ದೆಹಲಿ ಮಾಜಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿಯ ರೋಸ್ ಅವೆನ್ಯೂ ಜಿಲ್ಲಾ ನ್ಯಾಯಾಲಯ ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಡೆಪ್ಯೂಟಿ ಸಿಎಂ ಮನೀಶ್ ಸಿಸೋಡಿಯಾ ಮತ್ತು ಆಮ್ ಆದ್ಮಿ ಪಕ್ಷದ ಇತರರಿಗೆ ನೋಟಿಸ್ ನೀಡಿದೆ. ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್ ಈ ನೋಟಿಸ್ ನೀಡಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ್ 23ಕ್ಕೆ ಮುಂದೂಡಿದ್ದಾರೆ.
ಅಂಶು ಪ್ರಕಾಶ್ ಮೇಲೆ 2018ರಲ್ಲಿ ಹಲ್ಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಂಶು ಅವರು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಇತರ 9 ಜನರಿಗೆ ಇದೇ ವರ್ಷ ಆಗಸ್ಟ್ನಲ್ಲಿ ಕ್ಲೀನ್ಚಿಟ್ ಸಿಕ್ಕಿತ್ತು. ಆದರೆ ಆಪ್ ಶಾಸಕರಾದ ಅಮಾನುತುಲ್ಲಾ ಖಾನ್ ಮತ್ತು ಪ್ರಕಾಶ್ ಜಾರ್ವಾಲ್ ವಿರುದ್ಧ ಆರೋಪ ಮುಂದುವರಿದಿತ್ತು. ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ, ಉಳಿದ 9 ಮಂದಿಯನ್ನು ಆರೋಪ ಮುಕ್ತಗೊಳಿಸಿದ ಕ್ರಮ ಪ್ರಶ್ನಿಸಿ ಮತ್ತೆ ಅಂಶು ಅರ್ಜಿ ಸಲ್ಲಿಸಿದ್ದರು.
2018ರಲ್ಲಿ ಟಿವಿ ಜಾಹೀರಾತು ಕುರಿತು ವಿಷಯ ಚರ್ಚಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅಂದಿನ ಸಿಎಸ್ ಆಗಿದ್ದ ಅಂಶು ಪ್ರಕಾಶ್ ಮೇಲೆ ಆಪ್ ಶಾಸಕರು ಹಲ್ಲೆ ನಡೆಸಿದ್ದರು. ಅವರ ತುಟಿ, ಕಿವಿಗೆ ಗಾಯಗಳಾಗಿದ್ದವು. ಅದಾದ ಬಳಿಕ ಐಎಎಸ್ ಅಧಿಕಾರಿಗಳ ಒಕ್ಕೂಟವೂ ಪ್ರತಿಭಟನೆ ನಡೆಸಿತ್ತು. ಈ ಪ್ರಕರಣ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಮತ್ತೆ ಹೊಸದಾಗಿ ಅರ್ಜಿ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: T20 World Cup: ಮಾತಿನ ಮೇಲೆ ನಿಲ್ಲದ ಕೊಹ್ಲಿ! ತಂಡದ ಕಳಪೆ ಪ್ರದರ್ಶನಕ್ಕೆ ಕೊಹ್ಲಿ ಎಡವಟ್ಟು ನಿರ್ಧಾರಗಳೇ ಕಾರಣ?
ನಮಗೆ ಹಿರಿಯರು, ಆದ್ರೆ ಹೋರಾಟ ಇನ್ನೂ ಯುವಕರಂತೆ: ವಾಟಾಳ್ ನಾಗರಾಜ್ರನ್ನು ಹೊಗಳಿದ ಸಿಎಂ ಬೊಮ್ಮಾಯಿ