Delhi Chalo | ದೆಹಲಿ ಗಡಿಭಾಗದಲ್ಲಿ ವಿಪರೀತ ಚಳಿಗೆ ಪ್ರತಿಭಟನಾ ನಿರತ ರೈತ ಸಾವು
ಕಳೆದ 22 ದಿನಗಳಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ಸ್ಥಳದಲ್ಲೇ 37ರ ಹರೆಯದ ರೈತರೊಬ್ಬರು ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನವದೆಹಲಿ: ಕೇಂದ್ರದ ಕೃಷಿ ಕಾನೂನು ವಿರೋಧಿಸಿ ದೆಹಲಿ –ಹರ್ಯಾಣ ಗಡಿಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೊಬ್ಬರು ಚಳಿಯಿಂದ ಸಾವಿಗೀಡಾಗಿದ್ದಾರೆ. ಕಳೆದ 22 ದಿನಗಳಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ಸ್ಥಳದಲ್ಲೇ 37ರ ಹರೆಯದ ರೈತರೊಬ್ಬರು ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸದೆ ಇರುವುದರಿಂದ ಮನನೊಂದು ಹರ್ಯಾಣ ಗುರುದ್ವಾರಾದ ಅರ್ಚಕ ಬಾಬಾ ರಾಮ್ ಸಿಂಗ್ ಎಂಬವರು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ದೆಹಲಿಯಲ್ಲಿ ಈ ಘಟನೆ ನಡೆದಿದೆ. ಬುಧವಾರ ಸಿಂಘು ಗಡಿ ಬಳಿಯ ಕುಂಡಲಿ ಎಂಬಲ್ಲಿ ಬಾಬಾ ರಾಮ್ ಸಿಂಗ್ (65) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರಿಗೆ ಆತ್ಮಹತ್ಯೆ ಟಿಪ್ಪಣಿ ಸಿಕ್ಕಿದ್ದು ಅದರಲ್ಲಿ ಈ ರೀತಿ ಬರೆದಿದೆ.
‘ರೈತರ ಕಷ್ಟಗಳನ್ನು ನಾನು ನೋಡಿದ್ದೇನೆ. ಮನಸ್ಸಿಗೆ ನೋವಾಗಿದೆ. ಸರ್ಕಾರ ನ್ಯಾಯ ನೀಡುತ್ತಿಲ್ಲ. ಇದು ಅನ್ಯಾಯ. ಇನ್ನೊಬ್ಬರನ್ನು ದಮನ ಮಾಡುವುದು ಪಾಪ ಕೃತ್ಯ. ಜನರು ರೈತರಿಗೆ ಬೆಂಬಲ ನೀಡಿದ್ದು, ಅನ್ಯಾಯದ ವಿರುದ್ಧ ಹಲವಾರು ರೀತಿಯಲ್ಲಿ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ರೈತರಿಗೆ ಬೆಂಬಲ ಸೂಚಿಸಿ ಮತ್ತು ಸರ್ಕಾರದ ಸರ್ವಾಧಿಕಾರವನ್ನು ಖಂಡಿಸಿ ನಾನು ನನ್ನ ಬದುಕು ಅಂತ್ಯಗೊಳಿಸುತ್ತಿದ್ದೇನೆ. ಅದು ಅನ್ಯಾಯ ವಿರುದ್ಧದ ದನಿ. ಇದು ಶ್ರಮಿಕ ರೈತರಿಗೆ ಬೆಂಬಲ ನೀಡುವ ದನಿ’ ಎಂದಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕರ್ನಾಲ್ಗೆ ಒಯ್ಯಲಾಗಿದೆ. ಅಲ್ಲಿಂದ ಸಿಂಘ್ರಾ ಗ್ರಾಮದಲ್ಲಿರುವ ನಾನಾಸ್ಕರ್ ಗುರುದ್ವಾರಕ್ಕೆ ತೆಗೆದುಕೊಂಡು ಹೋಗಲಾಗುವುದು. ಅಂತ್ಯ ಸಂಸ್ಕಾರ ಶುಕ್ರವಾರ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಟಿಕ್ರಿ ಗಡಿಭಾಗದಲ್ಲಿ ರೈತ ಸಾವು
ಟಿಕ್ರಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಟಿಂಡಾ ಜಿಲ್ಲೆಯ ಜೈ ಸಿಂಗ್ ಎಂಬ ರೈತ ಹೃದಯ ಸ್ತಂಭನದಿಂದ ಸಾವಿಗೀಡಾಗಿದ್ದಾರೆ. ನವೆಂಬರ್ ತಿಂಗಳ ಕೊನೆಯಲ್ಲಿ ಆರಂಭವಾಗಿ ಈಗಲೂ ಮುಂದುವರಿಯುತ್ತಿರುವ ರೈತರ ಪ್ರತಿಭಟನೆಯಲ್ಲಿ 20 ದಿನಗಳಲ್ಲಿ 22 ಮಂದಿ ರೈತರು ಸಾವಿಗೀಡಾಗಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
ಸಾವಿಗೀಡಾದ ರೈತರ ಪಟ್ಟಿ ಸಿದ್ದಪಡಿಸುತ್ತಿವೆ ರೈತ ಸಂಘಗಳು ಸಿಂಘು ಮತ್ತು ಟಿಕ್ರಿ ಗಡಿಭಾಗದಲ್ಲಿ ಪ್ರತಿಭಟನೆಯ ವೇಳೆ ಸಾವಿಗೀಡಾದ ರೈತರ ಪಟ್ಟಿಯನ್ನು ರೈತ ಸಂಘಗಳು ಸಿದ್ಧಪಡಿಸಿವೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಕೀರ್ತಿ ಕಿಸಾನ್ ಸಂಘಟನೆಯ ಸದಸ್ಯ ರಾಜಿಂದರ್ ಸಿಂಗ್, ನಮಗೆ ಇಲ್ಲಿಯವರೆಗೆ ಪಂಜಾಬ್ ಮತ್ತು ಹರ್ಯಾಣ ಸರ್ಕಾರದಿಂದ ಸಾಕಷ್ಟು ಸಹಾಯ ಸಿಕ್ಕಿಲ್ಲ.ಮೃತ ರೈತರ ಕುಟುಂಬಕ್ಕೆ ನೌಕರಿ ಮತ್ತು ಪರಿಹಾರ ಸಿಗಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ ಎಂದಿದ್ದಾರೆ.
ನವೆಂಬರ್ 27ರಂದು 45ರ ಹರೆಯದ ಧನ್ನಾ ಸಿಂಗ್ ಎಂಬ ರೈತ ದೆಹಲಿ-ಭಿವಾನಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಮಾನ್ಸಾ ಜಿಲ್ಲೆಯ ಧನ್ನಾ ಸಿಂಗ್ 40 ಗ್ರಾಮಗಳ ರೈತರನ್ನು ಪ್ರತಿಭಟನೆಗೆ ಕರೆದುಕೊಂಡು ಬಂದಿದ್ದರು. ಧನ್ನಾ ಅವರ ಟ್ರ್ಯಾಕ್ಟರ್ಗೆ ಟ್ರಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ.
Extremely shocked and saddened on learning of the tragic news of Sant Ram Singh ji of Nanaksar Singhra wale from Karnal ending his life at Singhu Border in protest against the Centre’s Farm Laws. My prayers are with his family and supporters in this time of grief.? pic.twitter.com/xcAftiWvwc
— Capt.Amarinder Singh (@capt_amarinder) December 16, 2020
ಟಿಕ್ರಿಯಲ್ಲಿ ಪ್ರತಿಭಟನಾನಿರತ ರೈತರಿಗೆ ಸಹಾಯ ಮಾಡಲು ಬರುತ್ತಿದ್ದಾಗ ಝಜ್ಜಾರ್ ನಲ್ಲಿರುವ ನಜಾಫ್ಗಡ್ ಮೇಲ್ಸೇತುವೆ ಮೇಲೆ ಕಾರಿಗೆ ಬೆಂಕಿ ಹತ್ತಿ ಮೆಕ್ಯಾನಿಕ್ ಜನಕ್ ರಾಜ್ (55) ಎಂಬವರು ಸಾವಿಗೀಡಾಗಿದ್ದರು. ಡಿಸೆಂಬರ್ 2 ರಂದು ಅನಾರೋಗ್ಯದಿಂದಾಗಿ ಗುರ್ಜಂತ್ ಸಿಂಗ್ (45) ಮತ್ತು ಲಖ್ವೀರ್ ಸಿಂಗ್(55) ಸಾವಿಗೀಡಾಗಿದ್ದರು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತ ಮಹಿಳೆಯರೂ ಸಾವಿಗೀಡಾಗಿದ್ದಾರೆ ಎಂದು ರೈತ ಮುಖಂಡರು ಹೇಳಿದ್ದಾರೆ.
Saddened to learn of demise of our 5 farmers. Labh Singh Ji & Gurpreet Singh of Patiala met with an accident in Karnal, Sukhdev Singh & Deep Singh of Fatehgarh Sahib near Mohali, & Makkhan Khan of Moga who died of a heart attack in Delhi. (1/2)
— Capt.Amarinder Singh (@capt_amarinder) December 15, 2020
ಡಿಸೆಂಬರ್ 14ರ ತಡರಾತ್ರಿ ಹರ್ಯಾಣದ ಕರ್ನಾಲ್ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ರೈತರು ದುರ್ಮರಣಕ್ಕೀಡಾಗಿದ್ದರು. ಅದೇ ದಿನ 67ರ ಹರೆಯದ ಗುರುಪ್ರೀತ್ ಸಿಂಗ್ ಎಂಬವರು ಹೊಟ್ಟೆನೋವಿನಿಂದ ಮರಣ ಹೊಂದಿದ್ದರು .
ದೆಹಲಿ ಚಲೋ ಮುಗಿಸಿಕೊಂಡು ಊರಿಗೆ ಮರಳುತ್ತಿದ್ದ ಇಬ್ಬರು ರೈತರು ಅಪಘಾತಕ್ಕೆ ಬಲಿ