ಭದೋಹಿ: ಶಾಲೆಯಲ್ಲಿ ಸಮವಸ್ತ್ರ ಧರಿಸದೆ ಇದ್ದುದಕ್ಕೆ ದಲಿತ (Dalit) ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಶಾಲೆಯಿಂದ ಹೊರದಬ್ಬಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವಿದ್ಯಾರ್ಥಿನಿ ಜತೆ ಈ ರೀತಿ ವರ್ತಿಸಿದ್ದು ಶಾಲೆಯ ಶಿಕ್ಷಕರು ಅಥವಾ ಆಡಳಿತಾಧಿಕಾರಿಗಳು ಅಲ್ಲ, ಅಲ್ಲಿನ ಗ್ರಾಮದ ಮಾಜಿ ಮುಖ್ಯಸ್ಥ!. ಮನೋಜ್ ಕುಮಾರ್ ದುಬೆ ಎಂಬ ವ್ಯಕ್ತಿ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ದುಬೆ ಶಾಲೆಯ ಅಧಿಕಾರಿಯೂ ಅಲ್ಲ ಶಿಕ್ಷಕನೂ ಅಲ್ಲ. ಆದರೆ ಈತ ದಿನಾ ಶಾಲೆಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳು ಶಿಕ್ಷಕರ ಜತೆ ಕೆಟ್ಟದಾಗಿ ವರ್ತಿಸುತ್ತಿದ್ದ ಎಂದಿದ್ದಾರೆ ಪೊಲೀಸರು. ಇಲ್ಲಿನ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ ಮನೋಜ್ ಕುಮಾರ್ ದುಬೆ ಎಂಟನೇ ತರಗತಿಯ ವಿದ್ಯಾರ್ಥಿನಿಯಲ್ಲಿ ಯಾಕೆ ಸಮವಸ್ತ್ರ ಧರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ ಎಂದು ಚೌರಿ ಪೊಲೀಸ್ ಠಾಣೆಯ ಇನ್ ಚಾರ್ಜ್ ಗಿರಿಜಾ ಶಂಕರ್ ಯಾದವ್ ಹೇಳಿದ್ದಾರೆ.
ಇದಕ್ಕೆ ಆ ವಿದ್ಯಾರ್ಥಿನಿ ಶಾಲಾ ಸಮವಸ್ತ್ರ ಖರೀದಿ ಮಾಡಿಲ್ಲ. ಅಪ್ಪ ನನಗೆ ತಂದುಕೊಟ್ಟ ನಂತರ ನಾನು ಸಮವಸ್ತ್ರ ಧರಿಸಿ ಬರುವೆ ಎಂದು ಹೇಳಿದ್ದಾಳೆ. ಇದನ್ನು ಕೇಳಿದೊಡನೆ ದುಬೆ ಬಾಲಕಿ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ ಬೈದಿದ್ದಾರೆ. ಆಮೇಲೆ ಆಕೆಯನ್ನು ಶಾಲೆಯಿಂದ ಹೊರದಬ್ಬಿದ್ದಾರೆ ಎಂದು ಯಾದವ್ ಹೇಳಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಗ್ರಾಮದ ಮುಖ್ಯಸ್ಥ ದಲಿತ ವ್ಯಕ್ತಿಯೊಬ್ಬರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪೊಲೀಸರ ಪ್ರಕಾರ ದಲಿತ ವ್ಯಕ್ತಿ ದಿನೇಶ್ ಕುಮಾರ್(27) ಎಂಬಾತನ ಮೇಲೆ ಹಲ್ಲೆ ನಡೆದಿದೆ. ತಾಜ್ಪುರ್ ಗ್ರಾಮದ ಮುಖ್ಯಸ್ಥ ಶಕ್ತಿ ಮೋಹನ್ ಗುಜಾರ್ ಮತ್ತು ರೇತಾ ನಾಗ್ಲಾ ಗ್ರಾಮದ ಮಾಜಿ ಮುಖ್ಯಸ್ಥ ಗಜೇ ಸಿಂಗ್ ಸೇರಿ ದಿನೇಶ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದು, ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾರೆ. ಹಲ್ಲೆ ನಡೆಸಿರುವ ಇಬ್ಬರು ವ್ಯಕ್ತಿಗಳ ವಿರುದ್ಧ ಐಪಿಸಿ ಮತ್ತು ಎಸ್ಸಿ/ ಎಸ್ಟಿ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನಗರದ ಸುಪರಿಟೆಂಡೆಂಟ್ ಆಫ್ ಪೊಲೀಸ್ ಅರ್ಪಿತ್ ವಿಜಯ್ವರ್ಗೀಯ ಹೇಳಿದ್ದಾರೆ. ಗ್ರಾಮದ ಮುಖ್ಯಸ್ಥ ಶಕ್ತಿ ಮೋಹನ್ನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Published On - 5:05 pm, Tue, 23 August 22