರಿವಳಿ ತಲಾಖ್, ಏಕರೂಪ ನಾಗರಿಕ ಸಂಹಿತೆ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್, ಡಿಎಂಕೆ ವಾಗ್ದಾಳಿ

|

Updated on: Jun 27, 2023 | 6:09 PM

ಮೋದಿಜಿ ಪಾಕಿಸ್ತಾನದ ಕಾನೂನಿನಿಂದ ಯಾಕೆ ಸ್ಫೂರ್ತಿ ಪಡೆಯುತ್ತಿದ್ದಾರೆ? ಅವರು ಇಲ್ಲಿ ತ್ರಿವಳಿ ತಲಾಖ್ ವಿರುದ್ಧ ಕಾನೂನು ಕೂಡ ಮಾಡಿದರು, ಆದರೆ ಯಾವುದೇ ವ್ಯತ್ಯಾಸವನ್ನು ಮಾಡಲಿಲ್ಲ. ಬದಲಾಗಿ ಮಹಿಳೆಯರ ಮೇಲಿನ ಶೋಷಣೆ ಮತ್ತಷ್ಟು ಹೆಚ್ಚಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಮತ ಬ್ಯಾಂಕ್ ರಾಜಕೀಯ, ತ್ರಿವಳಿ ತಲಾಖ್, ಏಕರೂಪ ನಾಗರಿಕ ಸಂಹಿತೆ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್, ಡಿಎಂಕೆ ವಾಗ್ದಾಳಿ
ನರೇಂದ್ರ ಮೋದಿ
Follow us on

ಏಕರೂಪ ನಾಗರಿಕ ಸಂಹಿತೆ (UCC) ಗಾಗಿ ಬ್ಯಾಟಿಂಗ್ ಮಾಡಿ, ದೇಶವನ್ನು ಎರಡು ಕಾನೂನುಗಳ ಮೂಲಕ ನಡೆಸುವ ಬದಲು ಎಲ್ಲರಿಗೂ ಸಮಾನತೆ ಇರಬೇಕು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ ಕೆಲವೇ ಗಂಟೆಗಳ ನಂತರ ವಿರೋಧ ಪಕ್ಷದ ನಾಯಕರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯವರು ಮುಂಬರುವ ಚುನಾವಣೆಗಳುಮತ್ತು ದೇಶದ ನೈಜ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ. ಈ ಬಗ್ಗೆ ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ  ಕಾಂಗ್ರೆಸ್ (Congress) ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಪ್ರತಿಪಕ್ಷಗಳ ಒಗ್ಗಟ್ಟು ದೃಢವಾಗಿದ್ದು ಇದು ಹೀಗೇ ಮುಂದುವರಿಯಲಿದೆ. ದೇಶದ ಬಡತನ, ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಪ್ರಧಾನಿ ಮೊದಲು ಉತ್ತರಿಸಬೇಕು. ಮಣಿಪುರ ವಿಷಯದ ಬಗ್ಗೆ ಅವರು ಎಂದಿಗೂ ಮಾತನಾಡುವುದಿಲ್ಲ, ಕಳೆದ 60 ದಿನಗಳಿಂದ ಇಡೀ ರಾಜ್ಯ ಹೊತ್ತಿ ಉರಿಯುತ್ತಿದೆ. ಅವರು ಈ ಎಲ್ಲಾ ಸಮಸ್ಯೆಗಳಿಂದ ಜನರನ್ನು ವಿಚಲಿತಗೊಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಭೋಪಾಲ್‌ನಲ್ಲಿ ಮಂಗಳವಾರ ಬಿಜೆಪಿಯ ಮೇರಾ ಬೂತ್ ಸಬ್ ಸೇ ಮಜ್‌ಬೂತ್ ಅಭಿಯಾನದಲ್ಲಿ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಯುಸಿಸಿ ಮತ್ತು ತ್ರಿವಳಿ ತಲಾಖ್ ಬಗ್ಗೆಯೂ ಮಾತನಾಡಿದ್ದಾರೆ.

ಏತನ್ಮಧ್ಯೆ, ಪ್ರಧಾನಿ ಧ್ರುವೀಕರಣದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ತಾರಿಕ್ ಅನ್ವರ್ ಆರೋಪಿಸಿದ್ದಾರೆ. ಯಾವುದೇ ಕಾನೂನನ್ನು ರಚಿಸಿದಾಗ ಅದು ಎಲ್ಲರಿಗೂ ಅನ್ವಯಿಸುತ್ತದೆ. ಅವರು ಅದನ್ನು ಅನುಸರಿಸಬೇಕು. ಹಾಗಾದರೆ ಈಗಾಗಲೇ ಅಂಗೀಕಾರವಾಗಿರುವ ಆ ಮಸೂದೆಯನ್ನು ಚರ್ಚಿಸುವ ಅಗತ್ಯ ಏನಿದೆ? ಮುಂಬರುವ ಮಧ್ಯಪ್ರದೇಶ ಚುನಾವಣೆಗಳು ಮತ್ತು ದೇಶಕ್ಕಾಗಿ ಅವರು ಏನನ್ನೂ ಮಾಡದ ಕಾರಣ ಪ್ರಧಾನಿ ಮೋದಿ ಹಾಗೆ ಮಾಡುತ್ತಿದ್ದಾರೆ. ಆದ್ದರಿಂದಲೇ ಅವರು ತ್ರಿವಳಿ ತಲಾಖ್ ಮತ್ತು ಏಕರೂಪ ನಾಗರಿಕ ಸಂಹಿತೆಯಂತಹ ವಿಷಯಗಳ ಬಗ್ಗೆ ಮಾತನಾಡುತ್ತಾರೆ ಎಂದಿದ್ದಾರೆ.

ಪ್ರಧಾನಿ ಮೋದಿ ಒಂಬತ್ತು ವರ್ಷಗಳಿಂದ ಆಡಳಿತ ನಡೆಸುತ್ತಿದ್ದಾರೆ, ಅವರು ಯುಸಿಸಿ ತರಲು ಬಯಸಿದರೆ, ಅವರು ಅದನ್ನು ಮೊದಲೇ ಏಕೆ ಮಾಡಲಿಲ್ಲ? ಇದನ್ನು ಚರ್ಚಿಸಬಹುದಿತ್ತು. ಎಲ್ಲಾ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಅಭಿಪ್ರಾಯ ಹೇಳುತ್ತಿದ್ದರು. ಆದರೆ ಅದನ್ನು ಮಾಡಿಲ್ಲ ಎಂದಿದ್ದಾರೆ.


“ಡಾ ಬಿಆರ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂಬುದನ್ನು ಪ್ರಧಾನಿ ನೆನಪಿಸಿಕೊಳ್ಳಬೇಕು. ದೇಶದ ಎಲ್ಲಾ ವಿಭಾಗಗಳು ಸಂವಿಧಾನದಲ್ಲಿ ನಂಬಿಕೆಯನ್ನು ಹೊಂದಿದ್ದು, ಅದನ್ನು ಬದಲಾಯಿಸಲು ಅಥವಾ ನಾಶಮಾಡಲು ಬಿಡುವುದಿಲ್ಲ ಎಂದು ಎಎನ್‌ಐ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕ ಆರಿಫ್ ಮಸೂದ್ ಹೇಳಿದ್ದಾರೆ.

ಬಿಜೆಪಿ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿರುವ ಜನತಾ ದಳ (ಯುನೈಟೆಡ್) ನಾಯಕ ಕೆಸಿ ತ್ಯಾಗಿ, ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಮಧ್ಯಸ್ಥಗಾರರು ಏಕರೂಪ ನಾಗರಿಕ ಸಂಹಿತೆಯ ವಿಷಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಂಗಳವಾರ ಹೇಳಿದ್ದಾರೆ.

ಯುಸಿಸಿಯನ್ನು ಮೊದಲು ಹಿಂದೂ ಧರ್ಮದಲ್ಲಿ ಪರಿಚಯಿಸಬೇಕು ಎಂದು ಹೇಳಿದ್ದಾರೆ ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್. ಎಸ್‌ಸಿ/ಎಸ್‌ಟಿ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ದೇಶದ ಯಾವುದೇ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ಸಂವಿಧಾನವು ಪ್ರತಿಯೊಂದು ಧರ್ಮಕ್ಕೂ ರಕ್ಷಣೆ ನೀಡಿರುವುದರಿಂದ ನಮಗೆ ಯುಸಿಸಿ ಬೇಡ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ, ಇದನ್ನು ಸರ್ಕಾರ ಮಾಡಬಾರದು ಎಂದಿದ್ದಾರೆ.

ಇದನ್ನೂ ಓದಿ: ತ್ರಿವಳಿ ತಲಾಖ್ ಅನ್ನು ಬೆಂಬಲಿಸುವವರು ಮುಸ್ಲಿಂ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ: ಮೋದಿ

ತ್ರಿವಳಿ ತಲಾಖ್ ಕುರಿತು ಮಾತನಾಡಿದ ಪ್ರಧಾನಿ ಮೋದಿ, ತ್ರಿವಳಿ ತಲಾಖ್ ಪರವಾಗಿ ಮಾತನಾಡುವವರು ಯಾರೇ ಇರಲಿ, ಯಾರೇ ಅದನ್ನು ಪ್ರತಿಪಾದಿಸಲಿ, ಆ ವೋಟ್ ಬ್ಯಾಂಕ್ ಹಸಿದ ಜನರು ಮುಸ್ಲಿಂ ಹೆಣ್ಣು ಮಕ್ಕಳಿಗೆ ದೊಡ್ಡ ಅನ್ಯಾಯ ಮಾಡುತ್ತಿದ್ದಾರೆ. ತ್ರಿವಳಿ ತಲಾಖ್ ಕೇವಲ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡುವುದಿಲ್ಲ. ಇದರಿಂದ ಇಡೀ ಕುಟುಂಬ ಹಾಳಾಗುತ್ತದೆ. ಇದು ಇಸ್ಲಾಮಿನ ಅಗತ್ಯ ಸಿದ್ಧಾಂತವಾಗಿದ್ದರೆ, ಕತಾರ್, ಜೋರ್ಡಾನ್, ಇಂಡೋನೇಷ್ಯಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲಿ ಅದನ್ನು ಏಕೆ ನಿಷೇಧಿಸಲಾಯಿತು ಎಂದು ಕೇಳಿದ್ದಾರೆ

ತ್ರಿವಳಿ ತಲಾಖ್ ಮತ್ತು ಯುಸಿಸಿ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ತ್ರಿವಳಿ ತಲಾಖ್ ನಿಷೇಧವಿದೆ ಎಂದು ಮೋದಿ ಹೇಳಿದ್ದಾರೆ. ಮೋದಿಜಿ ಪಾಕಿಸ್ತಾನದ ಕಾನೂನಿನಿಂದ ಯಾಕೆ ಸ್ಫೂರ್ತಿ ಪಡೆಯುತ್ತಿದ್ದಾರೆ? ಅವರು ಇಲ್ಲಿ ತ್ರಿವಳಿ ತಲಾಖ್ ವಿರುದ್ಧ ಕಾನೂನು ಕೂಡ ಮಾಡಿದರು, ಆದರೆ ಯಾವುದೇ ವ್ಯತ್ಯಾಸವನ್ನು ಮಾಡಲಿಲ್ಲ. ಬದಲಾಗಿ ಮಹಿಳೆಯರ ಮೇಲಿನ ಶೋಷಣೆ ಮತ್ತಷ್ಟು ಹೆಚ್ಚಿದೆ. ಕಾನೂನಿನ ಮೂಲಕ ಸಮಾಜ ಸುಧಾರಣೆ ಆಗಬಾರದು ಎಂದು ನಾವು ಯಾವಾಗಲೂ ಒತ್ತಾಯಿಸುತ್ತಿದ್ದೇವೆ. ಕಾನೂನನ್ನು ಮಾಡಬೇಕಾದರೆ, ಮದುವೆಯಿಂದ ಓಡಿಹೋಗುವ ಪುರುಷರ ವಿರುದ್ಧ ಅದನ್ನು ಮಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ