ಮಾವೋವಾದಿಗಳಿಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಇನ್ನಿತರ ನೆರವು ಒದಗಿಸುತ್ತಿದ್ದ ಮೂವರನ್ನು ಜಾರ್ಖಂಡ್ನ ಆ್ಯಂಟಿ ಟೆರರಿಸ್ಟ್ (ಭಯೋತ್ಪಾದಕ ವಿರೋಧಿ) ದಳ ಬಂಧಿಸಿದೆ. ಬಂಧಿತ ಮೂವರಲ್ಲಿ ಒಬ್ಬ ಕೇಂದ್ರೀ ಮೀಸಲು ಪಡೆ (CRPF)ಯ ಕಾನ್ಸ್ಟೆಬಲ್ ಆಗಿದ್ದು, ಇವರು 2017ರಿಂದಲೂ ಪುಲ್ವಾಮಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಇವರು ಸಿಪಿಐ (ಎಂ) -(ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸಂಘಟನೆಗೆ ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡು ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲ ಇನ್ನಿತರ ಕೆಲವು ಕ್ರಿಮಿನಲ್ ಕೇಸ್ಗಳಲ್ಲೂ ಬೇಕಾದವರು ಆಗಿದ್ದಾರೆ. ಈ ಮೂವರೂ ಸೇರಿಕೊಂಡು ಈಗಾಗಲೇ ಎಕೆ 47 ಮತ್ತು ಐಎನ್ಎಸ್ಎಎಸ್ ರೈಫಲ್ಸ್ಗಳನ್ನು ಭಾರಿ ಪ್ರಮಾಣದಲ್ಲಿ ಮಾವೋವಾದಿಗಳಿಗೆ ಪೂರೈಕೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಿಆರ್ಪಿಎಫ್ ಕಾನ್ಸ್ಟೆಬಲ್ ಅವಿನಾಶ್ ಕುಮಾರ್ (29) ಕಳೆದ ನಾಲ್ಕು ತಿಂಗಳಿಂದಲೂ ರಜೆಯಲ್ಲಿದ್ದಾರೆ. ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಹಾಗೇ ಇವರೊಂದಿಗೆ ಸೇರಿ ಶಸ್ತ್ರಾಸ್ತ್ರ ಪೂರೈಸುತ್ತಿದ್ದ ನಿರ್ಮಾಣ ಗುತ್ತಿಗೆದಾರರಾದ ಪಂಕಜ್ ಸಿಂಗ್ (48) ಮತ್ತು ರಿಶಿ ಕುಮಾರ್ (49) ವಿರುದ್ಧವೂ ಪ್ರಕರಣ ದಾಖಲಾಗಿದೆ. ಮೂವರೂ ಬಿಹಾರದವರೇ ಆಗಿದ್ದು, ಇವರನ್ನು ಬಂಧಿಸಿದ ದಿನಾಂಕ, ಸ್ಥಳದ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ನೀಡಲಿಲ್ಲ.
ಈ ಮೂವರೂ ಸೇರಿ ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನು ಸಿಪಿಐ(ಮಾವೋವಾದಿ) ಸಂಘಟನೆಯ ಕೇಡರ್ಗಳಿಗೆ ಮತ್ತು ಇನ್ನಿತರ ಗ್ಯಾಂಗ್ಸ್ಟರ್ಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಮೂವರೂ ಬಿಹಾರದವರೇ ಆಗಿದ್ದು, ಅಲ್ಲಿನ ಭಯೋತ್ಪಾದಕ ನಿಗ್ರಹ ದಳದ ಸಹಾಯದಿಂದ ಬಂಧಿಸಲಾಗಿದೆ ಎಂದು ಜಾರ್ಖಂಡ ಎಟಿಎಸ್ ಎಸ್ಪಿ ಪ್ರಶಾಂತ್ ಆನಂದ್ ತಿಳಿಸಿದ್ದಾರೆ. ಇದೀಗ ಬಂಧಿತನಾಗಿರುವ ಕಾನ್ಸ್ಟೆಬಲ್ ಪುಲ್ವಾಮಾದಲ್ಲಿ ಸಿಆರ್ಪಿಎಫ್ನ 182ನೇ ಬೆಟಾಲಿಯನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಅದಕ್ಕೂ ಮೊದಲು ಛತ್ತೀಸ್ಗಢ್ನ ಜಗದಲ್ಪುರ 204 ಕೋಬ್ರಾ ಬೆಟಾಲಿಯನ್ನಲ್ಲಿ ಇದ್ದ ಎಂದೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Gold Price Today: ಇಂದು ಹಲವೆಡೆ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ; ನೀವು ಚಿನ್ನಾಭರಣ ಕೊಳ್ಳುವುದಾದರೆ ದರ ವಿವರ ಗಮನಿಸಿ
Published On - 8:00 am, Thu, 18 November 21