ಹೈದರಾಬಾದ್: ಕೊರೊನಾ ವೈರಾಣು ರೂಪಾಂತರ ಹೊಂದಿ ವಿಶ್ವದೆಲ್ಲೆಡೆ ಗದ್ದಲ ಎಬ್ಬಿಸುತ್ತಿರುವ ಹೊತ್ತಿನಲ್ಲಿ ವೈರಾಣು ಹರಡುವಿಕೆಗೆ ಸಂಬಂಧಿಸಿದ ಇನ್ನೊಂದು ವಿಷಯ ಮುನ್ನೆಲೆಗೆ ಬಂದಿದೆ. ಜೀವಕೋಶೀಯ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರ (CCMB) ಹಾಗೂ CSIR-ಸೂಕ್ಷ್ಮಜೀವಿ ತಂತ್ರಜ್ಞಾನ ಸಂಸ್ಥೆ (IMTech) ನಡೆಸಿದ ಅಧ್ಯಯನದಲ್ಲಿ ಆಸ್ಪತ್ರೆಗಳ ಕೊಠಡಿಗಳಲ್ಲಿ ಕೊರೊನಾ ವೈರಾಣು ಇರುವ ವಿಚಾರ ಪತ್ತೆಯಾಗಿದೆ.
ಈ ಮೂಲಕ ಕೊರೊನಾ ವೈರಾಣು ಗಾಳಿಯ ಮೂಲಕ ಹರಡುವ ಸಾಧ್ಯತೆ ಇದೆಯೇ ಎಂಬ ಸಂದೇಹಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ಅಧ್ಯಯನಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲ ವಿಚಾರಗಳು ಸ್ಪಷ್ಟಗೊಂಡಿಲ್ಲವಾದರೂ ಕೊವಿಡ್ ಕೊಠಡಿಗಳಲ್ಲಿಯೇ ಕೊರೊನಾ ವೈರಾಣು ಹೆಚ್ಚಾಗಿ ಕಂಡುಬಂದಿರುವುದು ತಳಮಳಕ್ಕೆ ಕಾರಣವಾಗಿದೆ.
ವೈರಾಣುಗಳು ಸುಮಾರು 2 ಗಂಟೆಗೂ ಅಧಿಕ ಕಾಲ ಗಾಳಿಯಲ್ಲಿ ಕಾಣಿಸಿಕೊಂಡಿವೆ. ಕೊಠಡಿಯಲ್ಲಿದ್ದ ಸೋಂಕಿತರ ಸಂಖ್ಯೆಗೂ ಗಾಳಿಯಲ್ಲಿದ್ದ ಕೊರೊನಾ ವೈರಾಣುಗಳ ಪ್ರಮಾಣಕ್ಕೂ ನೇರ ಸಂಬಂಧ ಇರುವಂತೆ ಕಂಡುಬಂದಿದೆ. ವೈರಾಣುಗಳು 2 ಮೀಟರ್ಗಿಂತ ಜಾಸ್ತಿ ದೂರಕ್ಕೆ ಹೋಗಿ ಅಂಟಿಕೊಂಡಿರುವುದೂ ಪತ್ತೆಯಾಗಿದೆ ಎಂದು CCMB ಮಾಹಿತಿ ನೀಡಿದೆ.
ಆದರೆ, ಯಾವುದೇ ಲಕ್ಷಣಗಳಿಲ್ಲದ ಸೋಂಕಿತರಿದ್ದ ಕೊಠಡಿಯಲ್ಲಿ ವೈರಾಣುಗಳು ಅವರು ಕುಳಿತ ಸ್ಥಾನದಿಂದ ಹೆಚ್ಚು ದೂರಕ್ಕೆ ಚಲಿಸಿರುವುದು ಕಂಡುಬಂದಿಲ್ಲ ಎನ್ನುವ ಅಂಶವೂ ಅಧ್ಯಯನದಿಂದ ತಿಳಿದು ಬಂದಿದೆ. ಕೊರೊನಾ ವೈರಾಣುಗಳು ಗಾಳಿಯಲ್ಲಿದೆಯೇ ಎಂದು ಪತ್ತೆಹಚ್ಚಲು RT-PCR ತಂತ್ರಜ್ಞಾನದ ಮೊರೆಹೋದ ವಿಜ್ಞಾನಿಗಳು ಹೈದರಾಬಾದ್ ಮತ್ತು ಚಂಡೀಗಢದ 3 ಆಸ್ಪತ್ರೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ಔಷಧಿಯಲ್ಲಿ ಹಂದಿ ಕೊಬ್ಬು ಬಳಸಲು ಅವಕಾಶವಿದೆ.. ಮುಸ್ಲಿಮರು ಲಸಿಕೆ ಸ್ವೀಕರಿಸಿ: ಅಬ್ದುಲ್ ಅಜೀಮ್
Published On - 11:00 am, Wed, 6 January 21