ಬೆಂಗಳೂರು: ದೇಶದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿರುವ ಹೊತ್ತಿನಲ್ಲಿ ಕೇಂದ್ರ ಸರ್ಕಾರ ಭಾರತೀಯರಿಗೆ ಒಂದು ಗುಡ್ ನ್ಯೂಸ್ ಕೊಟ್ಟಿದೆ. ದೇಶದಲ್ಲಿ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. ಇದೇ ಕಾರಣಕ್ಕೆ ದೇಶದಲ್ಲಿ ಕೊರೊನಾದಿಂದ ಮೃತಪಡುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಅಂತಾ ಹೇಳಿದೆ.
ಕೊರೊನಾ ಮಹಾಮಾರಿ ಅಬ್ಬರಕ್ಕೆ ದೇಶದ ಜನ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ದಿನದಿನಕ್ಕೂ ಹೊಸದಾಗಿ ಸಾವಿರ ಸಾವಿರಗಟ್ಟಲೆ ಜನರಿಗೆ ಹೆಮ್ಮಾರಿ ವಕ್ಕರಿಸುತ್ತಿದೆ. ಇದರ ಜೊತೆಗೆ ತಾನು ಕಾಲಿಟ್ಟ ಕಡೆಯೆಲ್ಲಾ ಮರಣ ಮೃದಂಗ ಬಾರಿಸ್ತಿದೆ. ಇದರ ನಡುವೆ ಕೇಂದ್ರ ಸರ್ಕಾರ ದೇಶದ ಜನರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಏನಪ್ಪಾ ಅಂದ್ರೆ, ಇಡೀ ವಿಶ್ವದಲ್ಲಿ ಕೊರೊನಾ ಪೀಡಿತ ದೇಶಗಳಲ್ಲಿ, ನಮ್ಮ ದೇಶದಲ್ಲಿಯೇ ಅತ್ಯಂತ ಕಡಿಮೆ ಸಾವಿನ ಪ್ರಮಾಣ ಇದೆ ಅಂತಾ ಹೇಳಿದೆ. ಅಲ್ದೆ, ಕೊರೊನಾ ತಡೆಯಲು ಮಾರ್ಚ್ನಲ್ಲಿ ಹೇರಿದ್ದ ಲಾಕ್ಡೌನ್ ಪ್ರತಿಫಲ ನೀಡಿದೆ ಅಂತಾ ಹೇಳಿದೆ. ಈ ಮೂಲಕ ದೇಶದ ಜನರಿಗೆ ಅಲ್ಪ ರಿಲೀಫ್ ನೀಡಿದೆ.
10ಲಕ್ಷಕ್ಕೂ ಹೆಚ್ಚು ಜನ ಗುಣಮುಖ, ಶೇ.64ಕ್ಕೇರಿದ ರಿಕವರಿ ರೇಟ್!
ದೇಶದಲ್ಲಿ ಕೊರೊನಾಗೆ ಬಲಿಯಾಗ್ತಿರುವವರ ಸಂಖ್ಯೆ ದಿನದಿನಕ್ಕೆ ಕಡಿಮೆಯಾಗ್ತಿದೆ ಅಂತಾ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ. ಶನಿವಾರ ವಿಡಿಯೋ ಸಂವಾದದ ಮೂಲಕ ಕೊವಿಡ್ ಕುರಿತು ಸಂಪುಟ ಉಪಸಮಿತಿ ಸದಸ್ಯರ ಜೊತೆ ಮಾತನಾಡಿದ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಹರ್ಷವರ್ಧನ್ ಪ್ರಕಾರ, ದೇಶದಲ್ಲಿ ಕೊರೊನಾಗೆ ಬಲಿಯಾಗುವವರ ಸಂಖ್ಯೆ ಶೇಕಡಾ 2.18ರಷ್ಟಿದೆ. ಇದು ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಮರಣ ಪ್ರಮಾಣವಾಗಿದೆ. ಅವರು ನೀಡಿರೋ ಇತರ ಅಂಕಿಅಂಶಗಳತ್ತ ಗಮನ ಹರಿಸಿದ್ರೆ, ಹಲವು ವಿಚಾರಗಳು ಬೆಳಕಿಗೆ ಬಂದಿವೆ.
ಕಂಟ್ರೋಲ್ನಲ್ಲಿದೆ ಕೊರೊನಾ!
ದೇಶದಲ್ಲಿನ ಒಟ್ಟು 16,95,988 ಕೊರೊನಾ ಸೋಂಕಿತರಲ್ಲಿ ಶೇಕಡಾ 2.18ರಷ್ಟು ಜನ ಸೋಂಕಿಗೆ ಬಲಿಯಾಗಿದ್ದಾರೆ. ಅಂದ್ರೆ, ಒಟ್ಟು ಕೊರೊನಾ ಸೋಂಕಿತರಲ್ಲಿ 36,511 ಜನ ಡೆಡ್ಲಿ ವೈರಸ್ಗೆ ಬಲಿಯಾಗಿದ್ದಾರೆ. ಇನ್ನು ಶೇಕಡಾ 0.28 ಕೊರೊನಾ ಸೋಂಕಿತರಿಗೆ ವೆಂಟಿಲೇಟರ್ ಸಪೋರ್ಟ್ನಲ್ಲಿದ್ದು, ದೇಶದಲ್ಲಿರುವ 5,45,318 ಸಕ್ರಿಯ ಪ್ರಕರಣಗಳಲ್ಲಿ ಶೇ. 1.61ರಷ್ಟು ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಭಾರತದಲ್ಲಿ 10 ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದು, ಶೇ.64.54ರಷ್ಟು ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ. ದೆಹಲಿ, ಹರಿಯಾಣದಲ್ಲಿ ಅತಿ ಹೆಚ್ಚು ಮಂದಿ ಗುಣಮುಖರಾಗಿದ್ರೆ, ಕರ್ನಾಟಕದಲ್ಲಿ ಸೋಂಕು ತಗುಲಿ ಗುಣಮುಖರಾದವರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಇನ್ನು ದೇಶದಲ್ಲಿರುವ 1,331 ಲ್ಯಾಬ್ಗಳಲ್ಲಿ ಪ್ರತಿದಿನ 6,42,588 ಮಾದರಿಗಳ ಪರೀಕ್ಷೆ ನಡೆಸಲಾಗ್ತಿದೆ ಅಂತಾ ಕೇಂದ್ರ ಸರ್ಕಾರ ಹೇಳಿದೆ.
ದೇಶದಲ್ಲಿ ಕೊರೊನಾ ಮಹಾಮಾರಿಯಿಂದ ತತ್ತರಿಸಿರುವ ಈ ದಿನಗಳಲ್ಲಿ ಕೇಂದ್ರ ಸರ್ಕಾರ ಜನರಿಗೆ ಶುಭ ಸುದ್ದಿ ನೀಡಿದೆ. ಈ ಮೂಲಕ ಕೊರೊನಾ ಬಂದವರೆಲ್ಲಾ ಮೃತಪಡ್ತಾರೆ ಅಂತಾ ಜನ ತಿಳಿದುಕೊಳ್ಳೋದು ಬೇಡ. ಬದಲಿಗೆ ಕೊರೊನಾ ಅನ್ನೋ ಹೆಮ್ಮಾರಿ ಸೋಂಕಿದ್ರೂ ಜನ ಬದುಕುವ ಚಾನ್ಸ್ ಹೆಚ್ಚಿದೆ ಅಂತಾ ಧೈರ್ಯ ತುಂಬಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಜನ ಕೂಡ ದೈಹಿಕ ಅಂತರ ಪಾಲಿಸಿ, ಮಾಸ್ಕ್ಗಳನ್ನ ಧರಿಸಿದ್ರೆ ಡೆಡ್ಲಿ ವೈರಸ್ ವಿರುದ್ಧದ ಹೋರಾಟದಲ್ಲಿ ನಮಗೆ ಜಯ ಸಿಗೋದು ಗ್ಯಾರಂಟಿ.