ವ್ಯಾಕ್ಸಿನ್ ಡ್ರೈ ರನ್: ಭಾರತದ ನಾಲ್ಕು ರಾಜ್ಯಗಳಲ್ಲಿ ಇಂದಿನಿಂದ ಕೊರೊನಾ ಲಸಿಕೆ ರಿಹರ್ಸಲ್!

|

Updated on: Dec 28, 2020 | 10:12 AM

ಡೆಡ್ಲಿ ಕೊರೊನಾಗೆ ಸದ್ಯದಲ್ಲೇ ಲಸಿಕೆ ಸಿಗೋ ಲಕ್ಷಣಗಳು ಕಾಣ್ತಿವೆ. ಮುಂದಿನ ತಿಂಗಳು ಕೊರೊನಾ ‌ಲಸಿಕೆಯನ್ನ ಜನರ ತುರ್ತು ಬಳಕೆಗೆ ಅನುಮೋದಿಸುವ ಸಾಧ್ಯತೆ ಇದೆ. ಲಸಿಕೆ ಸಿಕ್ಕ ಬಳಿಕ ಆದ್ಯತೆ ವಲಯದ ಜನರಿಗೆ ಲಸಿಕೆ ನೀಡಲು ‌ಸಿದ್ದತೆ ಮಾಡಿಕೊಳ್ಳಲಾಗಿದೆ.

ವ್ಯಾಕ್ಸಿನ್ ಡ್ರೈ ರನ್: ಭಾರತದ ನಾಲ್ಕು ರಾಜ್ಯಗಳಲ್ಲಿ ಇಂದಿನಿಂದ ಕೊರೊನಾ ಲಸಿಕೆ ರಿಹರ್ಸಲ್!
ಸಾಂದರ್ಭಿಕ ಚಿತ್ರ
Follow us on

ಕೊರೊನಾ.. ಕೊರೊನಾ.. ಕೊರೊನಾ… ಈ ಡೆಡ್ಲಿ ವೈರಸ್ ಮನುಕುಲಕ್ಕೆ ನೀಡ್ತಿರೋ ಕಾಟ ಒಂದೆರಡಲ್ಲ. ಲಕ್ಷಾಂತರ ಜನ ಈ ವೈರಸ್​ನಿಂದ ಪ್ರಾಣ ಬಿಟ್ಟಿದ್ದಾರೆ. ಇನ್ನೂ ಹಲವರ ಪ್ರಾಣಕ್ಕೆ ಎರವಾಗಲು ಈ ಡೆಡ್ಲಿ ವೈರಸ್ ವೇಷ ಬದಲಿಸಿ ಎಂಟ್ರಿ ಕೊಟ್ಟಿದೆ.

ಇದರ ನಡುವೆ ಈ ವೈರಸ್​ಗೆ ಲಸಿಕೆ ಕಂಡು ಹಿಡಿಯಲು ಹಲವು ಕಂಪನಿಗಳು ಯಶಸ್ವಿಯಾಗಿದ್ದು, ಅಮೆರಿಕ, ಇಂಗ್ಲೆಂಡ್​ನಲ್ಲಿ ಈಗಾಗಲೇ ಕೊರೊನಾ ವೈರಸ್ ವಿರುದ್ಧದ ಲಸಿಕೆ ನೀಡಿಕೆ ಆರಂಭವಾಗಿದೆ. ಅಮೆರಿಕದಲ್ಲಿ ಈಗಾಗಲೇ ಹತ್ತು ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಫೈಝರ್, ಮಾಡೆರ್ನಾ ಕಂಪನಿಯ ಲಸಿಕೆಗಳನ್ನ ಅಮೆರಿಕ, ಇಂಗ್ಲೆಂಡ್ ಜನರ ಬಳಕೆಗೆ ಅನುಮೋದಿಸಲಾಗಿದೆ.

ಭಾರತದಲ್ಲಿ ಕೊರೊನಾ ಲಸಿಕೆ ನೀಡಲು ನಡೆದಿದೆ ಸಿದ್ಧತೆ!
ಭಾರತದಲ್ಲಿ ಇನ್ನೂ ಯಾವುದೇ ಕಂಪನಿಯ ಲಸಿಕೆಯನ್ನ ಜನರ ತುರ್ತು ಬಳಕೆಗೆ ಅನುಮೋದಿಸಿಲ್ಲ. ಆದ್ರೆ, ಭಾರತದಲ್ಲಿ ಲಸಿಕೆಯ ಸಂಗ್ರಹ, ಸಾಗಾಟ, ಲಸಿಕೆ ನೀಡಲು ಸಿದ್ಧತೆಗಳನ್ನ ನಡೆಸಲಾಗುತ್ತಿದೆ. ದೇಶದ 4 ರಾಜ್ಯಗಳಲ್ಲಿ ಲಸಿಕೆ ನೀಡಿಕೆಯ ರಿಹರ್ಸಲ್ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ದೇಶದ ನಾಲ್ಕು ದಿಕ್ಕಿನ ತಲಾ ಒಂದು ರಾಜ್ಯವನ್ನ ಇದಕ್ಕಾಗಿ ಆಯ್ಕೆ ಮಾಡಲಾಗಿದೆ. ಉತ್ತರದಲ್ಲಿ ಪಂಜಾಬ್, ದಕ್ಷಿಣದಲ್ಲಿ ಆಂಧ್ರಪ್ರದೇಶ, ಪಶ್ಚಿಮದಲ್ಲಿ ಗುಜರಾತ್, ಪೂರ್ವದ ಅಸ್ಸಾಂನಲ್ಲಿ ಇಂದಿನಿಂದ ಲಸಿಕೆ ನೀಡಿಕೆ ರಿಹರ್ಸಲ್ ನಡೆಯಲಿದೆ. ಪಂಜಾಬ್​ನ ಎರಡು ಜಿಲ್ಲೆಗಳಾದ ಲೂಧಿಯಾನ ಹಾಗೂ ಭಗತ್ ಸಿಂಗ್ ನಗರ ಜಿಲ್ಲೆಯಲ್ಲಿ ಲಸಿಕೆ ನೀಡಿಕೆಯ‌ ರಿಹರ್ಸಲ್ ನಡೆಸಲಾಗುತ್ತದೆ.

ಇದೇ ರೀತಿ ಇನ್ನೂ ‌ಮೂರು ರಾಜ್ಯಗಳಲ್ಲಿ ಲಸಿಕೆಯ ಡ್ರೈ ರನ್ ನಡೆಯಲಿದೆ.‌
ಲಸಿಕೆ ರಿಹರ್ಸಲ್ ಹೇಗೆ..?
ಲಸಿಕೆ ನೀಡಿಕೆಯ ರಿಹರ್ಸಲ್ ನಿಂದ ಲಸಿಕೆ ನೀಡಿಕೆ ವೇಳೆ ಎದುರಾಗುವ ಸಮಸ್ಯೆಗಳು, ಸವಾಲುಗಳು ಗೊತ್ತಾಗುತ್ತವೆ. ಲಸಿಕೆಯನ್ನ ವಿಮಾನಗಳ ಮೂಲಕ ರಾಜ್ಯಗಳಿಗೆ ಸಾಗಿಸಬೇಕು.‌ ಎಲ್ಲೆಡೆ ರೆಫ್ರಿಜರೇಟರ್ ಇಟ್ಟು, ಅವುಗಳಲ್ಲಿ ಲಸಿಕೆ ಸಂಗ್ರಹಿಸಿಡಬೇಕು.

ಲಸಿಕೆ ನೀಡಿಕೆಗೆ ಫಲಾನುಭವಿಗಳ ಪಟ್ಟಿಯನ್ನು ಕೊವಿನ್ ಆ್ಯಪ್​ನಲ್ಲಿ ರಿಜಿಸ್ಟರ್ ಮಾಡಲಾಗಿರುತ್ತೆ.‌ ಆದ್ಯತೆ ಪಟ್ಟಿಯಲ್ಲಿರೋರಿಗೆ ಮಾತ್ರ ಲಸಿಕೆ ನೀಡಬೇಕು. ಲಸಿಕೆ‌ ನೀಡಿಕೆಗೆ ಸೂಕ್ತ ಸ್ಥಳಾವಕಾಶ ಇರಬೇಕು. ಈಗಾಗಲೇ ಕೇಂದ್ರ ಸರ್ಕಾರ ಲಸಿಕೆ ನೀಡಿಕೆಗೆ ಮಾರ್ಗಸೂಚಿ ನೀಡಿದೆ. ಆ ಮಾರ್ಗಸೂಚಿ ಪ್ರಕಾರ ಲಸಿಕೆ ನೀಡಬೇಕು. ‌ಬೇರೆ ಏನೇನೂ ಸಮಸ್ಯೆ ಎದುರಾಗುತ್ತದೆ ಅನ್ನೋದನ್ನ ತಿಳಿದುಕೊಳ್ಳಲು ಲಸಿಕೆ ನೀಡಿಕೆಯ ಡ್ರೈ ರನ್ ನಡೆಸಲಾಗುತ್ತಿದೆ.

ನಮ್ಮ ದೇಶದಲ್ಲಿ ಗಣ್ಯರಿಗೆ ಭದ್ರತೆ ನೀಡಲು ಕೂಡ ಭದ್ರತಾ ಪಡೆಗಳು ರಿಹರ್ಸಲ್ ನಡೆಸುತ್ತವೆ. ಉಗ್ರರ ವಿರುದ್ಧ ಕಾರ್ಯಾಚರಣೆಯ ರಿಹರ್ಸಲ್ ಕೂಡ ನಡೆಯುತ್ತದೆ. ಬೆಂಕಿ ನಂದಿಸಲು ಕೂಡ ಅಣಕು ಕಾರ್ಯಾಚರಣೆ ನಡೆಯುತ್ತದೆ. ವಿಪತ್ತಿನ‌ ಸಂದರ್ಭದಲ್ಲಿ ಜನರ ರಕ್ಷಣೆಯ ಅಣಕು ಕಾರ್ಯಾಚರಣೆ ನಡೆಯುತ್ತೆ. ಈಗ ಅದೇ ರೀತಿಯಲ್ಲಿ ಕೊರೊನಾ ವೈರಸ್ ವಿರುದ್ಧದ ಲಸಿಕೆ ನೀಡಿಕೆಯ ರಿಹರ್ಸಲ್ ಅಥವಾ ಪೂರ್ವಾಭ್ಯಾಸ ನಡೆಯುತ್ತಿರುವುದು ವಿಶೇಷ. ‌

ಜರ್ಮನಿಯಲ್ಲಿ ಕೊರೊನಾ ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ: 101 ವರ್ಷದ ಅಜ್ಜಿಗೆ ಮೊದಲ ಲಸಿಕೆ

Published On - 6:48 am, Mon, 28 December 20