ನವದೆಹಲಿ: ಕೊರೊನಾವೈರಸ್ ಸೋಂಕಿಗೆ ಲಸಿಕೆಯನ್ನು (Covid-19 Vaccine) ಕಂಡುಹಿಡಿದ ನಂತರರ ಮೊದಲ ವರ್ಷದಲ್ಲಿ ಕೊವಿಡ್ ಲಸಿಕೆಯ ಮೂಲಕ ವಿಶ್ವಾದ್ಯಂತ 2 ಕೋಟಿ (20 ಮಿಲಿಯನ್) ಸಾವುಗಳನ್ನು ತಡೆಗಟ್ಟಲಾಗಿದೆ ಎಂದು ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ. ಸಾಂಕ್ರಾಮಿಕ ರೋಗ ಹೆಚ್ಚಾದ ಸಮಯದಲ್ಲಿ ಕೊವಿಡ್ ಲಸಿಕೆಗಳು (Coronavirus Vaccine) ಜಾಗತಿಕ ಸಾವಿನ ಸಂಖ್ಯೆಯನ್ನು ಅರ್ಧಕ್ಕಿಂತ ಹೆಚ್ಚು ಕಡಿಮೆ ಮಾಡಿದೆ ಎನ್ನಲಾಗಿದೆ.
ಕೊವಿಡ್ ಲಸಿಕೆಗಳನ್ನು ಪರಿಚಯಿಸಿದ ನಂತರದ ಮೊದಲ ವರ್ಷದಲ್ಲಿ ಸಂಭಾವ್ಯ 31.4 ಮಿಲಿಯನ್ (3.14 ಕೋಟಿ) ಸಾವುಗಳಲ್ಲಿ 19.8 ಮಿಲಿಯನ್ (1.98 ಕೋಟಿ) ಅನ್ನು ತಡೆಗಟ್ಟಲಾಗಿದೆ ಎಂದು ಅಂದಾಜಿಸಲಾಗಿದೆ. 185 ದೇಶಗಳು ಮತ್ತು ಪ್ರಾಂತ್ಯಗಳ ದತ್ತಾಂಶವನ್ನು ಆಧರಿಸಿದ ಅಧ್ಯಯನದ ಪ್ರಕಾರ, ಹೆಚ್ಚಿನ ಮತ್ತು ಮೇಲ್ಮಧ್ಯಮ ಆದಾಯದ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳನ್ನು ತಡೆಗಟ್ಟಲಾಗಿದೆ. ಇದು ಪ್ರಪಂಚದಾದ್ಯಂತ ಲಸಿಕೆಗಳ ವಿತರಣೆಯ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ.
ಇದನ್ನೂ ಓದಿ: India Covid Update: ಭಾರತದಲ್ಲಿ ಇಂದು ಒಂದೇ ದಿನ 17,336 ಹೊಸ ಕೊವಿಡ್ ಕೇಸ್ ಪತ್ತೆ; ಕರ್ನಾಟಕದಲ್ಲಿ ಹೆಚ್ಚಿದ ಕೊರೊನಾ ಭೀತಿ
2021ರ ಅಂತ್ಯದ ವೇಳೆಗೆ ಪ್ರತಿ ದೇಶದಲ್ಲಿ 40% ಜನಸಂಖ್ಯೆಗೆ ಕೊವಿಡ್ ಲಸಿಕೆ ಹಾಕುವ ವಿಶ್ವ ಆರೋಗ್ಯ ಸಂಸ್ಥೆಯ ಗುರಿಯನ್ನು ಪೂರೈಸಿದ್ದರೆ ಇನ್ನೂ 599,300 ಸಾವುಗಳನ್ನು ತಪ್ಪಿಸಬಹುದಿತ್ತು ಎಂದು ಅಧ್ಯಯನ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಗುರಿಗಳನ್ನು ಸಾಧಿಸಿದ್ದರೆ ಕಡಿಮೆ ಆದಾಯದ ದೇಶಗಳಲ್ಲಿ ಕೊವಿಡ್-19ರ ಕಾರಣದಿಂದಾಗಿ ಅಂದಾಜು 5ರಲ್ಲಿ 1 ಸಾವನ್ನು ತಡೆಯಬಹುದಿತ್ತು ಎಂದು ತಿಳಿಸಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 17,336 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 4,33,62,294ಕ್ಕೆ ಏರಿಕೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 88,284ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 13 ಹೊಸ ಕೋವಿಡ್ ಸಂಬಂಧಿತ ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 5,24,954ಕ್ಕೆ ತಲುಪಿದೆ.