ಕೊವಿನ್ ಪೋರ್ಟಲ್ (ಪ್ರಾತಿನಿಧಿಕ ಚಿತ್ರ)
ಕೊವಿನ್ ಎಂಬುದು ಕೊವಿಡ್-19 ಲಸಿಕೆ ಪಡೆಯಲು ಸ್ಲಾಟ್ ನೋಂದಾವಣೆ ಮಾಡಿಕೊಳ್ಳಲು ಬಳಸುವ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿದೆ. ಇದೀಗ ಈ ವೆಬ್ಸೈಟ್ ದಿನಕ್ಕೆ 50 ಕ್ಕೂ ಅಧಿಕ ಒಟಿಪಿ ಜನರೇಟ್ ಮಾಡುತ್ತಿರುವ ಬಳಕೆದಾರರನ್ನು ಬ್ಲಾಕ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಹಲವು ಮಂದಿ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ.
ಜೂನ್ 21ರಿಂದ ಲಸಿಕೆಗೆ ಆನ್ಸೈಟ್ ರಿಜಿಸ್ಟ್ರೇಷನ್ ಆರಂಭವಾಗಲಿದೆ. ಅದರಿಂದ ಕೊವಿನ್ ಪೋರ್ಟಲ್ಗೆ ಒತ್ತಡ ಉಂಟಾಗಬಹುದು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕೊರೊನಾ ವಿರುದ್ಧದ ಲಸಿಕೆಗೆ ಕೊವಿನ್ ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಳ್ಳುವವರು ತಿಳಿದಿರಬೇಕಾದ ಒಂದಷ್ಟು ವಿಚಾರಗಳು ಇಲ್ಲಿದೆ.
- ಕೊವಿನ್ ಬಳಕೆದಾರರನ್ನು ಬ್ಲಾಕ್ ಮಾಡುತ್ತಿದೆ ಎಂಬ ವಿಚಾರದಲ್ಲಿ ನೀವು ಈ ಅಂಶಗಳನ್ನು ತಿಳಿದಿರಬೇಕು
- ಹಲವು ಮಾಧ್ಯಮಗಳ ವರದಿಯ ಪ್ರಕಾರ, ಕೊವಿನ್ ವೆಬ್ಸೈಟ್ ಅಸಮರ್ಪಕವಾಗಿ ಪೋರ್ಟಲ್ ಬಳಕೆ ಮಾಡುವವರನ್ನು ಬ್ಲಾಕ್ ಮಾಡುತ್ತಿದೆ
- ಲಸಿಕೆಯ ಸ್ಲಾಟ್ಗಾಗಿ 1,000ಕ್ಕೂ ಅಧಿಕ ಹುಡುಕಾಟ ನಡೆಸುವ, ಒಂದೇ ಸಮಯಕ್ಕೆ ಮತ್ತೆ ಮತ್ತೆ ಹುಡುಕಾಟ ನಡೆಸುವವರನ್ನು ಬ್ಲಾಕ್ ಮಾಡುತ್ತಿದೆ
- ಒಂದು ದಿನದಲ್ಲಿ, ಅಂದರೆ 24 ಗಂಟೆಯ ಅವಧಿಯಲ್ಲಿ 50ಕ್ಕಿಂತ ಹೆಚ್ಚು ಒಟಿಪಿ ಜನರೇಟ್ ಮಾಡುತ್ತಿರುವ ಬಳಕೆದಾರರನ್ನು ಕೊವಿನ್ ಪೋರ್ಟಲ್ ಬ್ಲಾಕ್ ಮಾಡುತ್ತಿದೆ
- 15 ನಿಮಿಷದ ಅವಧಿಯ ಒಳಗಾಗಿ 20ಕ್ಕೂ ಹೆಚ್ಚು ಹುಡುಕಾಟ (ಸರ್ಚ್ ರಿಕ್ವೆಸ್ಟ್) ಕೊಡುತ್ತಿರುವ ಬಳಕೆದಾರರನ್ನು ಪೋರ್ಟಲ್ ಬ್ಲಾಕ್ ಮಾಡುತ್ತಿದೆ. ಅಥವಾ ಕೊವಿನ್ನಿಂದ ಲಾಗ್ಔಟ್ ಮಾಡುತ್ತಿದೆ
- ಮುಂದಿನ 24 ಗಂಟೆಗಳ ವರೆಗೆ ಬ್ಲಾಕಿಂಗ್ ಚಾಲ್ತಿಯಲ್ಲಿ ಇರುತ್ತದೆ
- ಕಳೆದ ಮೇ 1ರಂದು ಕೊರೊನಾ ವಿರುದ್ಧದ ಲಸಿಕೆಯು 18 ವರ್ಷ ವಯಸ್ಸು ಮೇಲ್ಪಟ್ಟ ಎಲ್ಲರಿಗೂ ತೆರೆದಿತ್ತು. ಅದರಿಂದಾಗಿ ಕೊವಿನ್ ಮೇಲೆ ಅಧಿಕ ಒತ್ತಡ ಉಂಟಾಗಿತ್ತು
- ಕೊವಿನ್ ಪೋರ್ಟಲ್ನ ಅಪ್ಡೇಟ್ ಆಗಿರುವ ಸೇವೆಯ ಪ್ರಕಾರ, ಅಪಾಯಿಂಟ್ಮೆಂಟ್ ಪಡೆಯಲು ಬಳಸುವ ಯಾವುದೇ ಆಟೊಮ್ಯಾಟಿಕ್ ಸಾಫ್ಟ್ವೇರ್ ಒಪ್ಪಿತವಲ್ಲ
- ಮೂರು ಸೆಕೆಂಡ್ಗಳ ಒಳಗೆ, ಒಂದಕ್ಕೂ ಹೆಚ್ಚು ಬಾರಿ ಪುಟವನ್ನು ರಿಫ್ರೆಶ್ ಕೊಡುವುದು ಕೂಡ ಒಪ್ಪಿತವಲ್ಲ
- ದಿನವೊಂದಕ್ಕೆ 1000ಕ್ಕೂ ಅಧಿಕ ಸರ್ಚ್ ರಿಕ್ವೆಸ್ಟ್ ಕೊಡುವುದು (ಒಬ್ಬರ ಹೆಸರಿಗೆ ಅಥವಾ ಗುಂಪಿಗೆ) ಮಾಡತಕ್ಕದ್ದಲ್ಲ
ಇದನ್ನೂ ಓದಿ: Corona Vaccine: ಕೊರೊನಾ ಲಸಿಕೆ ಪಡೆಯುವ ಮೊದಲು ಮತ್ತು ನಂತರ ಪಾಲಿಸಬೇಕಾದ ಅಂಶಗಳೇನು? ಇಲ್ಲಿದೆ ವಿವರ
ಕೊರೊನಾ ಲಸಿಕೆ ಎರಡನೇ ಡೋಸ್ ಪಡೆಯುವವರ ಗಮನಕ್ಕೆ: ನಿಮಗೆ ನಿಗದಿಪಡಿಸಿರುವ ದಿನಾಂಕವನ್ನು ಹೆಚ್ಚು ಮುಂದೂಡಬೇಡಿ