ನವದೆಹಲಿ: ಮಾಸ್ಕ್ ಧರಿಸದ ಪ್ರಯಾಣಿಕರಿಗೆ ವಿಮಾನ ನಿಲ್ದಾಣದೊಳಗೆ ಪ್ರವೇಶ ನೀಡದಂತೆ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ಶನಿವಾರ ಭದ್ರತಾ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಇತ್ತೀಚಿನ ಮಾರ್ಗದರ್ಶಿ ಸೂತ್ರದ ಪ್ರಕಾರ, ವಿಮಾನ ಟೇಕ್ ಆಫ್ ಆಗುವ ಮುನ್ನ ಸರಿಯಾಗಿ ಮಾಸ್ಕ್ ಹಾಕಿಕೊಳ್ಳುವುದಕ್ಕೆ ನಿರಾಕರಿಸಿದಲ್ಲಿ ಅವರನ್ನು ವಿಮಾನದಿಂದ ಹೊರಗೆ ಕಳುಹಿಸಲಾಗುವುದು. ಕೋವಿಡ್- 19 ಪ್ರೊಟೊಕಾಲ್ನಂತೆ ಯಾವ ಪ್ರಯಾಣಿಕರು ಮಾಸ್ಕ್ ಸರಿಯಾಗಿ ಧರಿಸುವುದಿಲ್ಲವೋ ಅದರಲ್ಲೂ ಮುಖ್ಯವಾಗಿ ಪದೇಪದೇ ಎಚ್ಚರಿಸಿದ ನಂತರವೂ ಮೂಗಿನ ಕೆಳಕ್ಕೆ ಬರುವಂತೆ ಧರಿಸಿರುತ್ತಾರೋ ಅದನ್ನು ಅಶಿಸ್ತು ಎಂದು ಪರಿಗಣಿಸಲಾಗುತ್ತದೆ.
ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣದ ಆಪರೇಟರ್ಗಳು ಮತ್ತು ಸಿಐಎಸ್ಎಫ್ಗೆ ಡಿಜಿಸಿಎಯಿಂದ ನಿರ್ದೇಶನ ನೀಡಲಾಗಿದೆ. ವಿಮಾನ ಯಾನದ ವೇಳೆ ಪ್ರಯಾಣಿಕರು ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹಾಗೂ ಇದನ್ನೇ ವಿಮಾನ ನಿಲ್ದಾಣದಲ್ಲೂ ಪಾಲನೆ ಮಾಡಬೇಕು ಎಂದು ತಿಳಿಸಲಾಗಿದೆ. “ಒಂದು ವೇಳೆ ಯಾವುದಾದರೂ ಪ್ರಯಾಣಿಕರು ಕೋವಿಡ್- 19 ಪ್ರೊಟೊಕಾಲ್ (ಸರಿಯಾಗಿ ಮಾಸ್ಕ್ ಧರಿಸದಿರುವುದು ಸೇರಿದಂತೆ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು) ಪಾಲಿಸದಿದ್ದಲ್ಲಿ, ಅಂಥವರು ಸರಿಯಾಗಿ ಎಚ್ಚರಿಕೆ ನೀಡಿದ ನಂತರವೂ ಸುಧಾರಿಸದಿದ್ದಲ್ಲಿ ಭದ್ರತಾ ಸಂಸ್ಥೆಯವರ ವಶಕ್ಕೆ ನೀಡಲಾಗುವುದು. ಒಂದು ವೇಳೆ ಅಗತ್ಯ ಬಿದ್ದಲ್ಲಿ, ಅವರು ಕಾನೂನು ಪ್ರಕಾರ ನಡೆಸಿಕೊಳ್ಳಬಹುದು,” ಎಂದು ವಿಮಾನಯಾನ ನಿಯಂತ್ರಕ ಸಂಸ್ಥೆ ತಿಳಿಸಿದೆ.
ಶಾಶ್ವತ ಪ್ರಯಾಣ ನಿರ್ಬಂಧವೂ ಆಗಬಹುದು!
ವಿಮಾನ ನಿಲ್ದಾಣ ಆಪರೇಟರ್ಗಳು ಮತ್ತು ಭದ್ರತಾ ಏಜೆನ್ಸಿಗಳು ವಿಮಾನ ಪ್ರಯಾಣದ ವೇಳೆ ಕಡ್ಡಾಯವಾಗಿ ಕೋವಿಡ್- 19 ಪ್ರೊಟೊಕಾಲ್ ಅನುಸರಿಸಬೇಕು ಎಂದು ಎಲ್ಲ ವಿಮಾನಯಾನ ಸಂಸ್ಥೆಗೂ ಹಾಗೂ ವಿಮಾನ ನಿಲ್ದಾಣ ಆಪರೇಟರ್ಗಳಿಗೂ ಆದೇಶ ಹೊರಡಿಸಲಾಗಿದೆ. ಒಂದು ವೇಳೆ ಪ್ರಯಾಣಿಕರು ಶಿಸ್ತು ಉಲ್ಲಂಘನೆ ಮಾಡಿದರು ಎಂದಾದಲ್ಲಿ ಅವರು ಮಾಡಿದ್ದು ಎಂಥ ತಪ್ಪು ಎಂದು ನಿರ್ಧರಿಸಿ, ಅಂಥವರನ್ನು ಇಂತಿಷ್ಟು ಸಮಯ ಎಂಬುದರಿಂದ ಆರಂಭಗೊಂಡು ಶಾಶ್ವತವಾಗಿಯೂ ವಿಮಾನ ಪ್ರಯಾಣ ಮಾಡದಂತೆ ನಿಷೇಧ ಹೇರಬಹುದು.
ಕೆಲವು ವಿಶೇಷ ಸನ್ನಿವೇಶಗಳನ್ನು ಹೊರತುಪಡಿಸಿದಂತೆ ಮಾಸ್ಕ್ ಅನ್ನು ಮೂಗಿನ ಕೆಳಗೆ ಸರಿಸುವಂತಿಲ್ಲ. ಸಿಐಎಸ್ಎಫ್ ಅಥವಾ ಇತರ ಪೊಲೀಸ್ ಅಧಿಕಾರಿಗಳನ್ನು ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ನೇಮಿಸಲಾಗುವುದು. ಮಾಸ್ಕ್ ಧರಿಸದೆ ಯಾರೂ ಒಳಗೆ ಪ್ರವೇಶ ಮಾಡಲಿಲ್ಲ ಎಂಬುದನ್ನು ಅವರೇ ಖಾತ್ರಿಪಡಿಸಬೇಕು ಎಂದು ಡಿಜಿಸಿಎ ಆದೇಶದಲ್ಲಿ ತಿಳಿಸಲಾಗಿದೆ. ದೇಶೀಯ ವಿಮಾನಗಳಲ್ಲಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘನೆ ಆಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಜಿಸಿಎ ನಿರ್ದೇಶನ ನೀಡಬೇಕು ಎಂದು ಈಚೆಗೆ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಹೇಳಿದ್ದರು. ಆ ಹೇಳಿಕೆ ಬೆನ್ನಿಗೆ ಡಿಜಿಸಿಎ ಆದೇಶ ಈ ನೀಡಿದೆ
ಇದನ್ನೂ ಓದಿ: ಕೊರೊನಾ 2ನೇ ಅಲೆ ಭೀತಿ ಬೆನ್ನಲ್ಲೇ ಟಫ್ ರೂಲ್ಸ್ ಜಾರಿ: ಸಭೆ, ಸಮಾರಂಭಕ್ಕೆ ಅತಿಥಿಗಳ ಸಂಖ್ಯೆ ಫಿಕ್ಸ್