ದೆಹಲಿ: ಕಳೆದ ಹಲವು ದಿನಗಳಿಂದ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಮಾರಣಾಂತಿಕ ಕೊರೊನಾ ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದೆ. ತೆಲಂಗಾಣದ ಟೆಕ್ಕಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಹೈದರಾಬಾದ್ನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಮತ್ತೊಂದು ಆತಂಕಕಾರಿ ವಿಷಯವೆಂದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಓರ್ವ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢವಾಗಿದೆ.
ದೆಹಲಿಯ ಮಯೂರ್ ವಿಹಾರ್ ನಿವಾಸಿಗೆ ಕೊರೊನಾ ಅಟ್ಯಾಕ್ ಆಗಿದೆ. ಇವರು ಕಳೆದ ಬುಧವಾರವಷ್ಟೇ ಇಟಲಿಯಿಂದ ದೆಹಲಿಗೆ ಆಗಮಿಸಿದ್ದರು. ಬಳಿಕ ಶುಕ್ರವಾರ ಮಗನ ಬರ್ತ್ಡೇ ಪಾರ್ಟಿ ಸಹ ಮಾಡಿದ್ದರು. ಹೀಗಾಗಿ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗೆ ಏಕಾಂತದಲ್ಲಿ ಇರಿಸಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.
ನೋಯ್ಡಾದ ಎರಡು ಶಾಲೆಗಳಿಗೆ ರಜೆ:
ಅಲ್ಲದೆ, ಸೋಂಕಿತ ವ್ಯಕ್ತಿಯ ಕುಟುಂಬದ ನಾಲ್ವರಲ್ಲೂ ಕೊರೊನಾ ವೈರಸ್ ಲಕ್ಷಣ ಪತ್ತೆಯಾಗಿದೆ. ನೋಯ್ಡಾದ ಶಾಲೆಯೊಂದರಲ್ಲಿ ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯ ಮಗ ಓದುತ್ತಿರುವ ಕಾರಣ ನೋಯ್ಡಾದ ಎರಡು ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ವೈರಸ್ ಭೀತಿ ಹಿನ್ನೆಲೆಯಲ್ಲಿ ಸಿಬ್ಬಂದಿ ಶಾಲೆಯಲ್ಲಿ ಸ್ಪ್ರೇ ಸಿಂಪಡಿಸಿದ್ದಾರೆ.
ಕೊರೊನಾ ಸೋಂಕಿತ ವ್ಯಕ್ತಿಗೆ ದೆಹಲಿ ಆರ್ಎಂಎಲ್ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಏಕಾಂಗಿಯಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕು ಹರಡದಂತೆ ವೈದ್ಯರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಅಲ್ಲದೆ, ಅಂದಿನ ಬರ್ತ್ ಡೆ ಪಾರ್ಟಿಯಲ್ಲಿ ಶಾಲೆಯ ಸಾಕಷ್ಟು ಮಕ್ಕಳು ಕೂಡ ಭಾಗಿಯಾಗಿದ್ರು ಎನ್ನಲಾಗಿದೆ. ಹೀಗಾಗಿ ಶಾಲೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಆಗ್ರಾದ 6 ಮಂದಿಗೆ ಕೊರೊನಾ ವೈರಸ್!?
ಮಹಾಮಾರಿ ಕೊರೊನಾ ವೈರಸ್ ಇದೀಗ ಉತ್ತರ ಪ್ರದೇಶಕ್ಕೂ ವಕ್ಕರಿಸಿಕೊಂಡಿದೆ. ಆಗ್ರಾದಲ್ಲಿ 6 ಮಂದಿಯ ರಕ್ತದಲ್ಲಿ ಕೊರೊನಾ ವೈರಸ್ನ ಲಕ್ಷಣಗಳು ಪತ್ತೆಯಾಗಿದೆ. ಇವರು ದೆಹಲಿಯ ಕೋವಿಡ್-19 ರೋಗಿಯ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಹೀಗಾಗಿ 6 ಮಂದಿಯ ರಕ್ತದಲ್ಲಿ ಭಾರಿ ಪ್ರಮಾಣದಲ್ಲಿ ವೈರಸ್ ಲಕ್ಷಣಗಳು ಪತ್ತೆಯಾಗಿದ್ದು, ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Published On - 4:08 pm, Tue, 3 March 20