ಏರ್ ಇಂಡಿಯಾ (Air India) ಇದೀಗ ಮತ್ತೆ ಟಾಟಾ ಸನ್ಸ್ (Tata Sons) ಪಾಲಾಗುತ್ತಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಒಂದು ಪತ್ರವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಈ ಪತ್ರದ ವಿಶೇಷತೆಯೆಂದರೆ ಇದನ್ನು ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಏರ್ ಇಂಡಿಯಾದ ಸಂಸ್ಥಾಪಕ ಆರ್ಜೆಡಿ ಟಾಟಾ (JRD TATA) ಅವರಿಗೆ ಬರೆದಿದ್ದರು. ಜೆಆರ್ಡಿ ಟಾಟಾ ಏರ್ ಇಂಡಿಯಾದ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದ ನಂತರ ಇಂದಿರಾಗಾಂಧಿ(Indira Gandhi) ಅವರಿಗೆ ಬರೆದ ಪತ್ರ ಇದಾಗಿದೆ. ಇಂದಿರಾಗಾಂಧಿ ಜೆಆರ್ಡಿ ಟಾಟಾರಿಗೆ ಬರೆದ ಪತ್ರ ಮತ್ತು ಅದಕ್ಕೆ ಪ್ರತಿಯಾಗಿ ಜೆಆರ್ಡಿ ಟಾಟಾ ಇಂದಿರಾಗಾಂಧಿಗೆ ಬರೆದ ಪತ್ರ ಎರಡನ್ನೂ ಜೈರಾಮ್ ರಮೇಶ್ ಶೇರ್ ಮಾಡಿಕೊಂಡಿದ್ದಾರೆ. ಅಂದಹಾಗೆ ಇಂದಿರಾಗಾಂಧಿ ಈ ಪತ್ರ ಬರೆಯುವಾಗ ಅವರು ಪ್ರಧಾನಮಂತ್ರಿ ಹುದ್ದೆಯಲ್ಲಿ ಇರಲಿಲ್ಲ.
ಪತ್ರವನ್ನು ಶೇರ್ ಮಾಡಿರುವ ಜೈರಾಮ್ ರಮೇಶ್, 1978ರ ಫೆಬ್ರವರಿಯಲ್ಲಿ ಜನತಾ ಪಾರ್ಟಿಯ ಮುರಾರ್ಜಿ ದೇಸಾಯಿ ಸರ್ಕಾರ ಏರ್ ಇಂಡಿಯಾ ಮುಖ್ಯಸ್ಥ ಜೆಆರ್ಡಿ ಟಾಟಾರನ್ನು ಹುದ್ದೆಯಿಂದ ಕೆಳಗೆ ಇಳಿಸಿತು. 1953ರಿಂದಲೂ ಏರ್ ಇಂಡಿಯಾ ಅಧ್ಯಕ್ಷರಾಗಿದ್ದ ಅವರು 1978ರಲ್ಲಿ ಹುದ್ದೆಯಿಂದ ಕೆಳಗೆ ಇಳಿದಾಗ ಇಂದಿರಾ ಗಾಂಧಿ ಪತ್ರ ಬರೆದಿದ್ದರು. ಅವರು ತಮ್ಮ ಕೈಬರಹದಲ್ಲಿ ಬರೆದ ಪತ್ರವಾಗಿತ್ತು. ಅದಕ್ಕೆ ಪ್ರತಿಯಾಗಿ ಜೆಆರ್ಡಿ ಟಾಟಾ ಕೂಡ ಪತ್ರ ಬರೆದಿದ್ದರು ಎಂದು ಕ್ಯಾಪ್ಷನ್ ಬರೆದಿದ್ದಾರೆ.
1978ರ ಫೆಬ್ರವರಿ 1ರಂದು ಮುರಾರ್ಜಿ ದೇಸಾಯಿ ಸರ್ಕಾರ ಜೆಆರ್ಡಿ ಟಾಟಾ ಅವರನ್ನು ಏರ್ ಇಂಡಿಯಾ ಮತ್ತು ಇಂಡಿಯನ್ ಏರ್ಲೈನ್ಸ್ಗಳ ಮಂಡಳಿಗಳಿಂದ ತೆಗೆದುಹಾಕಿತು. ಅದಾದ ನಂತರ 1980ರಲ್ಲಿ ಮತ್ತೆ ಪ್ರಧಾನಿಯಾದ ಇಂದಿರಾಗಾಂಧಿ, ಮತ್ತೆ ಮಂಡಳಿಗಳಿಗೆ ಪುನಃ ನೇಮಕ ಮಾಡಿದರಾದರೂ ಜೆಆರ್ಡಿ ಟಾಟಾ ಅಧ್ಯಕ್ಷರಾಗಲಿಲ್ಲ. ಅದಕ್ಕೂ ಮೊದಲು ಜೆಆರ್ಡಿ ಟಾಟಾ 1978ರಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದಾಗ ಪತ್ರ ಬರೆದಿದ್ದ ಇಂದಿರಾ ಗಾಂಧಿ ಈ ಬಗೆಗಿನ ತಮ್ಮ ನೋವು ವ್ಯಕ್ತಪಡಿಸಿದ್ದರು. ‘ನೀವು ಕೇವಲ ಏರ್ ಇಂಡಿಯಾದ ಅಧ್ಯಕ್ಷರಾಗಿರಲಿಲ್ಲ. ಅದರ ಸಂಸ್ಥಾಪಕರಾಗಿ, ಏರ್ ಇಂಡಿಯಾ ಬಗ್ಗೆ ವೈಯಕ್ತಿಕವಾಗಿ ತುಂಬ ಕಾಳಜಿ ವಹಿಸಿ, ಅದನ್ನು ಪೋಷಿಸಿದ್ದಿರಿ. ಏರ್ ಇಂಡಿಯಾವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವಲ್ಲಿ ನಿಮ್ಮ ಪಾತ್ರ ದೊಡ್ಡದು. ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ’ ಎಂಬಂಥ ಮೆಚ್ಚುಗೆಯ ಮಾತುಗಳನ್ನು ಇಂದಿರಾಗಾಂಧಿ ತಮ್ಮ ಪತ್ರದಲ್ಲಿ ಬರೆದಿದ್ದರು.
In February 1978, JRD Tata was summarily removed by the Morarji Desai Govt as Chairman of Air India—a position he had occupied since March 1953. Here is an exchange that followed between JRD and Indira Gandhi, who was then out of power. Her letter was handwritten. pic.twitter.com/8bFSH1n6Ua
— Jairam Ramesh (@Jairam_Ramesh) October 9, 2021
ಅದಕ್ಕೆ ಪ್ರತಿಯಾಗಿ ಜೆಆರ್ಡಿ ಟಾಟಾ ಪತ್ರ ಬರೆದು, ‘ನಿಮ್ಮ ಮಾತುಗಳಿಂದ ತುಂಬ ಸಂತೋಷವಾಯಿತು. ವಿಮಾನಯಾನ ಸಂಸ್ಥಾಪನೆಯಲ್ಲಿ ನನ್ನ ಪಾತ್ರವನ್ನು ಉಲ್ಲೇಖಿಸಿ ಬರೆದಿದ್ದು, ನಿಜಕ್ಕೂ ನನ್ನ ಮನಸಿಗೆ ಹತ್ತಿರವೆನಿಸಿತು. ನನ್ನ ಸಹೋದ್ಯೋಗಿಗಳು, ಸಿಬ್ಬಂದಿಯ ನಿಷ್ಠೆಯಿಂದ ನನಗೆ ಯಶಸ್ಸು ಸಿಕ್ಕಿತು. ಹಾಗೇ ಸರ್ಕಾರದಿಂದಲೂ ನನಗೆ ಬೆಂಬಲ ಸಿಕ್ಕಿದೆ. ಇವರೆಲ್ಲ ಸಹಕಾರವಿಲ್ಲದೆ ನಾನು ಏನನ್ನೂ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದ್ದರು. 1932ರಲ್ಲಿ ಟಾಟಾ ಏರ್ಲೈನ್ ಸ್ಥಾಪನೆಗೊಂಡಿತ್ತು. ಅದನ್ನು 1953ರಲ್ಲಿ ಕೇಂದ್ರ ಸರ್ಕಾರ ನಿಯಂತ್ರಣಕ್ಕೆ ತೆಗೆದುಕೊಂಡು ಏರ್ ಇಂಡಿಯಾ ಆಯಿತು. ಅದೀಗ ಮತ್ತೆ ಟಾಟಾ ಸಮೂಹಕ್ಕೇ ಸಿಕ್ಕಿದೆ.
ಇದನ್ನೂ ಓದಿ: ‘ತಾಯಿ ಆಗಲು ಬಯಸಿದ್ರು ಸಮಂತಾ, ಆದರೆ..’; ನಾಗ ಚೈತನ್ಯ ಜತೆಗಿನ ಡಿವೋರ್ಸ್ ಬಳಿಕ ನಿರ್ಮಾಪಕಿ ಅಚ್ಚರಿ ಹೇಳಿಕೆ
ಕೊವಿಡ್ ಪರಿಹಾರ ಪಡೆಯಲು ಸ್ವಂತ ಡೆತ್ ಸರ್ಟಿಫಿಕೇಟ್ ನೀಡಿದ ಭೂಪ; ಪೊಲೀಸರಿಂದ ಪಾರಾಗಲೂ ಯೋಜನೆ ರೂಪಿಸಿದ್ದ