ದೆಹಲಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಶುಕ್ರವಾರ (ಜುಲೈ 1) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (Enforcement Directorate – ED) ವಿಚಾರಣೆ ಎದುರಿಸಲಿದ್ದಾರೆ. ದೆಹಲಿಯ ಇಡಿ ವಿಶೇಷ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಪ್ರಕರಣ ಕುರಿತಂತೆ ಈ ಹಿಂದೆಯೇ ತನಿಖೆ ನಡೆಸಿದ್ದ ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಸಿದ್ದರು. ಆರೋಪ ಪಟ್ಟಿಯನ್ನು ಆಧರಿಸಿಯೇ ಡಿಕೆ ಶಿವಕುಮಾರ್ ಸೇರಿ ಐವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಸಮನ್ಸ್ ಹಿನ್ನೆಲೆಯಲ್ಲಿ ಇಂದು ಡಿಕೆಶಿ ಸೇರಿದಂತೆ ಐವರ ವಿಚಾರಣೆ ನಡೆಯಲಿದೆ. ಮೊದಲ ದಿನದ ವಿಚಾರಣೆಯಂದು ಹೈಕೋರ್ಟ್‌ನಿಂದ ಈ ಹಿಂದೆ ಪಡೆದ ಜಾಮೀನನ್ನು ಕೋರ್ಟ್ ಪರಿಶೀಲಿಸಲಿದೆ. ಈವರೆಗೂ ಇಡಿ ಸಲ್ಲಿಸಿದ ಆರೋಪಪಟ್ಟಿಯು ಡಿ.ಕೆ.ಶಿವಕುಮಾರ್ ಅವರಿಗೆ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲು ಡಿ.ಕೆ.ಶಿವಕುಮಾರ್ ಪರ ವಕೀಲರು ಮನವಿ ಮಾಡುವ ಸಾಧ್ಯತೆಯಿದೆ.
ಆರೋಪಪಟ್ಟಿಯಲ್ಲಿ ಏನೆಲ್ಲ ಇದೆ?
2019ರಲ್ಲಿ ನಡೆದಿದ್ದ ದಾಳಿ ಸಂಬಂಧ ಡಿಕೆಶಿ ವಿರುದ್ಧ ಇಡಿ ಅಧಿಕಾರಿಗಳು ಮೇ 26ರಂದು ದೆಹಲಿಯ ವಿಶೇಷ ಕೋರ್ಟ್‌ಗೆ ಹೊಸ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಒಟ್ಟು 58 ಪುಟಗಳ ಆರೋಪಪಟ್ಟಿಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಹಚರರು ನಡೆಸಿದ್ದಾರೆ ಎನ್ನಲಾದ ಹವಾಲಾ ದಂಧೆಯ ವಿವರಗಳಿವೆ. ಡಿ.ಕೆ.ಶಿವಕುಮಾರ್ ತಂಡವು ಹವಾಲಾ ಮೂಲಕ ದೆಹಲಿಗೆ ಕೋಟ್ಯಾಂತರ ರೂಪಾಯಿ ಸಾಗಿಸಿದೆ. ದೆಹಲಿಯ ಸಫ್ದರ್‌ಜಂಗ್ ಅಪಾರ್ಟ್ಮೆಂಟ್ನಲ್ಲಿ ಸಿಕ್ಕಿದ್ದ ₹ 6.61 ಕೋಟಿ ಡಿಕೆಶಿ ಅವರದ್ದೇ ಎಂದು ಇಡಿ ವಾದಿಸಿದೆ.
ಇಡಿ ಅಧಿಕಾರಿಗಳು ಐವರು ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 120 ಬಿ ಅಡಿ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಜೊತೆಗೆ ದಾಳಿ ನಡೆಸಿದ್ದ 11 ಮಂದಿ ಐಟಿ ಅಧಿಕಾರಿಗಳ ಹೇಳಿಕೆಗಳನ್ನೂ ದಾಖಲಿಸಿದ್ದಾರೆ. ಆರೋಪಿಗಳ ಪಾತ್ರದ ಬಗ್ಗೆ ಪತ್ಯೇಕವಾಗಿ ವಿವರಿಸಿದ್ದಾರೆ. ಡಿ.ಕೆ.ಶಿವಕುಮಾರ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಅಕ್ರಮ ಹಣ ಸಂಗ್ರಹಿಸಿದ್ದಾರೆ ಎಂದು ಉಲ್ಲೇಖವಾಗಿದೆ. ಐಟಿ ದಾಳಿಯ ವೇಳೆ ಇತರ ಆರೋಪಿಗಳ ಮೇಲೆ ಪ್ರಭಾವ ಬೀರಿ ಹೇಳಿಕೆ ಕೊಡಿಸಿದ್ದಾರೆ ಎಂದು ಇಡಿ ಆರೋಪ ಪಟ್ಟಿಯಲ್ಲಿ ಮಾಹಿತಿ ನೀಡಿದೆ.
ಜಾರಿ ನಿರ್ದೇಶನಾಲಯ ವಕೀಲರ ವಾದ
ದೆಹಲಿಯ ಇಡಿ ವಿಶೇಷ ಕೋರ್ಟ್‌ನಲ್ಲಿ ಮೇ 28ರಂದು ಪ್ರಕರಣದ ಡಿಕೆಶಿ ಪ್ರಕರಣದ ವಿಚಾರಣೆ ಮತ್ತೆ ಆರಂಭವಾಯಿತು. ಜಾರಿ ನಿರ್ದೇಶನಾಲಯ ಪರ ವಾದ ಮಂಡಿಸಿದ ವಕೀಲರು, ಐಪಿಸಿ ಸೆಕ್ಷನ್ 120ಬಿ ಅನ್ವಯ ಹೊಸದಾಗಿ ಪ್ರಕರಣ ದಾಖಲಿಸಿರುವ ಬಗ್ಗೆ ವಾದ ಮಂಡಿಸಿದರು. ಸಚಿನ್ ನಾರಾಯಣ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನೂ ಉಲ್ಲೇಖಿಸಿದರು. ಇಡಿ ವ್ಯಾಪ್ತಿಯ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡಲಾಗಿದೆ. ಸಫ್ದರ್‌ಜಂಗ್ ಎನ್‌ಕ್ಲೇವ್ ಫ್ಲ್ಯಾಟ್‌ನಲ್ಲಿ ಹಣ ವಶ ಬಗ್ಗೆ ವಕೀಲರು ಮಾಹಿತಿ ನೀಡಿದರು. ದೆಹಲಿಯ ಫ್ಲ್ಯಾಟ್‌ನಲ್ಲಿ ಐಟಿ ದಾಳಿ ವೇಳೆ ₹ 8.5 ಕೋಟಿ ಜಪ್ತಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಡಿಕೆಶಿ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಕೋರ್ಟ್‌ಗೆ ಜಾರಿ ನಿರ್ದೇಶನಾಲಯ ಪರ ವಕೀಲರು ಸ್ಪಷ್ಟನೆ ನೀಡಿದ್ದರು.