ದೆಹಲಿ: ಕಾಂಗ್ರೆಸ್ಗೆ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದ್ದು, ರಾಹುಲ್ ಗಾಂಧಿಯವರೇ ಅಧ್ಯಕ್ಷರಾಗಲೆಂದು ಶೇ.99.9 ಕಾಂಗ್ರೆಸ್ಸಿಗರು ಬಯಸುತ್ತಾರೆ ಎಂದು ಕಾಂಗ್ರೆಸ್ನ ರಾಷ್ಟ್ರೀಯ ಮಾಧ್ಯಮ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ. ಎಐಸಿಸಿ ಸದಸ್ಯರು, ಚುನಾವಣಾ ಸಮಿತಿ ಮತ್ತು ಪಕ್ಷದ ಕಾರ್ಯಕರ್ತರು ಅಧ್ಯಕ್ಷ ಗಾದಿಯಲ್ಲಿ ಯಾರು ಕೂರಬೇಕೆಂದು ಒಕ್ಕೊರೊಲಿನಿಂದ ನಿರ್ಧರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಪಕ್ಷದ ನಾಯಕತ್ವ ಬದಲಿಸುವಂತೆ ಪತ್ರ ಬರೆದಿದ್ದ ಜಿ23 ನಾಯಕರ ಜೊತೆ ನಾಳೆ (ಡಿ.19) ಚರ್ಚೆ ನಡೆಸಲಿದ್ದಾರೆ. ಕಳೆದ ಆಗಸ್ಟ್ನಲ್ಲಿ ಪಕ್ಷದಲ್ಲಿ ಗಮನಾರ್ಹ ಬದಲಾವಣೆ ಕೋರಿ ಪತ್ರ ಬರೆದಿದ್ದರೂ ಕಾಂಗ್ರೆಸ್ ಅಧಿನಾಯಕಿಗೆ ಅವರ ಆಕ್ಷೇಪಗಳನ್ನು ಸಂಪೂರ್ಣ ಪರಿಹರಿಸಲು ಸಾಧ್ಯವಾಗಿರಲಿಲ್ಲ. ಇದೀಗ ನಾಳೆಯ ಚರ್ಚೆಯ ಮುನ್ನವೇ ಸುರ್ಜೇವಾಲಾ ಈ ಹೇಳಿಕೆ ನೀಡಿದ್ದಾರೆ. ಇದು ಶಶಿ ತರೂರ್, ಗುಲಾಂ ನಬೀ ಆಜಾದ್ ಸೇರಿದಂತೆ G23 ನಾಯಕರಿಗೆ ನೀಡಿದ ಎದಿರೇಟು ಎಂದೇ ವಿಶ್ಲೇಷಣೆ ಕೇಳಿಬಂದಿದೆ.
ಗಾಂಧಿ ಪರಿವಾರಕ್ಕೆ ಗಾದಿ ಬೇಡ ಎಂದಿದ್ದ ನಾಯಕರು!
ಮುಳುಗುತ್ತಿರುವ ಹಡಗಿನಂತಾಗಿರುವ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾಗಬೇಕು ಎಂದು ವಿವಿಧ ರಾಜ್ಯಗಳ ಹಿರಿಯ ನಾಯಕರು ಬೇಡಿಕೆಯಿಟ್ಟಿದ್ದರು. ತಾತ್ಕಾಲಿಕವಾಗಿ ಈ ಬೇಡಿಕೆಯನ್ನು ಶಮನಗೊಳಿಸಿದ್ದ ಕಾಂಗ್ರೆಸ್ ವರಿಷ್ಠರು ಕೊನೆಗೂ ಗಾಂಧಿ ಪರಿವಾರದಿಂದ ಅಧ್ಯಕ್ಷ ಗಾದಿ ತಪ್ಪದಂತೆ ನೋಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ, G23 ನಾಯಕರ ಜೊತೆ ಮಾತುಕತೆಯ ಹಿಂದಿನ ದಿನವೇ ಸೋನಿಯಾ ನಿಷ್ಠ ರಣದೀಪ್ ಸುರ್ಜೇವಾಲಾ ಈ ಹೇಳಿಕೆ ನೀಡಿರಬಹುದು ಎಂದು ವಿಶ್ಲೇಷಿಸಲಾಗಿದೆ.