ಕಾಸರಗೋಡು: ರಸ್ತೆ ಬದಲಿಯಲ್ಲಿದ್ದ 8 ವರ್ಷ ವಯಸ್ಸಿನ ಬಾಲಕಿಯನ್ನು ವ್ಯಕ್ತಿಯೊಬ್ಬ ಹೊಡೆದು, ಎತ್ತಿ ರಸ್ತೆಗೆ ಎಸೆದ ಘಟನೆ ಕೇರಳದ ಕಾಸರಗೋಡಿನ (Kasaragod) ಮಂಜೇಶ್ವರ (Manjeshwar) ಎಂಬಲ್ಲಿ ಗುರುವಾರ ನಡೆದಿದೆ. ಬಾಲಕಿಯು ಮದರಸಾದಿಂದ ಹೊರಬಂದು ಮನೆಯವರಿಗಾಗಿ ರಸ್ತೆ ಬದಿಯಲ್ಲಿ ಕಾಯುತ್ತಿದ್ದಾಗ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಸ್ಥಳೀಯ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಎಂಬಾತನನ್ನು ಬಂಧಿಸಲಾಗಿದೆ. ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆಘಾತಗೊಂಡು ನಿಂತಿದ್ದ ಬಾಲಕಿಯನ್ನು ಗಮನಿಸಿದ ಮನೆಯವರು ಏನಾಗಿದೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ, ಯಾರೋ ಬಂದು ಹೊಡೆದಿರುವುದಾಗಿ ಬಾಲಕಿ ತಿಳಿಸಿದ್ದಾಳೆ. ಸಮೀಪದ ಶಾಲೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್
ಆರೋಪಿಯು ಬಾಲಕಿಗೆ ಹೊಡೆದು ಆಕೆಯನ್ನು ನೆಲಕ್ಕೆ ಎಸೆದಿರುವ ಸಿಸಿಟಿವಿ ದೃಶ್ಯಾವಳಿಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಏಕಾಏಕಿ ಬಾಲಕಿಯತ್ತ ಬಂದ ಆರೋಪಿ ಆಕೆಗೆ ಹೊಡೆಯುತ್ತಾನೆ. ಬಳಿಕ ಆಕೆಯನ್ನು ಎತ್ತಿ ಎಸೆದು ಏನೂ ಆಗಿಯೇ ಇಲ್ಲ ಎಂಬಂತೆ ನಡೆದುಕೊಂಡು ಹೋಗಿ ಮತ್ತೊಂದು ಬದಿಯಲ್ಲಿ ನಿಂತಿರುವುದು ವಿಡಿಯೊದಲ್ಲಿದೆ. ದಿಢೀರ್ ಹಲ್ಲೆಯಿಂದ ಆಘಾತಗೊಂಡ ಬಾಲಕಿ ಅಲ್ಲಿಂದ ಎದ್ದು ಬದಿಗೆ ಸರಿಯುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.
ವಿಡಿಯೊ ಇಲ್ಲಿದೆ;
On Camera, Man Walks Up To Kerala Girl, 8, Slams Her To The Ground
The horrifying incident occurred this morning when the eight year-old girl was waiting outside the Madrassa for her uncle to pick up#Kerala #keralagirl pic.twitter.com/NVALwVgdWS— Md fasahathullah siddiqui (@MdFasahathullah) November 17, 2022
ಘಟನೆಯಿಂದ ಆಘಾತಗೊಂಡಿದ್ದ ಬಾಲಕಿ ಆರಂಭದಲ್ಲಿ ಏನೂ ಹೇಳಿರಲಿಲ್ಲ. ಕೊನೆಯಲ್ಲಿ ಯಾರೋ ಹೊಡೆದರು ಎಂದಷ್ಟೇ ಹೇಳಿದಳು. ಆಮೇಲೆ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ನಿಜ ವಿಚಾರ ತಿಳಿಯಿತು ಎಂದು ಆಕೆಯ ಸಂಬಂಧಿಕರು ತಿಳಿಸಿದ್ದಾರೆ.
ಘಟನೆ ಸಂಬಂಧಿತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307 (ಕೊಲೆ ಯತ್ನ) ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದ ಬಾಲಕಿ ಗಾಯಗೊಂಡಿರುವುದು ತಿಳಿದುಬಂದಿಲ್ಲ. ಹೆಚ್ಚಿನ ವೈದ್ಯಕೀಯ ತಪಾಸಣೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ