
ಹೈದರಾಬಾದ್, ಅಕ್ಟೋಬರ್ 27: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಅರ್ನಬ್’ ಚಂಡಮಾರುತವು ಬುಧವಾರ ಆಂಧ್ರಪ್ರದೇಶದ ಗಡಿ ತೀರಕ್ಕೆ ಅಪ್ಪಳಿಸುವ ಮುನ್ಸೂಚನೆ ಇದೆ. ಇದರ ಪರಿಣಾಮವಾಗಿ ಆಂಧ್ರಪ್ರದೇಶ ಮತ್ತು ಒಡಿಶಾದ ಹಲವು ಭಾಗಗಳಲ್ಲಿ ಭಾರಿ ಮಳೆ ಹಾಗೂ ಬಿರುಗಾಳಿ ಪ್ರಾರಂಭವಾಗಿದೆ. ಚಂಡಮಾರುತದ ಭೀತಿಯ ಹಿನ್ನೆಲೆಯಲ್ಲಿ ಕನಿಷ್ಠ 65 ರೈಲುಗಳು ಮತ್ತು 21 ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಚಂಡಮಾರುತವು ಆಂಧ್ರಪ್ರದೇಶಕ್ಕೆ ಪ್ರವೇಶಿಸಿದಂತೆ ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಯಿಂದ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
‘ಅರ್ನಬ್’ ಎಂದರೆ ಬಂಗಾಳಿ ಭಾಷೆಯಲ್ಲಿ ‘ಸಮುದ್ರ’ ಅಥವಾ ‘ಸಾಗರ’ ಎಂದರ್ಥವಾಗಿದ್ದು, ಈ ಹೆಸರನ್ನು ಬಾಂಗ್ಲಾದೇಶ ನಾಮಕರಣ ಮಾಡಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮತ್ತು ಒಡಿಶಾಗಳಲ್ಲಿ ಸುಮಾರು 4,000 ಚಂಡಮಾರುತ ಆಶ್ರಯ ತಾಣಗಳನ್ನು ತೆರೆಯಲಾಗಿದ್ದು, ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಇದನ್ನೂ ಓದಿ: ಚಂಡಮಾರುತ ‘ಅರ್ನಬ್’ ಎಫೆಕ್ಟ್: ಹಲವು ರೈಲುಗಳ ಸಂಚಾರ ರದ್ದು, ಸಂಪೂರ್ಣ ಪಟ್ಟಿ ಇಲ್ಲಿದೆ
ಶಾಲಾ-ಕಾಲೇಜುಗಳಿಗೆ ರಜೆ:
ಆಂಧ್ರಪ್ರದೇಶದ 10 ಪ್ರಮುಖ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅನಕಾಪಲ್ಲಿ ಜಿಲ್ಲೆಯಲ್ಲಿ 3 ದಿನಗಳ ಕಾಲ ರಜೆ ವಿಸ್ತರಿಸಲಾಗಿದೆ. ಆಂಧ್ರಪ್ರದೇಶದಲ್ಲಿ ಅಪಾಯಕಾರಿ ಪ್ರದೇಶಗಳಿಂದ ಈಗಾಗಲೇ 50,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಆಶ್ರಯ ತಾಣಗಳಿಗೆ ರವಾನಿಸಲಾಗಿದ್ದು, ಒಟ್ಟು 4 ಲಕ್ಷ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿ ಮಾರ್ಗದಲ್ಲಿ ಸಂಚರಿಸುವ ಕನಿಷ್ಠ 65 ರೈಲುಗಳು ಹಾಗೂ 21 ವಿಮಾನ ಸೇವೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಆಂಧ್ರಪ್ರದೇಶ ಮತ್ತು ನೆರೆಯ ಒಡಿಶಾಗಳಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದ ನೂರಾರು ತಂಡಗಳು ಸಜ್ಜಾಗಿವೆ. ಆಂಧ್ರದಲ್ಲಿ 2,100ಕ್ಕೂ ಹೆಚ್ಚು ಚಂಡಮಾರುತ ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದ್ದು, 1,000ಕ್ಕೂ ಹೆಚ್ಚು ವೈದ್ಯಕೀಯ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ಇದನ್ನೂ ಓದಿ: ಆಂಧ್ರ ಸಮೀಪಿಸುತ್ತಿದೆ ಅರ್ನಬ್ ಚಂಡಮಾರುತ; 4 ರಾಜ್ಯಗಳಲ್ಲಿ ಹೈ ಅಲರ್ಟ್, ಭೂಕುಸಿತದ ಎಚ್ಚರಿಕೆ
ತಗ್ಗು ಪ್ರದೇಶಗಳ ಜನರನ್ನು ತಕ್ಷಣವೇ ತೆರವುಗೊಳಿಸಲು, ಪರಿಹಾರ ಸಾಮಗ್ರಿಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಹಾಗೂ ವಿದ್ಯುತ್ ಪೂರೈಕೆಗೆ ಧಕ್ಕೆಯಾದರೆ ತಕ್ಷಣ ಸರಿಪಡಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನಿರ್ದೇಶನ ನೀಡಿದ್ದಾರೆ. ರಾಜ್ಯದ 20 ಜಿಲ್ಲೆಗಳಲ್ಲಿ 2,131 ಆಶ್ರಯ ತಾಣಗಳನ್ನು ಗುರುತಿಸಲಾಗಿದ್ದು, 18 ಜಿಲ್ಲೆಗಳ ಸುಮಾರು 2.70 ಕೋಟಿ ಜನರಿಗೆ ಎಚ್ಚರಿಕೆ ರವಾನಿಸಲಾಗಿದೆ. 30,000ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳನ್ನು ಸುರಕ್ಷಿತವಾಗಿ ದಂಡೆಗೆ ಕಟ್ಟಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ