ದೇಶದ ಇತಿಹಾಸದಲ್ಲಿ ಕರಾಳ ದಿನ; ದೆಹಲಿ ಸೇವಾ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆಗೆ ಕೇಜ್ರಿವಾಲ್ ಆಕ್ರೋಶ

Delhi Services Bill; ದೇಶದ ಇತಿಹಾಸದಲ್ಲಿ ಇಂದು ಕರಾಳ ದಿನ. ಅಮಿತ್ ಶಾ ಜೀ, ದೆಹಲಿಯ ಜನರ ಹಕ್ಕುಗಳನ್ನು ಕೊಲ್ಲಲು ನಿಮಗೆ ಅಧಿಕಾರ ನೀಡಲಿಲ್ಲ. ದೆಹಲಿ ಸರ್ಕಾರದ ಪ್ಯೂನ್‌ಗಳ ವರ್ಗಾವಣೆಯನ್ನೂ ಪ್ರಧಾನಿ ಮೋದಿ ಮಾಡುತ್ತಾರೆ ಎಂದು ಕೇಜ್ರಿವಾಲ್ ಕಿಡಿಕಾರಿದರು.

ದೇಶದ ಇತಿಹಾಸದಲ್ಲಿ ಕರಾಳ ದಿನ; ದೆಹಲಿ ಸೇವಾ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆಗೆ ಕೇಜ್ರಿವಾಲ್ ಆಕ್ರೋಶ
Image Credit source: PTI

Updated on: Aug 07, 2023 | 10:57 PM

ನವದೆಹಲಿ, ಆಗಸ್ಟ್ 7: ದೆಹಲಿ ಸೇವಾ ಮಸೂದೆಗೆ (Delhi Services Bill) ರಾಜ್ಯಸಭೆಯಲ್ಲಿ ಸೋಮವಾರ ಅನುಮೋದನೆ ದೊರೆತಿರುವುದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿದ ಅವರು, ದೇಶದ ಇತಿಹಾಸದಲ್ಲಿ ಇಂದು ಕರಾಳ ದಿನ ಎಂದು ಹೇಳಿದರು. ಸರ್ಕಾರಕ್ಕೆ ಕೆಲಸ ಮಾಡುವ ಅಧಿಕಾರವಿಲ್ಲ. ಸುಪ್ರೀಂ ಕೋರ್ಟ್‌ನಲ್ಲೂ ನನಗೆ ನಂಬಿಕೆ ಇಲ್ಲ ಎಂದು ಪ್ರಧಾನಿ ಹೇಳುತ್ತಿರುವುದು ಸ್ಪಷ್ಟವಾಗಿದೆ ಎಂದರು. ದೆಹಲಿ ಸರ್ಕಾರಿ ನೌಕರರ ಎಲ್ಲಾ ನೀತಿಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ ಎಂದು ಅವರು ಹೇಳಿದರು.

ದೆಹಲಿ ಸರ್ಕಾರದ ಪ್ಯೂನ್ ಏನು ಮಾಡುತ್ತಾರೆ ಎಂಬುದನ್ನು ಪ್ರಧಾನಿ ಕುಳಿತು ನೋಡುತ್ತಾರೆ. ಅದಕ್ಕಾಗಿಯೇ ಅವರನ್ನು ಪ್ರಧಾನಿ ಮಾಡಲಾಯಿತು. ನೀವು ಕೇಂದ್ರ ಸರ್ಕಾರವನ್ನು ನಡೆಸುತ್ತೀರಿ. ನೀವು ದೆಹಲಿಯಲ್ಲಿ ಏಕೆ ಹಸ್ತಕ್ಷೇಪ ಮಾಡುತ್ತಿದ್ದೀರಿ ಎಂದು ಅವರು ಪ್ರಧಾನಿಯವರನ್ನು ಪ್ರಶ್ನಿಸಿದರು.

ಅಮಿತ್ ಶಾ ಜೀ, ದೆಹಲಿಯ ಜನರ ಹಕ್ಕುಗಳನ್ನು ಕೊಲ್ಲಲು ನಿಮಗೆ ಅಧಿಕಾರ ನೀಡಲಿಲ್ಲ. ದೆಹಲಿ ಸರ್ಕಾರದ ಪ್ಯೂನ್‌ಗಳ ವರ್ಗಾವಣೆಯನ್ನೂ ಪ್ರಧಾನಿ ಮೋದಿ ಮಾಡುತ್ತಾರೆ ಎಂದು ಕೇಜ್ರಿವಾಲ್ ಕಿಡಿಕಾರಿದರು.

ಇದನ್ನೂ ಓದಿ: ದೆಹಲಿ ಸೇವಾ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ; ಸಂಸತ್ತಿನ ಮೇಲ್ಮನೆಯಲ್ಲೂ ಮೋದಿ ಸರ್ಕಾರಕ್ಕೆ ಗೆಲುವು

ರಾಜ್ಯಸಭೆಯಲ್ಲಿ ಮಸೂದೆಯ ಪರವಾಗಿ 131 ಮತಗಳು ಹಾಗೂ ವಿರುದ್ಧವಾಗಿ 102 ಮತಗಳು ಚಲಾವಣೆಯಾಗಿದ್ದವು. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜೆಡಿ ಮತ್ತು ವೈಎಸ್‌ಆರ್‌ಸಿಪಿ ಮಸೂದೆ ಪರ ಮತ ಚಲಾಯಿಸಿದವು.

ಈ ಮಧ್ಯೆ, ದೆಹಲಿ ಸೇವಾ ಮಸೂದೆಯು ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನಷ್ಟೇ ಹೊಂದಿದೆಯೇ ವಿನಃ ಎಎಪಿ ಸರ್ಕಾರದ ಅಧಿಕಾರವನ್ನು ಅತಿಕ್ರಮಿಸುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಭರವಸೆ ನೀಡಿದ್ದಾರೆ. ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ಉತ್ತೇಜಿಸುವ ಪರಿಣಾಮಕಾರಿ ಮತ್ತು ಪಾರದರ್ಶಕ ಆಡಳಿತವನ್ನು ನೀಡುವುದು ಮಸೂದೆಯ ಉದ್ದೇಶವಾಗಿದೆ. ಕಾಂಗ್ರೆಸ್ ಆಡಳಿತದಿಂದಲೂ ಜಾರಿಯಲ್ಲಿರುವ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:56 pm, Mon, 7 August 23