ದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಶುಕ್ರವಾರ ಮತ್ತೊಮ್ಮೆ ಶಾಂಘೈ ಸಹಕಾರ ಸಂಸ್ಥೆ (SCO) ಸದಸ್ಯ ರಾಷ್ಟ್ರಗಳಿಗೆ ಭಯೋತ್ಪಾದನೆ (terrorism) ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಮತ್ತು ಅದರ ಎಲ್ಲಾ ರೀತಿಯ ಬೆದರಿಕೆಯನ್ನು ತೊಡೆದುಹಾಕಲು ಕರೆ ನೀಡಿದ್ದಾರೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ವರ್ಚುವಲ್ ಆಗಿ ಸಭೆಯಲ್ಲಿ ಭಾಗವಹಿಸಲು ನಿರ್ಧರಿಸಲಾಗಿತ್ತು. ನಾವು ಒಗ್ಗಟ್ಟಿನಿಂದ ಭಯೋತ್ಪಾದನೆ ವಿರುದ್ಧ ಹೋರಾಡಬೇಕು. ಎಸ್‌ಸಿಒ ಪ್ರಬಲವಾಗಿ ಹೊರಹೊಮ್ಮಬೇಕಾದರೆ, ನಾವು ಒಟ್ಟಾಗಿ ಹೋರಾಡಬೇಕು. ಭಯೋತ್ಪಾದಕ ಗುಂಪುಗಳು ಸಾಮಾಜಿಕ ಮಾಧ್ಯಮ ಮತ್ತು ಕ್ರೌಡ್‌ಫಂಡಿಂಗ್‌ನಂತಹ ಹೊಸ ವಿಧಾನಗಳನ್ನು ಬಳಸುತ್ತಿವೆ ಎಂದು ಎಸ್‌ಸಿಒ ರಕ್ಷಣಾ ಸಚಿವರ ಸಭೆಯಲ್ಲಿ ಸಿಂಗ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಭಾರತ, ರಷ್ಯಾ, ಚೀನಾ ಮತ್ತು ಎಸ್ ಸಿಒದ ಇತರ ಸದಸ್ಯ ರಾಷ್ಟ್ರಗಳ ರಕ್ಷಣಾ ಸಚಿವರು ದೆಹಲಿಯಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ಪ್ರಾದೇಶಿಕ ಭದ್ರತಾ ಸವಾಲುಗಳು ಮತ್ತು ಸಂಬಂಧಿತ ವಿಷಯಗಳ ಕುರಿತು ಚರ್ಚಿಸಿದರು. ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಅಫ್ಘಾನಿಸ್ತಾನದ ಒಟ್ಟಾರೆ ಪರಿಸ್ಥಿತಿಯನ್ನು ಪರಿಶೀಲಿಸುವ ನಿರೀಕ್ಷೆಯಿದೆ.
ಈ ವೇದಿಕೆಯು ನಮ್ಮೆಲ್ಲರಿಗೂ ನಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು, ನಮ್ಮ ದೃಷ್ಟಿಕೋನಗಳು ಮತ್ತು ಕಾಳಜಿಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ನಮ್ಮ ಮುಂದಿರುವ ಸವಾಲುಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಪ್ರಮುಖ ವೇದಿಕೆ ಇದಾಗಿದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
We should unitedly fight terrorism. If SCO has to emerge stronger, we have to fight together. Terror groups are using new methods like social media and crowdfunding: Defence Minister Rajnath Singh at SCO Defence Ministers’ meeting in Delhi pic.twitter.com/2BQAxMDky5
— ANI (@ANI) April 28, 2023
ಸದಸ್ಯ ರಾಷ್ಟ್ರಗಳ ನಡುವೆ ರಕ್ಷಣಾ ಸಹಕಾರವನ್ನು ಉತ್ತೇಜಿಸುವ ಪ್ರಮುಖ ಘಟಕವಾಗಿ ಭಾರತವು ಎಸ್‌ಸಿಒವನ್ನು ನೋಡುತ್ತದೆ. ನಾವು, ಒಂದು ರಾಷ್ಟ್ರವಾಗಿ, ಎಸ್‌ಸಿಒ ಸದಸ್ಯರ ನಡುವೆ ವಿಶ್ವಾಸ ಮತ್ತು ಸಹಕಾರದ ಮನೋಭಾವವನ್ನು ಇನ್ನಷ್ಟು ಬಲಪಡಿಸಲು ಬಯಸುತ್ತೇವೆ ಎಂದು ಸಿಂಗ್ ಹೇಳಿದರು.
ಎಸ್‌ಸಿಒವನ್ನು ಬಲಿಷ್ಠಗೊಳಿಸಲು ಭಾರತವು ಸಂಪೂರ್ಣ ಬದ್ಧವಾಗಿದ್ದು, ಎಸ್‌ಸಿಒ ಆದೇಶದ ಅನುಷ್ಠಾನಕ್ಕೆ ಮತ್ತು ಸಾಮಾನ್ಯ ಸವಾಲುಗಳನ್ನು ಎದುರಿಸುವುದಕ್ಕೆ ಸಹಾಯವಾಗಿ ನಿಲ್ಲುತ್ತದೆ.
ಸುರಕ್ಷಿತ, ಸ್ಥಿರ ಮತ್ತು ಸಮೃದ್ಧ ಪ್ರದೇಶವನ್ನು ಖಚಿತಪಡಿಸಿಕೊಳ್ಳಲು, ನಾವು ನಮ್ಮ ಕಾರ್ಯಸೂಚಿಯ ಮೇಲೆ ಕೇಂದ್ರೀಕರಿಸಬೇಕಾಗಿದೆ. ಇದು ಪ್ರತಿ ಸದಸ್ಯ ರಾಷ್ಟ್ರದ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಸಿಂಗ್ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳು ಸೇರಿದಂತೆ ಪ್ರಾದೇಶಿಕ ಭದ್ರತಾ ಪರಿಸ್ಥಿತಿಗಳ ಮೇಲೆ ಚರ್ಚೆಯ ಮುಖ್ಯ ಗಮನವನ್ನು ಕೇಂದ್ರೀಕರಿಸಲಾಗುವುದು ಎಂದು ಸಭೆಯ ಸಿದ್ಧತೆಯಲ್ಲಿ ತೊಡಗಿರುವ ಅಧಿಕಾರಿಗಳು ಈ ಹಿಂದೆ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
ಭಯೋತ್ಪಾದನೆ ಮತ್ತು ಉಗ್ರವಾದವನ್ನು ಪರಿಣಾಮಕಾರಿಯಾಗಿ ಎದುರಿಸಲು ಎಸ್‌ಸಿಒ ಸದಸ್ಯ ರಾಷ್ಟ್ರಗಳ ನಡುವೆ ಸಮನ್ವಯವನ್ನು ಹೆಚ್ಚಿಸುವುದು ಮತ್ತೊಂದು ಆದ್ಯತೆಯಾಗಿದೆ ಎಂದು ಅವರು ಹೇಳಿದರು.
ಎಸ್‌ಸಿಒ ಪ್ರಭಾವಶಾಲಿ ಆರ್ಥಿಕ ಮತ್ತು ಭದ್ರತಾ ವೇದಿಕೆ ಆಗಿದ್ದು ಇದು ಅತಿದೊಡ್ಡ ಪ್ರಾದೇಶಿಕ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: ಜಿಯಾ ಖಾನ್ ಕೇಸ್ನಲ್ಲಿ ಸೂರಜ್ ಪಾಂಚೋಲಿ ನಿರಪರಾಧಿ; ಮಹತ್ವದ ತೀರ್ಪು ನೀಡಿದ ನ್ಯಾಯಾಲಯ
ಭಾರತವು ಎಸ್‌ಸಿಒ ಮತ್ತು ಅದರ ಪ್ರಾದೇಶಿಕ ಭಯೋತ್ಪಾದನೆ-ವಿರೋಧಿ ರಚನೆ (RATS) ನೊಂದಿಗೆ ತನ್ನ ಭದ್ರತೆ-ಸಂಬಂಧಿತ ಸಹಕಾರವನ್ನು ಗಾಢವಾಗಿಸುವಲ್ಲಿ ತೀವ್ರ ಆಸಕ್ತಿಯನ್ನು ತೋರಿಸಿದೆ, ಇದು ನಿರ್ದಿಷ್ಟವಾಗಿ ಭದ್ರತೆ ಮತ್ತು ರಕ್ಷಣೆಗೆ ಸಂಬಂಧಿಸಿದ ವಿಷಯಗಳೊಂದಿಗೆ ವ್ಯವಹರಿಸುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Fri, 28 April 23