ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಮತ್ತೆ ಮುಂದೂಡಿಕೆ: ಕೊವಿಡ್​ನಿಂದಾಗಿ ಚುನಾವಣೆ ಬೇಡ ಎಂದ ಕಾಂಗ್ರೆಸ್ ನಾಯಕರು

|

Updated on: May 10, 2021 | 4:44 PM

Congress Working Committee: ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಮುಂದೂಡಲ್ಪಟ್ಟಿದ್ದು ಇದು ಮೂರನೇ ಬಾರಿ. ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಜೂನ್ 23ರಂದು ಚುನಾವಣೆ ನಡೆಸುವುದಾಗಿ ತೀರ್ಮಾನಿಸಲಾಗಿತ್ತು.

ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಮತ್ತೆ ಮುಂದೂಡಿಕೆ: ಕೊವಿಡ್​ನಿಂದಾಗಿ ಚುನಾವಣೆ ಬೇಡ ಎಂದ ಕಾಂಗ್ರೆಸ್ ನಾಯಕರು
ಸೋನಿಯಾ ಗಾಂಧಿ- ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
Follow us on

ದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿ ಪಡಿಸಿ ಆಮೇಲೆ ಅದನ್ನು ಮುಂದೂಡಲಾಗಿದೆ. ಕೊವಿಡ್ ಸಾಂಕ್ರಾಮಿಕದ ಹೊತ್ತಲ್ಲಿ ಚುನಾವಣೆ ಬೇಡ ಎಂದು ಕಾಂಗ್ರೆಸ್ ಪಕ್ಷದ ನಾಯಕರು ತೀರ್ಮಾನಿಸಿರುವುದಾಗಿ ಪಕ್ಷದ ಮೂಲಗಳು ಹೇಳಿರುವುದಾಗಿ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಮುಂದೂಡಲ್ಪಟ್ಟಿದ್ದು ಇದು ಮೂರನೇ ಬಾರಿ. ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಜೂನ್ 23ರಂದು ಚುನಾವಣೆ ನಡೆಸುವುದಾಗಿ ತೀರ್ಮಾನಿಸಲಾಗಿತ್ತು. ಆದರೆ ಹಲವಾರು ಸದಸ್ಯರು ಕೊವಿಡ್ ಸಾಂಕ್ರಾಮಿಕದ ನಡುವೆ ಚುನಾವಣೆ ನಡೆಸುವುದು ಬೇಡ ಎಂದು ಹೇಳಿದ ಕಾರಣ, ಚುನಾವಣೆಯನ್ನು ಮುಂದೂಡಲಾಗಿದೆ.

ಇಂದಿನ ಸಭೆಯಲ್ಲಿ, ಪಕ್ಷದ ಹೊಸ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಯ ಕುರಿತು ಚರ್ಚೆ ನಡೆಸಲಾಯಿತು. ಆದರೆ ಹಿರಿಯ ನಾಯಕರಾದ ಅಶೋಕ್ ಗೆಹ್ಲೋಟ್, ಜಿಎನ್ ಆಜಾದ್, ಆನಂದ್ ಶರ್ಮಾ ಅವರು ಕೊವಿಡ್ರ ಕಾರಣದಿಂದಾಗಿ ಈ ಸಮಯದಲ್ಲಿ ಚುನಾವಣೆಯ ಅಗತ್ಯವಿಲ್ಲ ಎಂದು ಹೇಳಿದರು.


ಕಾಂಗ್ರೆಸ್ ಹೈಕಮಾಂಡ್ ಕೋವಿಡ್ -19 ಪರಿಸ್ಥಿತಿ ಮತ್ತು ಐದು ರಾಜ್ಯಗಳಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆ ಕುರಿತು ಚರ್ಚಿಸಿತು. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪುನರಾವರ್ತಿತ ಹಿನ್ನಡೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವನ್ನು ಒಪ್ಪಿಕೊಂಡರು ಮತ್ತು ಕಾಂಗ್ರೆಸ್ ಪಕ್ಷವನ್ನು ಕ್ರಮಬದ್ಧಗೊಳಿಸುವ ಅವಶ್ಯಕತೆಯಿದೆ ಎಂದು ಹೇಳಿದರು.

ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾದ ಪ್ರತಿಯೊಂದು ಅಂಶಗಳನ್ನೂ ಗಮನಿಸಲು ಒಂದು ಸಣ್ಣ ಗುಂಪನ್ನು ಸ್ಥಾಪಿಸಲು ಉದ್ದೇಶಿಸಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.  ಇದೀಗ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನ ಕುರಿತು ಗಂಭೀರ ಆತ್ಮಾವಲೋಕನ ಮಾಡಲು ಉನ್ನತ ಕಾಂಗ್ರೆಸ್ ಸಂಸ್ಥೆಯ ಸಭೆ ಕರೆಯಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪ್ರದರ್ಶನ ಕಳಪೆಯಾಗಿತ್ತು. ಪುದುಚೇರಿಯನ್ನು ಅಧಿಕಾರ ಕಳೆದುಕೊಳ್ಳುವುದರ ಜೊತೆಗೆ ಕೇರಳ ಮತ್ತು ಅಸ್ಸಾಂನಲ್ಲಿ ಅಧಿಕಾರವನ್ನು ಮರಳಿ ಪಡೆಯಲು ವಿಫಲವಾಗಿದೆ.

ಕಾಂಗ್ರೆಸ್ ಪಕ್ಷವು ತನ್ನ ಮಿತ್ರ ಪಕ್ಷವಾದ ಡಿಎಂಕೆ ಸಹಾಯದಿಂದ ತಮಿಳುನಾಡಿನಲ್ಲಿ ಮಾತ್ರ ಅಧಿಕಾರಕ್ಕೆ ಬಂದಿದೆ
ನಮ್ಮ ಗಂಭೀರ ಹಿನ್ನಡೆಗಳನ್ನು ನಾವು ಗಮನಿಸಬೇಕು. ನಾವು ತೀವ್ರ ನಿರಾಶೆಗೊಂಡಿದ್ದೇವೆ. ಈ ರೀತಿಯ ಹಿನ್ನಡೆಗಳಿಗೆ  ಕಾರಣವಾದ ಪ್ರತಿಯೊಂದು ಅಂಶವನ್ನು ನೋಡಲು ಮತ್ತು ಶೀಘ್ರವಾಗಿ ವರದಿ ಮಾಡಲು ಒಂದು ಸಣ್ಣ ಗುಂಪನ್ನು ಸ್ಥಾಪಿಸಲು ನಾನು ಉದ್ದೇಶಿಸಿದ್ದೇನೆ ಎಂದು ಸಭೆಯ ಉದ್ಘಾಟನಾ ಭಾಷಣದಲ್ಲಿ ಸೋನಿಯಾ ಗಾಂಧಿ ಹೇಳಿದ್ದಾರೆ.

2019 ರ ಲೋಕಸಭಾ ಚುನಾವಣೆಯ ನಂತರ ಪಕ್ಷದ ಮುಖಂಡ ರಾಹುಲ್ ಗಾಂಧಿ ರಾಜೀನಾಮೆ ನೀಡಿದಾಗಿನಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಖಾಲಿ ಉಳಿದಿದೆ.

ಇದನ್ನೂ ಓದಿ:  ವಿಧಾನಸಭಾ ಚುನಾವಣೆಗಳಲ್ಲಿ ಹಿನ್ನಡೆ ಬಗ್ಗೆ ಗಂಭೀರ  ಅವಲೋಕನ ನಡೆಸಬೇಕಿದೆ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ

(Congress Working Committee has Decided to put off the election of a new party chief citing the ongoing coronavirus crisis)