ದೆಹಲಿ: ಭಾರತದಲ್ಲಿ ಮೊದಲ ಹಂತದಲ್ಲಿ ಅಂದಾಜು 30 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡುವ ಕುರಿತು ಮಾತುಗಳು ಕೇಳೀಬರುತ್ತಿವೆ. ಇದಕ್ಕಾಗಿ ದೇಶದ ಒಟ್ಟು ಜನಸಂಖ್ಯೆಯ 135 ಕೋಟಿ ಜನರಲ್ಲಿ ಪ್ರತಿಯೊಬ್ಬರೂ ಹೆಚ್ಚು ಕಡಿಮೆ 100 ರೂಪಾಯಿಯಂತೆ ದುಡ್ಡು ವ್ಯಯಿಸಬೇಕು ಅನ್ನುತ್ತಿದೆ ಒಂದು ಲೆಕ್ಕಾಚಾರ!
ಹಾಗಂತ, ಇದಾಗಲೇ ಕೊರೊನಾ ಕಾಟದಿಂದ ಬಸವಳಿದಿರುವ ಮಂದಿ ಇದೇನಪ್ಪಾ ಮತ್ತೆ ಜೇಬಿಗೆ ಕತ್ತರಿ ಬಿತ್ತಾ ಅಂತಾ ಗಾಬರಿಯಾಗುವುದು ಬೇಡ. ನಮ್ಮ ದೇಶ ಕೊರೊನಾ ಲಸಿಕೆಗಾಗಿ ಎಷ್ಟು ಖರ್ಚು ಮಾಡಬೇಕಾಗಬಹುದು ಎಂಬುದನ್ನು ಸುಲಭವಾಗಿ ಹೇಳಲು ಈ ಲೆಕ್ಕಾಚಾರ ಅಷ್ಟೇ..
ಕೊರೊನಾ ಲಸಿಕೆಗಾಗಿ ಮೊದಲ ಹಂತದಲ್ಲೇ ಭಾರತ 180 ಕೋಟಿ ಯುಎಸ್ ಡಾಲರ್ ವ್ಯಯಿಸಬೇಕಾಗಬಹುದು ಎಂದು ಗವಿ (GAVI) ಲಸಿಕೆ ನಿರ್ವಹಣಾ ಸಂಸ್ಥೆ ತಿಳಿಸಿದೆ. ಕೊವ್ಯಾಕ್ಸ್ ಲಸಿಕೆ ಹಂಚಿಕೆಗಾಗಿ ವಿಶ್ವಮಟ್ಟದಲ್ಲಿ ಆರ್ಥಿಕ ಸಹಾಯ ನೀಡುವ ಯೋಜನೆ ಇದ್ದರೂ ಅದರ ಹೊರತಾಗಿ ಭಾರತ 140 ರಿಂದ 180 ಕೋಟಿ ಯುಎಸ್ ಡಾಲರ್ ಖರ್ಚು ಮಾಡಬೇಕಾಗಿದೆ ಎಂದು ಗವಿ ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.
ಅಮೆರಿಕಾದ ನಂತರ ವಿಶ್ವಮಟ್ಟದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಭಾರತ ಮುಂದಿನ 6-8 ತಿಂಗಳ ಒಳಗೆ 30 ಕೋಟಿಗೂ ಅಧಿಕ ಮಂದಿಗೆ ಲಸಿಕೆ ವಿತರಿಸುವ ಯೋಚನೆಯಲ್ಲಿದೆ. ಆಸ್ಟ್ರಾಜೆನೆಕಾ, ಸ್ಪುಟ್ನಿಕ್ ವಿ, ಜೈಡಸ್ ಕ್ಯಾಡಿಲಾ ಸಂಸ್ಥೆಗಳ ಕೊರೊನಾ ಲಸಿಕೆ ಸೇರಿದಂತೆ ಭಾರತೀಯ ಮೂಲದ ಭಾರತ್ ಬಯೋಟೆಕ್ ತಯಾರಿಸಿದ ಲಸಿಕೆಯನ್ನೂ ಬಳಸುವ ಸಾಧ್ಯತೆ ಇದೆ.
ಅಧ್ಯಯನಗಳ ಪ್ರಕಾರ ಭಾರತದಲ್ಲಿ ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವಾರಿಯರ್ಸ್ ಮತ್ತು ಗಂಭೀರ ಆರೋಗ್ಯ ಸಮಸ್ಯೆ ಉಳ್ಳವರಿಗೆ ಮಾತ್ರ ಕೊರೊನಾ ಲಸಿಕೆ ನೀಡುವುದಾದರೂ ಮೊದಲ ಹಂತದಲ್ಲೇ 60 ಕೋಟಿ ಡೋಸ್ ಅವಶ್ಯಕತೆ ಇದೆ. ಇದು ಭಾರತದ ಮುಂದೆ ಇರುವ ಅತಿದೊಡ್ಡ ಸವಾಲಾಗಿದೆ.
ಸದ್ಯ ಕೊವ್ಯಾಕ್ಸ್ ಯೋಜನೆಯಡಿ ಭಾರತ 19ರಿಂದ 25 ಕೋಟಿ ಡೋಸ್ ಪಡೆದರೂ ಅದಕ್ಕಾಗಿ ಕನಿಷ್ಠ 140 ಕೋಟಿ ಯುಎಸ್ ಡಾಲರ್ ತಯಾರಿಟ್ಟುಕೊಳ್ಳಬೇಕಿದೆ. ಒಂದುವೇಳೆ ಮೊದಲ ಹಂತದಲ್ಲಿ ಕೇವಲ 9.5 ಕೋಟಿ ಇಂದ 12.5 ಕೋಟಿ ಡೋಸ್ ಮಾತ್ರ ಲಭ್ಯವಾದರೆ ನಂತರದಲ್ಲಿ ಲಸಿಕೆ ಖರೀದಿಸಲು 180 ಕೋಟಿ ಯುಎಸ್ ಡಾಲರ್ ಅಂದರೆ 13,230 ಕೋಟಿಗೂ ಅಧಿಕ ಖರ್ಚು ಮಾಡಬೇಕಾಗಬಹುದು ಎನ್ನಲಾಗಿದೆ.
ವಿಪರ್ಯಾಸವೆಂದರೆ ಕೇವಲ ಕೊರೊನಾ ಲಸಿಕೆಗಾಗಿ ಇಷ್ಟು ಖಚಾರ್ಗಬಹುದು ಎಂದು ವರದಿಗಳು ಹೇಳುತ್ತಿದ್ದರೆ, ಭಾರತದ 2020-21ನೇ ಸಾಲಿನ ಬಜೆಟ್ನಲ್ಲಿ ದೇಶದ ಒಟ್ಟಾರೆ ಆರೋಗ್ಯ ನಿರ್ವಹಣೆಗಾಗಿ ಮೀಸಲಿಟ್ಟಿರುವ ಹಣವೇ 100 ಕೋಟಿಗಿಂತಲೂ ಕಡಿಮೆ ಇದೆ. ಹೀಗಾಗಿ ಕೊರೊನಾ ಲಸಿಕೆಯ ವಿಚಾರದಲ್ಲಿ ಭಾರತ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದುನೋಡಬೇಕಿದೆ.
PM Cares ಫಂಡ್ ಹಣ ಕೊರೊನಾ ಲಸಿಕೆಗೆ ಬಳಕೆಯಾಗುತ್ತಾ?
ಕೆಲ ತಿಂಗಳಿನಿಂದ ಅತಿ ಹೆಚ್ಚು ವಿವಾದಕ್ಕೆ ಒಳಗಾಗಿರುವ ಪಿಎಂ ಕೇರ್ಸ್ ನಿಧಿಯ ಕುರಿತು ಇನ್ನೂ ನಿಖರವಾದ ಮಾಹಿತಿ ಇಲ್ಲ. ಆದರೆ, ಕೆಲವು ಮೂಲಗಳ ಪ್ರಕಾರ ಪಿಎಂ ಕೇರ್ಸ್ನಲ್ಲಿ 8ರಿಂದ10 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗಿರುವ ಸಾಧ್ಯತೆ ಇದೆ.
ಒಂದು ವೇಳೆ ಪಿಎಂ ಕೇರ್ಸ್ ನಿಧಿಯನ್ನು ಕೊರೊನಾ ಲಸಿಕೆ ಖರೀದಿಗಾಗಿ ವ್ಯಯಿಸಿದರೆ ದೊಡ್ಡ ಭಾರವೊಂದನ್ನು ಅತಿ ಸುಲಭವಾಗಿ ನಿಭಾಯಿಸುವುದು ಸಾಧ್ಯ. ಜೊತೆಗೆ, ಸರ್ಕಾರ ಪಿಎಂ ಕೇರ್ಸ್ ನಿಧಿಯನ್ನು ಬಹಿರಂಗ ಪಡಿಸದೆ ಅವ್ಯವಹಾರಕ್ಕೆ ಕೈ ಹಾಕಿದೆ ಎಂಬ ಆರೋಪದಿಂದ ಮುಕ್ತವಾಗುವುದೂ ಸಾಧ್ಯ. ಈ ನಿಟ್ಟಿನಲ್ಲಿ ಮೋದಿ ಸರ್ಕಾರ ಕೊರೊನಾ ಲಸಿಕೆ ಖರೀದಿಗೆ ಪಿಎಂ ಕೇರ್ಸ್ ನಿಧಿ ವಿನಿಯೋಗಿಸಬಹುದು ಎಂಬ ಲೆಕ್ಕಾಚಾರವೂ ಇದೆ.
ಕೊರೊನಾ ಲಸಿಕೆ ಸಂಗ್ರಹಣೆಗೆ ಸಿದ್ಧವಾಯ್ತು ಭಾರತ.. ಅಡ್ಡಪರಿಣಾಮ ತಡೆಗಟ್ಟಲೆಂದೇ ವಿಶೇಷ ತಂಡ ಸ್ಥಾಪನೆ
Published On - 1:18 pm, Thu, 17 December 20