ಎರಡು ದಿನ, ಎರಡು ಅತ್ಯಾಚಾರ, ಒಂದು ಕೊಲೆ, ಐಆರ್ಎಸ್ ಅಧಿಕಾರಿ ಮಗಳ ಕೊಂದವನು ಸಾಮಾನ್ಯದವನಲ್ಲ
ದೆಹಲಿಯಲ್ಲಿ ಐಆರ್ಎಸ್ ಅಧಿಕಾರಿಯ ಮಗಳ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಮೊದು ಅವರ ಮನೆಯಲ್ಲೇ ಕೆಲಸ ಮಾಡುತ್ತಿದ್ದ ರಾಹುಲ್ ಈ ಕೃತ್ಯ ಎಸಗಿದ್ದಾನೆ. ಅಚ್ಚರಿಯೆಂದರೆ, ದೆಹಲಿ ಅಪರಾಧಕ್ಕೆ ಕೆಲವೇ ಗಂಟೆಗಳ ಮೊದಲು ಈತ ರಾಜಸ್ಥಾನದ ಅಲ್ವಾರ್‌ನಲ್ಲಿ ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಮನೆಕೆಲಸಗಾರರ ಹಿನ್ನೆಲೆ ಪರಿಶೀಲನೆಯ ಮಹತ್ವವನ್ನು ಈ ಘಟನೆ ಎತ್ತಿ ತೋರಿಸುತ್ತದೆ.

ನವದೆಹಲಿ, ಏಪ್ರಿಲ್ 23: ದೆಹಲಿಯ ಕೈಲಾಶ್ ಪೂರ್ವ ಭಾಗದಲ್ಲಿ ನಡೆದ ಈ ಭೀಕರ ಹತ್ಯೆ(Murder) ಮತ್ತು ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆ ಆರೋಪಿ ಮಾಡಿದ್ದು ಕೇವಲ ಒಂದು ಅಪರಾಧವಲ್ಲ, ಎರಡು ದಿನಗಳಲ್ಲಿ ಎರಡು ಅತ್ಯಾಚಾರವೆಸಗಿ ಒಬ್ಬರನ್ನು ಕೊಲೆ ಮಾಡಿದ್ದ ಎನ್ನುವ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ. 22 ವರ್ಷದ ಎಂಜಿನಿಯರಿಂಗ್ ಪದವೀಧರೆ ಹಾಗೂ ಯುಪಿಎಸ್‌ಸಿ (UPSC) ಪರೀಕ್ಷೆಯ ಸಿದ್ಧತೆಯಲ್ಲಿದ್ದ ಯುವತಿಯನ್ನು ಆಕೆಯ ಮನೆಯಲ್ಲೇ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದ ಆರೋಪಿ ರಾಹುಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಭಾರತೀಯ ಕಂದಾಯ ಸೇವಾ (IRS) ಅಧಿಕಾರಿಯ ಪುತ್ರಿಯಾಗಿರುವ ಈ ಯುವತಿ, ಬುಧವಾರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ರಾಹುಲ್ ಯುವತಿಯ ಮೇಲೆ ಮೊದಲು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಮೊಬೈಲ್ ಫೋನ್ ಚಾರ್ಜರ್ ಕೇಬಲ್ ಬಳಸಿ ಕತ್ತು ಹಿಸುಕಿ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ರಾಹುಲ್ ಈ ಹಿಂದೆ ಇದೇ ಮನೆಯಲ್ಲಿ ಕೆಲಸಗಾರನಾಗಿ ಕೆಲಸ ನಿರ್ವಹಿಸುತ್ತಿದ್ದ, ಆದರೆ ಕೆಲಸಗಾರರಿಂದ ಹಣ ಸಾಲ ಪಡೆದು ಮರುಪಾವತಿಸಲು ಸಾಧ್ಯವಾಗದ ಕಾರಣ ಒಂದು ತಿಂಗಳ ಹಿಂದಷ್ಟೇ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ದ್ವೇಷವೇ ಕೊಲೆಗೆ ಪ್ರಚೋದನೆ ನೀಡಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಆತನ ಚಲನವಲನಗಳನ್ನು ಪತ್ತೆಹಚ್ಚಿ ದ್ವಾರಕಾ ಪ್ರದೇಶದ ಹೋಟೆಲ್‌ವೊಂದರಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತಷ್ಟು ಓದಿ: ಗಾಜಿಯಾಬಾದ್‌ನಲ್ಲಿ 4 ವರ್ಷದ ಮಗುವನ್ನು ಕೊಂದಿದ್ದ ಆರೋಪಿಯ ಎನ್ಕೌಂಟರ್; ಶವ ಬೇಡವೆಂದ ಕುಟುಂಬಸ್ಥರು
ತನಿಖೆ ವೇಳೆ ಪೊಲೀಸರಿಗೆ ಅತ್ಯಂತ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ದೆಹಲಿಯಲ್ಲಿ ಕೊಲೆ ಮಾಡುವ ಕೆಲವೇ ಗಂಟೆಗಳ ಮೊದಲು, ಈತ ರಾಜಸ್ಥಾನದ ಅಲ್ವಾರ್‌ನಲ್ಲಿ ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ.
ಅಲ್ವಾರ್‌ನ ಸಂತ್ರಸ್ತೆಯ ಪತಿಯೊಂದಿಗೆ ರಾಹುಲ್ ಸ್ನೇಹ ಹೊಂದಿದ್ದ, ಅವರೊಂದಿಗೆ ಲುಡೋ ಆಡಲು ಹೋಗುತ್ತಿದ್ದ ಈತ, ಅಲ್ಲಿನ ಮಹಿಳೆಯ ಮೇಲೆ ದೌರ್ಜನ್ಯ ಎಸಗಿ ಕೂಡಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದ.
ಜಂಟಿ ಪೊಲೀಸ್ ಆಯುಕ್ತ ವಿಜಯ್ ಕುಮಾರ್ ಈ ಬಗ್ಗೆ ಮಾತನಾಡಿ, “ಆರೋಪಿ ಒಂದೇ ದಿನ ಎರಡು ಕಡೆ ಒಂದೇ ರೀತಿಯ ಘೋರ ಅಪರಾಧಗಳನ್ನು ಮಾಡಿದ್ದಾನೆ. ಇದು ಆತನ ವಿಕೃತ ಕ್ರಿಮಿನಲ್ ಮನಸ್ಥಿತಿಯನ್ನು ತೋರಿಸುತ್ತದೆ. ಕೆಲಸದಿಂದ ತೆಗೆದುಹಾಕಿದ್ದ ಅಸಮಾಧಾನ ಮತ್ತು ಈ ವಿಕೃತ ಮನಸ್ಥಿತಿಯೇ ಕೃತ್ಯಕ್ಕೆ ಕಾರಣವಾಗಿರಬಹುದು. ಸದ್ಯಕ್ಕೆ ವಿಚಾರಣೆ ನಡೆಯುತ್ತಿದ್ದು, ಇನ್ನಷ್ಟು ಸತ್ಯಗಳು ಹೊರಬರಬೇಕಿದೆ ಎಂದಿದ್ದಾರೆ. ಈ ಘಟನೆಯು ಮನೆಯ ಕೆಲಸಕ್ಕೆ ಬರುವವರ ಹಿನ್ನೆಲೆ ಪರಿಶೀಲನೆ (Verification) ಮಾಡುವುದು ಎಷ್ಟು ಮುಖ್ಯ ಎಂಬುದರ ಬಗ್ಗೆ ಎಚ್ಚರಿಸಿದಂತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




