ಕೊವ್ಯಾಕ್ಸಿನ್​ ವಯಸ್ಕರಿಗಿಂತಲೂ ಮಕ್ಕಳ ದೇಹದಲ್ಲಿಯೇ ಉತ್ತಮ ಇಮ್ಯೂನಿಟಿ ವೃದ್ಧಿಸಬಲ್ಲದು: ಎನ್​.ಕೆ.ಅರೋರಾ

| Updated By: Lakshmi Hegde

Updated on: Dec 27, 2021 | 3:13 PM

ಜನವರಿ 3ರಿಂದ ದೇಶದಲ್ಲೆಡೆ 15-18ವರ್ಷದವರಿಗೆ ಕೊರೊನಾ ಲಸಿಕೆ ಹಾಕುವ ಘೋಷಣೆಯನ್ನು ಪ್ರಧಾನಿ ಮೋದಿಯವರು ಮಾಡಿದ ಬೆನ್ನಲ್ಲೇ, ಈ ವಯಸ್ಸಿನವರಿಗೆ ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಲಸಿಕೆ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಅವಕಾಶ ಕೊಟ್ಟಿದೆ.

ಕೊವ್ಯಾಕ್ಸಿನ್​ ವಯಸ್ಕರಿಗಿಂತಲೂ ಮಕ್ಕಳ ದೇಹದಲ್ಲಿಯೇ ಉತ್ತಮ ಇಮ್ಯೂನಿಟಿ ವೃದ್ಧಿಸಬಲ್ಲದು: ಎನ್​.ಕೆ.ಅರೋರಾ
ಕೊವ್ಯಾಕ್ಸಿನ್​
Follow us on

ಕೊವ್ಯಾಕ್ಸಿನ್​ ಲಸಿಕೆ (Covaxin Covid 19 Vaccine) ಮಕ್ಕಳ ದೇಹದಲ್ಲಿ ಉತ್ತಮ ರೋಗ ನಿರೋಧಕ ಪ್ರತಿಕ್ರಿಯೆಗೆ ಕಾರಣವಾಗಬಲ್ಲದು ಎಂಬುದು ಪ್ರಯೋಗದಿಂದ ಗೊತ್ತಾಗಿದೆ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಪ್ರತಿರಕ್ಷಣೆ ಸಂಬಂಧ)ಯ ಕೊವಿಡ್​ 19 ಕಾರ್ಯಾಕಾರಿ ಗುಂಪಿನ ಅಧ್ಯಕ್ಷ ಡಾ. ಎನ್.ಕೆ.ಅರೋರಾ  ತಿಳಿಸಿದ್ದಾರೆ. ಜ.3ರಿಂದ ದೇಶದಲ್ಲಿ 15-18ವರ್ಷದವರೆಗಿನವರಿಗೆ ಕೊರೊನಾ ಲಸಿಕೆ (Corona Vaccine) ನೀಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ ಎನ್​.ಕೆ.ಅರೋರಾ, ಈ ನಿರ್ಧಾರದಿಂದ ಏನೆಲ್ಲ ಪ್ರಯೋಜನವಾಗಲಿದೆ ಎಂಬುದನ್ನು ತಿಳಿಸಿದರು. 

ವಾಸ್ತವದಲ್ಲಿ ಹೇಳಬೇಕೆಂದರೆ, 15-18ವರ್ಷದವರೂ ಕೂಡ 18ವರ್ಷ ಮೇಲ್ಪಟ್ಟ ವಯಸ್ಕರಂತೆಯೇ ಆಗಿರುತ್ತಾರೆ. ದೇಶದಲ್ಲಿ ಕೊವಿಡ್​ 19ನಿಂದ ಮೃತಪಟ್ಟ ಒಟ್ಟಾರೆ 18 ವರ್ಷದ ಒಳಗಿನವರಲ್ಲಿ ಮೂರನೇ ಎರಡರಷ್ಟು ಮಂದಿ 15ವರ್ಷ ಮೇಲ್ಪಟ್ಟವರೇ ಆಗಿದ್ದಾರೆ ಎಂಬುದನ್ನು ನಮ್ಮ ಸಂಶೋಧನೆ ಹೇಳುತ್ತದೆ.  ಹಾಗಾಗಿ ಹದಿಹರೆಯದವರನ್ನು ಕೊವಿಡ್​ 19 ಸೋಂಕಿನಿಂದ ರಕ್ಷಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರೋರಾ ಮಾಹಿತಿ ನೀಡಿದ್ದಾರೆ. ಹಾಗೇ, ಈ ಹದಿಹರೆಯದವರಿಗೆ ಲಸಿಕೆ ಕೊಟ್ಟು ಅವರಲ್ಲಿ ಪ್ರತಿರೋಧ ಹೆಚ್ಚಿಸುವುದರಿಂದ ಎರಡು ಅನುಕೂಲಗಳಿವೆ. ಈ ವಯಸ್ಸಿನವರು ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಶಾಲೆ, ಕಾಲೇಜು ಎಂದುಕೊಂಡು ಓಡಾಡುತ್ತಿರುತ್ತಾರೆ. ಹೀಗಾಗಿ ಕೊರೊನಾ ಸೋಂಕು ತಗುಲುವ ಅಪಾಯ ಜಾಸ್ತಿ ಇರುತ್ತದೆ. ಅದರಲ್ಲೂ ಈಗ ಒಮಿಕ್ರಾನ್​ ವೈರಾಣು ಹರಡುತ್ತಿರುವುದರಿಂದ ಲಸಿಕೆ ಕೊಡುವುದು ತುಂಬ ಉಪಯೋಗ. ಹಾಗೇ, ಎರಡನೇಯದಾಗಿ 15-18ನೇ ವಯಸ್ಸಿನವರು ಶಾಲೆ-ಕಾಲೇಜು, ಟ್ಯೂಷನ್​ ಮತ್ತಿತರ ಕಾರಣಕ್ಕೆ ಹೊರಗೆ ಹೋಗಿ, ಸೋಂಕು ತಗುಲಿಸಿಕೊಂಡು ಮನೆಗೆ ಬಂದರೆ, ಮನೆಯಲ್ಲಿ ಇದ್ದ ಹಿರಿಯರಿಗೂ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಇವರಿಗೇ ಲಸಿಕೆ ಹಾಕಿದರೆ ಅಪಾಯ ತಪ್ಪಿಸಬಹುದು. ಸೋಂಕಿನ ತೀವ್ರತೆ ಕಡಿಮೆ ಮಾಡಬಹುದು ಎಂದು ಅರೋರಾ ವಿಶ್ಲೇಷಿಸಿದ್ದಾರೆ.

ಜನವರಿ 3ರಿಂದ ದೇಶದಲ್ಲೆಡೆ 15-18ವರ್ಷದವರಿಗೆ ಕೊರೊನಾ ಲಸಿಕೆ ಹಾಕುವ ಘೋಷಣೆಯನ್ನು ಪ್ರಧಾನಿ ಮೋದಿಯವರು ಮಾಡಿದ ಬೆನ್ನಲ್ಲೇ, ಈ ವಯಸ್ಸಿನವರಿಗೆ ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಲಸಿಕೆ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಅವಕಾಶ ಕೊಟ್ಟಿದೆ. ಕೊವ್ಯಾಕ್ಸಿನ್​ ಲಸಿಕೆಯನ್ನು 12-18ವರ್ಷದವರಿಗೆ ಹಾಕಬಹುದು ಎಂದು ಡಿಸಿಜಿಐ ತಿಳಿಸಿದ್ದರೂ, ಸದ್ಯದ ಮಟ್ಟಿಗೆ 15-18ವರ್ಷದವರಿಗೆ ನೀಡಲಾಗುತ್ತದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರೋರಾ,  ಮಕ್ಕಳಿಗೆ ಕೊಡಬಹುದಾದ ಕೊವಿಡ್ 19 ಲಸಿಕೆ ನಮ್ಮ ಬಳಿಯೇ ಇದೆ ಎಂಬುದು ನಿಜಕ್ಕೂ ನೆಮ್ಮದಿಯ ವಿಚಾರ. ಅದರಲ್ಲೂ ಕೊವ್ಯಾಕ್ಸಿನ್​ ಮಕ್ಕಳ ಮೇಲಿನ ಪ್ರಯೋಗದ ವೇಳೆ ತುಂಬ ಸಕಾರಾತ್ಮಕ ಫಲಿತಾಂಶ ನೀಡಿದೆ. 18 ವರ್ಷ ಮೇಲ್ಪಟ್ಟವರಿಗಿಂತಲೂ ಮಕ್ಕಳ ದೇಹದಲ್ಲಿ ಇದು ಉಂಟು ಮಾಡುವ ಪ್ರತಿರೋಧ ಶಕ್ತಿ ಹೆಚ್ಚು. ಅದಕ್ಕೂ ಮಿಗಿಲಾಗಿ ಕೊವ್ಯಾಕ್ಸಿನ್​ ತುಂಬ ಸುರಕ್ಷಿತವಾದ ಲಸಿಕೆ. ಇದರಿಂದ ನಮ್ಮ ಹದಿಹರೆಯದವರ ರಕ್ಷಣೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಾನ್ಪುರದ ಉದ್ಯಮಿ ಮನೆ ಮೇಲೆ ಜಿಎಸ್​ಟಿ ಅಧಿಕಾರಿಗಳಿಂದ ದಾಳಿ; ನಗದು ಎಣಿಕೆಯೇ ಮುಗಿಯುತ್ತಿಲ್ಲ, ಬೀಗ ತೆಗೆಯಲೂ ಸಾಧ್ಯವಾಗುತ್ತಿಲ್ಲ !