ದೇಶದಲ್ಲಿ ಇಂದು ಮತ್ತೊಂದು ಹಂತದ ಕೊವಿಡ್ 19 ಲಸಿಕೆ ಅಭಿಯಾನ ಶುರುವಾಗುತ್ತಿದೆ. 15-18ವರ್ಷದವರಿಗೆ ಇಂದಿನಿಂದ ಕೊವ್ಯಾಕ್ಸಿನ್ ಲಸಿಕೆ (Covaxin Vaccine) ನೀಡಲು ದೇಶಾದ್ಯಂತ ಸಿದ್ಧತೆಗಳು ನಡೆದಿವೆ. ಜ.1ರಿಂದಲೇ ಕೊವಿನ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು. ಹೀಗಾಗಿ ಭಾನುವಾರ ಸಂಜೆ ಹೊತ್ತಿಗೆ ಕೊವಿಡ್ 19 ಲಸಿಕೆಗಾಗಿ ಕೊವಿನ್ ಆ್ಯಪ್(CoWin Portal)ನಲ್ಲಿ 6.35 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ವಯಸ್ಸಿನವರಿಗೆ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆ ಮಾತ್ರ ನೀಡಲಾಗುತ್ತದೆ. ಯಾಕೆಂದರೆ 15-18 ವಯಸ್ಸಿನವರಿಗೆ ತುರ್ತು ಬಳಕೆಗೆ ಕೊವ್ಯಾಕ್ಸಿನ್ ಬಿಟ್ಟು ಇನ್ಯಾವುದೇ ಲಸಿಕೆಗೂ ಅನುಮೋದನೆ ಸಿಕ್ಕಿಲ್ಲ. ಇಂದಿನಿಂದ ಶುರುವಾಗುತ್ತಿರುವ ಹೊಸ ಹಂತದ ಲಸಿಕಾ ಅಭಿಯಾನಕ್ಕಾಗಿ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ, ಅಲ್ಲಿನ ಜನಸಂಖ್ಯೆ ಆಧಾರದ ಮೇಲೆ ಹೆಚ್ಚುವರಿಯಾಗಿ ಕೊವ್ಯಾಕ್ಸಿನ್ ಲಸಿಕೆ ಕಳಿಸಿಕೊಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
15-18 ವರ್ಷದವರಿಗಿನ ಎಲ್ಲರೂ ಕೊವಿಡ್ 19 ಲಸಿಕೆಯನ್ನು ಈ ಹಂತದಲ್ಲಿ ಪಡೆಯಬಹುದು. 15 ವರ್ಷವಾಗಿದೆಯಾ ಎಂಬ ಬಗ್ಗೆ ಯಾವುದೇ ಗೊಂದಲ ಬೇಡ. 2007ನೇ ಇಸ್ವಿಯಲ್ಲಿ ಜನಿಸಿದ ಎಲ್ಲರೂ ಕೊರೊನಾ ಲಸಿಕೆಯನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದೀಗ ವಯಸ್ಕರಿಗೆ ನೀಡಲಾಗುತ್ತಿರುವ ಕೇಂದ್ರದಲ್ಲೇ ಮಕ್ಕಳಿಗೆ ಕೊವ್ಯಾಕ್ಸಿನ್ ನೀಡಿದರೆ ಸ್ವಲ್ಪ ಗೊಂದಲ ಆಗಬಹುದು. ಹಾಗಾಗಿ ಅವರಿಗೆ ಕೊವಿಡ್ 19 ಲಸಿಕೆ ನೀಡಲು ಪ್ರತ್ಯೇಕ ತಂಡ ಇರಬೇಕು. 15-18 ವರ್ಷದವರು ಪ್ರತ್ಯೇಕ ಸಾಲುಗಳಲ್ಲಿಯೇ ನಿಲ್ಲಬೇಕು ಎಂದು ಕೇಂದ್ರ ಸರ್ಕಾರ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಎಲ್ಲಿ ಲಸಿಕೆ ಪಡೆಯಬಹದು
ಸದ್ಯ ದೇಶಾದ್ಯಂತ ಇರುವ ಕೊವಿಡ್ 19 ಲಸಿಕಾ ಕೇಂದ್ರಗಳಲ್ಲಿಯೇ ಇಂದಿನಿಂದ 15-18ವರ್ಷದವರೆಗಿನವರಿಗೆ ಕೂಡ ಕೊರೊನಾ ಲಸಿಕೆ ನೀಡಲಾಗುತ್ತದೆ. ಆದರೆ ಮಕ್ಕಳಿಗಾಗಿ ಪ್ರತ್ಯೇಕ ಕೇಂದ್ರವನ್ನೂ ನಿರ್ಮಿಸಿಕೊಳ್ಳಬಹುದು ಎಂದೂ ಕೇಂದ್ರ ಸರ್ಕಾರ ತಿಳಿಸಿದೆ. ಹಾಗಾಗಿ, ಸ್ಥಳೀಯ ಆಡಳಿತಗಳು ಎಲ್ಲಿ ವ್ಯವಸ್ಥೆ ಮಾಡಿವೆ ಎಂಬುದನ್ನು ಅವರೇ ತಿಳಿಸುತ್ತಾರೆ. ವಿವಿಧ ವಯೋಮಾನಗಳವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಅದರಲ್ಲಿ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಈಗಿರುವ ಕೊರೊನಾ ಲಸಿಕೆ ಕೇಂದ್ರದಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಕ್ಯೂ ಮಾಡಲು ಹೇಳಲಾಗಿದೆ. ಇನ್ನುಳಿದಂತೆ ವಯಸ್ಕರ ಕೊವಿಡ್ 19 ಲಸಿಕೆ ಅಭಿಯಾನಕ್ಕಾಗಿ ಮಾಡಲಾದಂಥ ವ್ಯವಸ್ಥೆಗಳನ್ನೆಲ್ಲ ಮಾಡಲಾಗಿದೆ.
Published On - 7:33 am, Mon, 3 January 22