ಗಣರಾಜ್ಯೋತ್ಸವ ದಿನಾಚರಣೆಯಂದೇ ಅಯೋಧ್ಯಾ ಮಸೀದಿಗೆ ಶಂಕು ಸ್ಥಾಪನೆ; ಇದು ಬಾಬ್ರಿ ಮಸೀದಿಗಿಂತಲೂ ವಿಶಾಲ, ವಿಭಿನ್ನ

|

Updated on: Dec 17, 2020 | 2:50 PM

ನಮ್ಮ ಸಂವಿಧಾನವು ಬಹುತ್ವವನ್ನು ಬಿಂಬಿಸುತ್ತದೆ. ಇದನ್ನು ಆಧಾರವಾಗಿರಿಸಿಕೊಂಡೇ ಮಸೀದಿ ನಿರ್ಮಾಣ ಮಾಡಲಾಗುವುದು ಇಂಡೋ-ಇಸ್ಲಾಮಿಕ್ ಸಾಂಸ್ಕೃತಿಕ ಸಂಘದ (IICF) ಕಾರ್ಯದರ್ಶಿ ಅತ್ತರ್ ಹುಸೇನ್ ಮಾಹಿತಿ ನೀಡಿದ್ದಾರೆ.

ಗಣರಾಜ್ಯೋತ್ಸವ ದಿನಾಚರಣೆಯಂದೇ ಅಯೋಧ್ಯಾ ಮಸೀದಿಗೆ ಶಂಕು ಸ್ಥಾಪನೆ; ಇದು ಬಾಬ್ರಿ ಮಸೀದಿಗಿಂತಲೂ ವಿಶಾಲ, ವಿಭಿನ್ನ
ಸಾಂದರ್ಭಿಕ ಚಿತ್ರ
Follow us on

ಲಖನೌ: ಬಾಬ್ರಿ ಮಸೀದಿಗೆ ಪರ್ಯಾಯವಾಗಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಹೊಸ ಮಸೀದಿಯ ಶಂಕುಸ್ಥಾಪನೆ ಗಣರಾಜ್ಯೋತ್ಸವ ದಿನಾಚರಣೆಯಂದೇ ನಡೆಯಲಿದೆ ಎಂದು ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದ ಸಂಘದ ಸದಸ್ಯರು ಹೇಳಿದ್ದಾರೆ. 2021ರ ಜನವರಿ 26ರಂದು ಶಂಕು ಸ್ಥಾಪನೆ ಆಗಲಿದ್ದು, ಮುಂದಿನ ವಾರ ಮಸೀದಿಯ ನೀಲನಕ್ಷೆ ಬಿಡುಗಡೆಯಾಗಲಿದೆ ಎಂದು ಪಿಟಿಐ ವರದಿ ಮಾಡಿದೆ.

ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ನೀಡಲಾಗಿರುವ 5 ಎಕರೆ ಭೂಮಿಯಲ್ಲಿ ಅತ್ಯಂತ ಸುಸಜ್ಜಿತ ಮಸೀದಿ ತಲೆ ಎತ್ತಲಿದೆ. ಅದರ ನಿರ್ಮಾಣ ಕಾರ್ಯ ಆರಂಭಿಸಲು ಗಣರಾಜ್ಯೋತ್ಸವ ದಿನವೇ ಅತ್ಯಂತ ಸೂಕ್ತ ಎಂದು ತೀರ್ಮಾನಿಸಿದ್ದೇವೆ. ನಮ್ಮ ಸಂವಿಧಾನವು ಬಹುತ್ವವನ್ನು ಬಿಂಬಿಸುತ್ತದೆ. ಇದನ್ನು ಆಧಾರವಾಗಿರಿಸಿಕೊಂಡೇ ಮಸೀದಿ ನಿರ್ಮಾಣ ಮಾಡಲಾಗುವುದು ಇಂಡೋ-ಇಸ್ಲಾಮಿಕ್ ಸಾಂಸ್ಕೃತಿಕ ಸಂಘದ (IICF) ಕಾರ್ಯದರ್ಶಿ ಅತ್ತರ್ ಹುಸೇನ್ ಮಾಹಿತಿ ನೀಡಿದ್ದಾರೆ.

ನೂತನ ಮಸೀದಿ ಕೇವಲ ಧಾರ್ಮಿಕ ಕೇಂದ್ರವಷ್ಟೇ ಆಗಿರುವುದಿಲ್ಲ. ಸುಸಜ್ಜಿತ ಆಸ್ಪತ್ರೆ, ಗ್ರಂಥಾಲಯ, ಸಮುದಾಯದ ಭೋಜನ ಶಾಲೆಯನ್ನು ಒಳಗೊಂಡಿರುತ್ತದೆ. ವೃತ್ತಾಕಾರದಲ್ಲಿ ನಿರ್ಮಿತಗೊಳ್ಳಲಿರುವ ಮಸೀದಿಯಲ್ಲಿ ಏಕಕಾಲಕ್ಕೆ 2 ಸಾವಿರ ಜನ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗುವುದು. ಇದಕ್ಕೆ ಸಂಬಂಧಿಸಿದ ನೀಲನಕ್ಷೆ ಡಿಸೆಂಬರ್ 19ರಂದು ಅನಾವರಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್ 9 ರಂದು ಸರ್ವೋಚ್ಛ ನ್ಯಾಯಾಲಯ ರಾಮಜನ್ಮಭೂಮಿಗೆ ಸಂಬಂಧಿಸಿದಂತೆ ತೀರ್ಪು ನೀಡಿತ್ತು. ಅದರಂತೆಯೇ ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟು ಮಸೀದಿಗಾಗಿ ಸುನ್ನಿ ವಕ್ಫ್​ ಬೋರ್ಡಿಗೆ ಉತ್ತರಪ್ರದೇಶದ ಪ್ರಮುಖ ಜಾಗವೊಂದರಲ್ಲಿ 5 ಎಕರೆ ಜಾಗ ನೀಡಲು ನಿದೇರ್ಶಿಸಿತ್ತು. ಹಾಗೆಯೇ ರಾಜ್ಯ ಸರ್ಕಾರ ಅಯೋಧ್ಯ ಬಳಿಯ ಧನ್ನಿಪುರದಲ್ಲಿ ನೀಡಿದ ಜಾಗದಲ್ಲಿ ನೂತನ ಮಸೀದಿಯನ್ನು ಕಟ್ಟಲು ಯೋಜನೆ ರೂಪಿಸಲಾಗಿದೆ.

ಹೊಸ ಮಸೀದಿಯು ಬಾಬ್ರಿಗಿಂತಲೂ ವಿಶಾಲವಾಗಿರಲಿದ್ದು, ಆಕಾರ ಸಂಪೂರ್ಣ ಭಿನ್ನವಾಗಿರಲಿದೆ. ಆಸ್ಪತ್ರೆಯು ಮಸೀದಿಯ ಕೇಂದ್ರ ಬಿಂದುವಾಗಿರುತ್ತದೆ. ಅಲ್ಲಿ ಇಸ್ಲಾಂ ಧರ್ಮಗುರುಗಳ ಆಶಯಕ್ಕೆ ಅನುಗುಣವಾಗಿ ಮಾನವೀಯತೆಯನ್ನೇ ಮೂಲಮಂತ್ರವಾಗಿರಿಸಿಕೊಂಡು ಸೇವೆ ಮಾಡಲಾಗುವುದು. ಅಂತೆಯೇ, ಆಸ್ಪತ್ರೆಯಲ್ಲಿ 300 ಬೆಡ್​ಗಳನ್ನು ಒಳಗೊಂಡ ವಿಶೇಷ ಘಟಕ ಇರಲಿದ್ದು ಉಚಿತ ಸೇವೆಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

ಆಸ್ಪತ್ರೆಯು ಮಾಮೂಲಿ ಕಾಂಕ್ರಿಟ್ ನಿರ್ಮಿತ ಕಟ್ಟಡದಂತೆ ಇರುವುದಿಲ್ಲ. ಅದರಲ್ಲಿ ಮಸೀದಿಯಲ್ಲಿರುವ ಶಿಲ್ಪಕಲೆಗಳ ಮಾದರಿಯನ್ನು ರಚಿಸಲಾಗಿರುತ್ತದೆ. ಇಸ್ಲಾಂ ಧರ್ಮದ ಚಿಹ್ನೆಗಳು ಮತ್ತು ಅದಕ್ಕೆ ಸಂಬಂಧಿಸಿದ ಕ್ಯಾಲಿಗ್ರಫಿ ಇರಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಆಸ್ಪತ್ರೆಗೆ ಬೇಕಾದ ವಿದ್ಯತ್​ ಸೌರಶಕ್ತಿಯ ಮೂಲಕ ಉತ್ಪಾದನೆಯಾಗುವ ವ್ಯವಸ್ಥೆ ಮಾಡಲಾಗುವುದು. ನಿರ್ಮಾಣ ಕಾರ್ಯಕ್ಕೆ ದಾನಿಗಳಿಂದ ನೆರವನ್ನು ಬಯಸುತ್ತಿದ್ದೇವೆ. ಇಸ್ಲಾಂ ಧರ್ಮಕ್ಕೆ ಸೇರಿದ ಅನಿವಾಸಿ ಭಾರತೀಯರಿಂದ ದೇಣಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಶ್ರೀರಾಮ ಮಂದಿರ ನಿರ್ಮಾಣಕ್ಕೆ ರಾಮಭಕ್ತರಿಂದ ತಾಮ್ರದ ಕಾಣಿಕೆ ಆಹ್ವಾನ

Published On - 2:28 pm, Thu, 17 December 20