ಭಾರತೀಯ ಔಷಧ ನಿಯಂತ್ರಣಾ ಪ್ರಾಧಿಕಾರದ ಅಧ್ಯಕ್ಷ ವಿ.ಜಿ. ಸೋಮಾನಿ ಭಾರತದಲ್ಲಿ 2 ಸಂಸ್ಥೆಗಳ ಕೊರೊನಾ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಿದ್ದಾರೆ. ಸೆರಮ್ ಸಂಸ್ಥೆಯ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಜ. 3ರಂದು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಅದರ ಪ್ರಕಾರವಾಗಿ ಎರಡೂ ಸಂಸ್ಥೆಗಳು ಅವುಗಳಿಗೆ ನೀಡಲಾದ ಮಾರ್ಗಸೂಚಿಯ ಪ್ರಕಾರವೇ ಕೊರೊನಾ ಲಸಿಕೆ ವಿತರಣೆ ಮಾಡಬೇಕಿದೆ. ಅಷ್ಟಕ್ಕೂ ಅವುಗಳಿಗೆ ನೀಡಲಾದ ಮಾರ್ಗಸೂಚಿಯಲ್ಲಿ ಏನೇನಿದೆ? ಯಾವೆಲ್ಲಾ ರೀತಿಯ ನಿಯಮಗಳನ್ನು ಪಾಲಿಸಬೇಕಿದೆ ಎನ್ನುವ ಕುರಿತಾದ ಸಂಕ್ಷಿಪ್ತ ವಿವರ ಇಲ್ಲಿದೆ.
ಸೆರಮ್ ಸಂಸ್ಥೆಗೆ ನೀಡಿರುವ ಮಾರ್ಗಸೂಚಿ:
1. 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಬೇಕು..
2. ಮೊದಲ ಡೋಸ್ ಲಸಿಕೆ ನೀಡಿದ 4-6 ವಾರದೊಳಗೆ 2ನೇ ಡೋಸ್ ಲಸಿಕೆ ನೀಡಬೇಕು. (ವಿದೇಶಗಳಲ್ಲಿ ಮೊದಲ ಡೋಸ್ ನೀಡಿದ 12 ವಾರದೊಳಗೆ ಎರಡನೇ ಡೋಸ್ ಲಸಿಕೆ ನೀಡುತ್ತಿದ್ದಾರೆ)
3. ಲಸಿಕೆ ಪಡೆಯುವವರಿಗೆ ಲಸಿಕೆಯ ಕುರಿತಾಗಿ ಮಾಹಿತಿ ಪತ್ರ ನೀಡಬೇಕು ಮತ್ತು ಲಸಿಕೆ ಪಡೆಯುವ ಮೊದಲು ಸಂಪೂರ್ಣ ಮಾಹಿತಿ ಕೊಡಬೇಕು.
4. ಸಂಸ್ಥೆಯು ಲಸಿಕೆಯ ಸುರಕ್ಷತೆ, ಪರಿಣಾಮ, ರೋಗನಿರೋಧಕ ಶಕ್ತಿ ವೃದ್ಧಿ ಬಗ್ಗೆ ಪ್ರಯೋಗದ ಮಾಹಿತಿಯನ್ನು ಎರಡು ತಿಂಗಳ ತನಕ ಪ್ರತಿ 15 ದಿನಕ್ಕೊಮ್ಮೆ ನೀಡಬೇಕು.
5. ಆದಾದ ಬಳಿಕ ವೈದ್ಯಕೀಯ ಪ್ರಯೋಗ ಮುಗಿಯುವವರೆಗೂ ಪ್ರತಿ ತಿಂಗಳು ಮಾಹಿತಿ ನೀಡಬೇಕು.
6. ಲಸಿಕೆಯನ್ನ 2-8 ಡಿಗ್ರಿ ಉಷ್ಣಾಂಶದಲ್ಲಿ ಆರು ತಿಂಗಳವರೆಗೆ ಸಂಗ್ರಹಿಸಿಡಬಹುದು. ಆದರೆ, ಫ್ರಿಡ್ಜ್ ನಿಂದ ತೆಗೆದ ಬಳಿಕ ಲಸಿಕೆಯನ್ನ 6 ಗಂಟೆಯೊಳಗೆ ಬಳಸಬೇಕು.
ಭಾರತ್ ಬಯೋಟೆಕ್ ಸಂಸ್ಥೆಗೆ ನೀಡಿರುವ ಮಾರ್ಗಸೂಚಿ:
1. 12 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಬೇಕು.
2. ಮೊದಲ ಡೋಸ್ ಲಸಿಕೆ ನೀಡಿದ 28 ದಿನದೊಳಗೆ ಎರಡನೇ ಡೋಸ್ ಲಸಿಕೆ ನೀಡಬೇಕು.
ಈ ಎರಡು ನಿಯಮಗಳ ಹೊರತಾಗಿ ಮಿಕ್ಕೆಲ್ಲವೂ ಎರಡೂ ಸಂಸ್ಥೆಗೆ ಏಕರೂಪದಲ್ಲಿದೆ.
ಅಮೆರಿಕಾದಲ್ಲಿ ಒಬ್ಬರಿಗೆ ಒಂದೇ ಇಂಜೆಕ್ಷನ್.. ಹೆಚ್ಚು ಜನರಿಗೆ ಲಸಿಕೆ ಹಂಚುವ ‘ದೊಡ್ಡ’ಣ್ಣನ ತಂತ್ರ
Published On - 5:25 pm, Mon, 4 January 21