ಜಿಯಾ ಖಾನ್ ಕೇಸ್ನಲ್ಲಿ ಸೂರಜ್ ಪಾಂಚೋಲಿ ನಿರಪರಾಧಿ; ಮಹತ್ವದ ತೀರ್ಪು ನೀಡಿದ ನ್ಯಾಯಾಲಯ
Jiah Khan Case Verdict: ಜಿಯಾ ಖಾನ್ ಮತ್ತು ಸೂರಜ್ ಪಾಂಚೋಲಿ ಅವರು ರಿಲೇಶನ್ಶಿಪ್ನಲ್ಲಿ ಇದ್ದರು. 2013ರ ಜೂನ್ 3ರಂದು ಜಿಯಾ ಖಾನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.
ನಟಿ ಜಿಯಾ ಖಾನ್ ಸಾವಿನ (Jiah Khan Death Case) ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದ ಸೂರಜ್ ಪಾಂಚೋಲಿ ಅವರು ನಿರಪರಾಧಿ ಎಂಬುದು ಸಾಬೀತಾಗಿದೆ. ನಟಿಯ ಸಾವಿನ ಕೇಸ್ನಲ್ಲಿ ಬರೋಬ್ಬರಿ 10 ವರ್ಷಗಳ ಬಳಿಕ ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ಜಿಯಾ ಖಾನ್ ಮತ್ತು ಸೂರಜ್ ಪಾಂಚೋಲಿ (Sooraj Pancholi) ಅವರು ರಿಲೇಶನ್ಶಿಪ್ನಲ್ಲಿ ಇದ್ದರು. 2013ರ ಜೂನ್ 3ರಂದು ಜಿಯಾ ಖಾನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಬಳಿಕ ಸೂರಜ್ ಪಾಂಚೋಲಿ ವಿರುದ್ಧ ಕೇಸ್ ದಾಖಲಾಗಿತ್ತು. ಪೊಲೀಸರಿಗೆ ಜಿಯಾ ಖಾನ್ ಮನೆಯಲ್ಲಿ ಡೆತ್ ನೋಟ್ ಕೂಡ ಪತ್ತೆ ಆಗಿತ್ತು. ಸೂರಜ್ ಪಾಂಚೋಲಿ ಜೊತೆಗಿನ ಸಂಬಂಧದಿಂದ ತಾವು ಅನುಭವಿಸಿದ ಕಷ್ಟಗಳನ್ನು ಅವರು ಡೆತ್ ನೋಟ್ನಲ್ಲಿ ಎಳೆಎಳೆಯಾಗಿ ವಿವರಿಸಿದ್ದರು. ಆದರೆ ಅಂತಿಮ ವಿಚಾರಣೆಯಲ್ಲಿ ಸೂರಜ್ ಪಾಂಚೋಲಿ ನಿರಪರಾಧಿ ಎಂದು ತೀರ್ಪು ಬಂದಿದೆ.
ಜಿಯಾ ಖಾನ್ ಕೇಸ್ ಹಿನ್ನಲೆ:
ಅದು 2013ರ ಸಮಯ. ಜಿಯಾ ಖಾನ್ ಅವರು ಆಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಆರಂಭಿಸಿದ್ದರು. ‘ನಿಶಬ್ದ್’ ಚಿತ್ರದಲ್ಲಿನ ನಟನೆಗೆ ಅವರಿಗೆ ಫಿಲ್ಮ್ಫೇರ್ ಪ್ರಶಸ್ತಿ ಸಿಕ್ಕಿತ್ತು. ‘ಘಜಿನಿ’, ‘ಹೌಸ್ಫುಲ್’ ಸಿನಿಮಾಗಳಲ್ಲೂ ನಟಿಸಿ ಅವರು ಗಮನ ಸೆಳೆದಿದ್ದರು. ಚಿತ್ರರಂಗದಲ್ಲಿ ಬಾಳಿ ಬದುಕಬೇಕಾಗಿದ್ದ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ ಆಗಿದ್ದು ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ತೀವ್ರ ಆಘಾತ ಉಂಟು ಮಾಡಿತ್ತು.
Actor Sooraj Pancholi acquitted of abetment charges in Jiah Khan suicide case pic.twitter.com/SUM97xLqeP
— ANI (@ANI) April 28, 2023
ಜಿಯಾ ಖಾನ್ ಅವರದ್ದು ಆತ್ಮಹತ್ಯೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂತು. ಆದರೆ ಅವರ ಕುಟುಂಬದವರು ಈ ವಾದವನ್ನು ಒಪ್ಪಲಿಲ್ಲ. ನಟ ಸೂರಜ್ ಪಾಂಚೋಲಿ ಜೊತೆಗೆ ಜಿಯಾ ಖಾನ್ ಅವರಿಗೆ ಪ್ರೀತಿ ಚಿಗುರಿತ್ತು. ಆದರೆ ಈ ರಿಲೇಶನ್ಶಿಪ್ನಲ್ಲಿ ಜಿಯಾ ಖಾನ್ ತೀವ್ರ ನೋವು ಅನುಭವಿಸಿದ್ದರು ಹಾಗೂ ಅವರ ಸಾವಿಗೆ ಸೂರಜ್ ಪಾಂಚೋಲಿ ಕಾರಣ ಎಂಬುದು ಜಿಯಾ ಖಾನ್ ತಾಯಿ ಆರೋಪ ಮಾಡಿದ್ದರು.
ಇದನ್ನೂ ಓದಿ: Jiah Khan: ನಟಿ ಜಿಯಾ ಖಾನ್ ನಿಧನವಾದ ದಿನದಿಂದ ಇಲ್ಲಿಯವರೆಗೆ ಏನೆಲ್ಲಾ ಆಯ್ತು? ಇಲ್ಲಿದೆ ಪೂರ್ತಿ ವಿವರ
2015ರ ಜೂನ್ ತಿಂಗಳಲ್ಲಿ ಸೂರಜ್ ಪಾಂಚೋಲಿ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದರು. ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಅವರ ವಿರುದ್ಧ ಸಪ್ಲಿಮೆಂಟರಿ ಚಾರ್ಜ್ಶೀಟ್ ದಾಖಲಿಸಲಾಯಿತು. ಆದರೆ ತನಿಖೆ ಬಳಿಕ ಜಿಯಾ ಖಾನ್ ಅವರ ಕೊಲೆ ನಡೆದಿರುವ ಸಾಧ್ಯತೆ ಕಡಿಮೆ ಇದೆ ಹಾಗೂ ಇದು ಆತ್ಮಹತ್ಯೆ ಎಂದು 2016ರಲ್ಲಿ ಸಿಬಿಐ ಹೇಳಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:42 pm, Fri, 28 April 23