ನವದೆಹಲಿ: ಭಾರತದಲ್ಲಿ ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲ ವಯಸ್ಕರಿಗೆ ಎರಡು ಡೋಸ್ ಕೊರೊನಾ ಲಸಿಕೆ ನೀಡಬೇಕೆಂಬ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಡಿಸೆಂಬರ್ ಅಂತ್ಯಕ್ಕೆ ಇನ್ನೂ 50 ದಿನಗಳು ಮಾತ್ರ ಬಾಕಿ ಇವೆ. ಹೀಗಾಗಿ, ಬಾಕಿ ಉಳಿದಿರುವ 50 ದಿನಗಳಲ್ಲಿ ದೇಶದ ಎಲ್ಲ ವಯಸ್ಕರಿಗೆ ಎರಡು ಡೋಸ್ ಕೊರೊನಾ ಲಸಿಕೆ ನೀಡಲು ಸಾಧ್ಯವೇ? ಕೇಂದ್ರ ಸರ್ಕಾರದ ಲೆಕ್ಕಾಚಾರವೇನು? ಮುಂದಿನ ವರ್ಷವೂ ದೇಶದಲ್ಲಿ ಕೊರೊನಾ ಲಸಿಕೆ ನೀಡಿಕೆ ಮುಂದುವರಿಯುತ್ತಾ ಹೇಗೆ? ಎನ್ನುವ ಬಗ್ಗೆ ವಿವರ ಇಲ್ಲಿದೆ ನೋಡಿ.
2021ರ ಅಂತ್ಯದ ವೇಳೆಗೆ ಕೊರೊನಾ ವಿರುದ್ಧ ಎಲ್ಲಾ 94 ಕೋಟಿ ವಯಸ್ಕರಿಗೆ ಎರಡು ಡೋಸ್ ಕೊರೊನಾ ಲಸಿಕೆ ನೀಡಬೇಕೆಂಬ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಆದರೆ, ಈ ಗುರಿಯನ್ನು ಮುಟ್ಟುವ ಸಾಧ್ಯತೆಯಿಲ್ಲ. ಆ ಹೊತ್ತಿಗೆ ಸರ್ಕಾರವು ಎಲ್ಲರಿಗೂ ಕೊರೊನಾ ಲಸಿಕೆ “ಲಭ್ಯವಾಗುವಂತೆ” ಮಾಡುತ್ತದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ 74 ಕೋಟಿಗೂ ಹೆಚ್ಚು ವಯಸ್ಕರು ಮೊದಲ ಡೋಸ್ ಪಡೆದಿದ್ದಾರೆ. 35 ಕೋಟಿ ಜನರು ಎರಡನೇ ಡೋಸ್ ಪಡೆದಿದ್ದಾರೆ. ಒಟ್ಟು ವ್ಯಾಕ್ಸಿನೇಷನ್ 109 ಕೋಟಿಗೂ ಅಧಿಕವಾಗಿದೆ. ದೇಶದಲ್ಲಿ ಇದುವರೆಗೂ ಶೇ. 79ರಷ್ಟು ಜನರಿಗೆ ಒಂದು ಡೋಸ್ ಲಸಿಕೆ ನೀಡಲಾಗಿದೆ. ಶೇ. 37ರಷ್ಟು ವಯಸ್ಕರಿಗೆ ಎರಡು ಡೋಸ್ ಲಸಿಕೆ ನೀಡಲಾಗಿದೆ.
ಎಲ್ಲಾ ವಯಸ್ಕರಿಗೆ ಸುಮಾರು 188 ಕೋಟಿ ಲಸಿಕೆ ಡೋಸ್‌ಗಳು ಅಂತಿಮವಾಗಿ ಅಗತ್ಯವಿದೆ. “ಲಸಿಕೆಯ ಲಭ್ಯತೆ ಸಮಸ್ಯೆಯಲ್ಲ. ನಾವು ರಫ್ತು ಕೂಡ ಆರಂಭಿಸಿದ್ದೇವೆ. ಈಗಾಗಲೇ ಸಾಕಷ್ಟು ಲಭ್ಯವಿರುವ ಲಸಿಕೆಯನ್ನು ತೆಗೆದುಕೊಳ್ಳಲು ಜನರು ಮುಂದೆ ಬರಬೇಕು. ಅಲ್ಲದೆ, ಹಿಂದುಳಿದಿರುವ ದೊಡ್ಡ ರಾಜ್ಯಗಳು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಬೇಕಾಗಿದೆ. ಪ್ರಯತ್ನಗಳನ್ನು ಚುರುಕುಗೊಳಿಸಲು ಮನೆ-ಮನೆಗೆ ಲಸಿಕೆ ಹಾಕಲು ಕೇಂದ್ರ ಸರ್ಕಾರ ಈಗಾಗಲೇ ‘ಹರ್ ಘರ್ ದಸ್ತಕ್’ ಕಾರ್ಯಕ್ರಮವನ್ನು ಆರಂಭಿಸಿದೆ.
ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ 20 ಕೋಟಿ ಡೋಸ್ ಗೂ ಹೆಚ್ಚು ಲಸಿಕೆಗಳು ಬಳಕೆಯಾಗದೆ ಉಳಿದಿವೆ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಸುಮಾರು 16 ಕೋಟಿ ಲಸಿಕೆಗಳು ರಾಜ್ಯಗಳಲ್ಲಿ ದಾಸ್ತಾನು ಇವೆ. ಇನ್ನು 4ರಿಂದ 5 ಕೋಟಿ ಲಸಿಕೆಗಳು ಖಾಸಗಿ ಆಸ್ಪತ್ರೆಗಳಲ್ಲಿ ದಾಸ್ತಾನು ಇವೆ. ಒಟ್ಟಾರೆಯಾಗಿ, 109 ಕೋಟಿ ಡೋಸ್ ಲಸಿಕೆಗಳನ್ನು ನೀಡಿದ ನಂತರ, ಒಟ್ಟು 130 ಕೋಟಿ ಡೋಸ್ ಲಸಿಕೆಗಳನ್ನು ಈಗಾಗಲೇ ಲಭ್ಯವಾಗುವಂತೆ ಮಾಡಲಾಗಿದೆ.
ಝೈಡಸ್ ಕ್ಯಾಡಿಲಾ ಮತ್ತು ಬಯೋಲಾಜಿಕಲ್ ಇ-ಲಸಿಕೆ ದಾಸ್ತಾನುಗಳ ಜೊತೆಗೆ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಸುಮಾರು 54 ಕೋಟಿ ಡೋಸ್‌ಗಳು (ಕೋವಿಶೀಲ್ಡ್‌ನ 44 ಕೋಟಿ ಮತ್ತು ಕೋವಾಕ್ಸಿನ್‌ನ 10 ಕೋಟಿ) ಲಭ್ಯವಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ಲೆಕ್ಕಾಚಾರ ಹಾಕಿದೆ.
ಆದ್ದರಿಂದ, ಭಾರತವು ಡಿಸೆಂಬರ್ 31ರೊಳಗೆ ಎಲ್ಲಾ ವಯಸ್ಕರಿಗೆ ಸಂಪೂರ್ಣವಾಗಿ ಲಸಿಕೆ ಹಾಕಲು ಅಗತ್ಯವಿರುವ 188 ಕೋಟಿ ಡೋಸ್‌ಗಳನ್ನು ಹೊಂದಿರುತ್ತದೆ ಎಂಬ ವಿಶ್ವಾಸ ಕೇಂದ್ರ ಸರ್ಕಾರಕ್ಕಿದೆ. ಯಾವುದೇ ದೇಶವು ವ್ಯಾಕ್ಸಿನೇಷನ್‌ನಲ್ಲಿ ಶೇ. 100ರಷ್ಟು ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್‌ಗಳ ನಡುವೆ 84 ದಿನಗಳ ಅಂತರವಿತ್ತು ಎಂದು ಅಧಿಕಾರಿ ಹೇಳಿದರು. ಹಾಗಾಗಿ ಭಾರತವು ಈಗ ಮತ್ತು ಡಿಸೆಂಬರ್ 31 ರ ನಡುವೆ ಉಳಿದ 20 ಕೋಟಿ ಜನರಿಗೆ ಮೊದಲ ಡೋಸ್ ನೀಡಲು ಸಾಧ್ಯವಾದರೂ, ಅವರು ತಮ್ಮ ಎರಡನೇ ಡೋಸ್‌ಗಾಗಿ 2022 ರವರೆಗೆ ಕಾಯಬೇಕಾಗುತ್ತದೆ.
ಎರಡನೇ ಡೋಸ್ 2022ರಲ್ಲಿ ಪ್ರಗತಿಯಲ್ಲಿರಲಿದೆ. ಆದರೆ, ಗಣನೀಯ ವಯಸ್ಕ ಜನಸಂಖ್ಯೆಯು, ಬಹುಶಃ ಶೇ. 90ರಷ್ಟು ಜನರು ವರ್ಷದ ಅಂತ್ಯದ ವೇಳೆಗೆ ಮೊದಲ ಡೋಸ್ ಪಡೆಯುತ್ತಾರೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
2021ರ ಅಂತ್ಯದ ವೇಳೆಗೆ ಭಾರತವು 150 ಕೋಟಿ ಡೋಸ್ ಲಸಿಕೆಗಳನ್ನು ಮುಟ್ಟಲಿದೆ ಎಂದು ಮತ್ತೊಬ್ಬ ಸರ್ಕಾರಿ ಅಧಿಕಾರಿ ಹೇಳಿದ್ದಾರೆ. ಇದು “ಸ್ಯಾಚುರೇಶನ್ ಮಟ್ಟಗಳ ಸಮೀಪದಲ್ಲಿದೆ” ಎಂದು ಅವರು ಹೇಳಿದರು. ಲಸಿಕೆ ಹಿಂಜರಿಕೆಯ ಕಾರಣದಿಂದ ಉತ್ತಮ ಪ್ರಯತ್ನಗಳ ಹೊರತಾಗಿಯೂ ಲಸಿಕೆ ತೆಗೆದುಕೊಳ್ಳದ ಜನರು ಇರುತ್ತಾರೆ ಎಂದು ಅವರು ಹೇಳಿದರು. ಈಗ ದೇಶದಲ್ಲಿ ಜನರು ಮೊದಲ ಹಾಗೂ ಎರಡನೇ ಡೋಸ್ ಲಸಿಕೆಯನ್ನು ಪಡೆಯಲು ಮುಂದೆ ಬರುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳ ಬಳಿ ಇರುವ ಕೊರೊನಾ ಲಸಿಕೆಯ ಡೋಸ್ ಗಳು ಖಾಲಿಯಾಗುತ್ತಿಲ್ಲ. ಹೀಗಾಗಿ ದೇಶದಲ್ಲಿ ಸುಮಾರು 20 ಕೋಟಿ ಡೋಸ್ ಗೂ ಹೆಚ್ಚು ಲಸಿಕೆ ಬಳಕೆಯಾಗದೇ ಹಾಗೇ ಉಳಿದಿವೆ.
ಇದನ್ನೂ ಓದಿ: Covid Vaccines: ಭಾರತದಲ್ಲಿ ಬಳಕೆಯಾಗದೆ ಉಳಿದ ಕೊವಿಡ್ ಲಸಿಕೆಗಳ ಪ್ರಮಾಣ 15 ಕೋಟಿ!
ಭಾರತದ ಕೊವಿಡ್ ಲಸಿಕೆಯ ಸರ್ಟಿಫಿಕೆಟ್ಗೆ 96 ದೇಶಗಳಲ್ಲಿ ಮನ್ನಣೆ; ಇನ್ನು ಭಾರತೀಯರಿಗೆ ವಿದೇಶ ಪ್ರಯಾಣ ಸುಲಭ