ದೆಹಲಿ: ಐಪಿಎಸ್ ಅಧಿಕಾರಿ ರಾಕೇಶ್ ಅಸ್ತನಾ ಅವರನ್ನು ದೆಹಲಿ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ)ನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ರಾಕೇಶ್ ಅಸ್ತನಾ ಗುಜರಾತ್ ಕೇಡರ್ನ ಐಪಿಎಸ್ ಅಧಿಕಾರಿಯಾಗಿದ್ದು, ಜು.27ರಂದು ಕೇಂದ್ರ ಗೃಹಸಚಿವಾಲಯ ಅವರನ್ನು ದೆಹಲಿ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿತ್ತು. ಅಷ್ಟೇ ಅಲ್ಲ, ಇಂಟರ್-ಕೇಡರ್ ಡೆಪ್ಯುಟೇಶನ್ ಮತ್ತು ಸೇವಾ ಅವಧಿ ವಿಸ್ತರಿಸುವ ಆದೇಶ ನೀಡಿತ್ತು. ಈ ನೇಮಕವಾಗುತ್ತಿದ್ದಂತೆ ವಕೀಲರಾದ ವಕೀಲ ಸಾದ್ರೆ ಆಲಂ ಎಂಬವರು ದೆಹಲಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿ, ರಾಕೇಶ್ ಅಸ್ತನಾ ನೇಮಕಾತಿ ಮತ್ತು ಸೇವೆ ಅವಧಿ ವಿಸ್ತರಣೆಯ ಆದೇಶವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.
ಆದರೆ, ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ನೇತೃತ್ವದ ಪೀಠ ಅದನ್ನು ವಜಾಗೊಳಿಸಿದೆ. ಸೇವಾ ವಿಷಯಗಳಲ್ಲಿ ಪಿಐಎಲ್ ಸಲ್ಲಿಕೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದೆ. ಇನ್ನು ಪಿಐಎಲ್ ಸಲ್ಲಿಸಿದ್ದ ವಕೀಲರು, ಕೇಂದ್ರ ಗೃಹ ಸಚಿವಾಲಯ ರಾಕೇಶ್ ಅಸ್ತನಾ ಅವರನ್ನು ದೆಹಲಿ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡುವಾಗ ಕೆಲವು ಮಾನದಂಡಗಳನ್ನು ನಿರ್ಲಕ್ಷ್ಯ ಮಾಡಿದೆ. ಪ್ರಕಾಶ್ ಸಿಂಗ್ ಕೇಸ್ನಲ್ಲಿ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನಗಳನ್ನು ಸ್ಪಷ್ಟವಾಗಿ ಉಲ್ಲಂಘ ಮಾಡಿದೆ. ದೆಹಲಿ ಆಯುಕ್ತರ ನೇಮಕಾತಿ ಸಂಬಂಧ ಯುಪಿಎಸ್ಸಿ (ಕೇಂದ್ರ ಸಾರ್ವಜನಿಕ ಸೇವಾ ಆಯೋಗ)ಸಮಿತಿ ರಚನೆ ಮಾಡಲಾಗಲಿಲ್ಲ. ರಾಕೇಶ್ ಅಸ್ತನಾ ದೆಹಲಿ ಪೊಲೀಸ್ ಆಯುಕ್ತರಾಗುವಾಗ ಕನಿಷ್ಠ 6 ತಿಂಗಳು ಕೂಡ ಅವರ ಸೇವಾ ಅವಧಿ ಇರಲಿಲ್ಲ. ಈ ಮೂಲಕ ಯಾವುದೇ ಅಧಿಕಾರಕ್ಕೆ ಏರುವಾಗ ಅವರ ಸೇವಾ ಅವಧಿ ಕನಿಷ್ಠ 2ವರ್ಷಗಳಾದರೂ ಇರಬೇಕು ಎಂಬ ಮಾನದಂಡವನ್ನು ಸ್ಪಷ್ಟವಾಗಿ ನಿರ್ಲಕ್ಷ ಮಾಡಲಾಗಿದೆ ಎಂದು ಹೇಳಿದ್ದರು. ಇಲ್ಲಿ ಪ್ರಕಾಶ್ ಸಿಂಗ್ ಆದೇಶ ಎಂದರೆ 2006ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಒಂದು ಆದೇಶ. ಪ್ರಕಾಶ್ ಸಿಂಗ್ ಉತ್ತರ ಪ್ರದೇಶ ಮತ್ತು ಅಸ್ಸಾಂ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಪೊಲೀಸ್ ಇಲಾಖೆ ಸುಧಾರಣೆಗಾಗಿ ಸುಪ್ರೀಂಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದರು. ಅದರ ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್, 2006ರಲ್ಲಿ ಪೊಲೀಸ್ ಇಲಾಖೆ ಸುಧಾರಣೆ ಸಂಬಂಧ ಮಹತ್ವದ ತೀರ್ಪು ನೀಡಿತ್ತು. ಅದರಡಿಯಲ್ಲಿ ಮಹತ್ವದ ಏಳು ನಿರ್ದೇಶನಗಳನ್ನು ಹೊರಡಿಸಿತ್ತು. ಅದರಲ್ಲಿ, ನಿವೃತ್ತಿಗೆ ಕೆಲವೇ ದಿನಗಳು ಇರುವಾಗ ಯಾವುದೇ ಅಧಿಕಾರಿಗೆ ಹುದ್ದೆ ನೀಡುವ ಕುರಿತಾಗಿಯೂ ಸುಪ್ರೀಂಕೋರ್ಟ್ ಆ ತೀರ್ಪಿನಲ್ಲಿ ಉಲ್ಲೇಖಿಸಿ, ಅವಧಿ ನಿಗದಿ ಮಾಡಬೇಕು ಎಂದು ಹೇಳಿತ್ತು.
ಅದಕ್ಕೆ ಪ್ರತಿಯಾಗಿ ಅಫಿಡವಿಟ್ ಸಲ್ಲಿಸಿದ್ದ ಕೇಂದ್ರ ಸರ್ಕಾರ, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ರಾಕೇಶ್ ಅಸ್ತನಾರನ್ನು ದೆಹಲಿ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದ್ದೇವೆ ಮತ್ತು ಅವರ ನಿವೃತ್ತಿಗೆ ಮೂರು ದಿನ ಇದ್ದಿದ್ದು ಗೊತ್ತಿತ್ತು. ಹಾಗಾಗಿ ಸೇವಾ ಅವಧಿಯನ್ನೂ ವಿಸ್ತರಣೆ ಮಾಡಿದ್ದೇವೆ. ರಾಷ್ಟ್ರರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಹಲವು ಸವಾಲುಗಳು ಎದುರಾಗಿದ್ದು, ಅದರ ನಿಯಂತ್ರಣದಲ್ಲಿ ಗಮನದಲ್ಲಿಟ್ಟುಕೊಂಡೇ ರಾಕೇಶ್ ಅಸ್ತನಾ ನೇಮಕವಾಗಿದೆ ಎಂದು ಹೇಳಿತ್ತು.
ಇದನ್ನೂ ಓದಿ: Dharmendra: ನಟ ಧರ್ಮೇಂದ್ರ 1960ರಲ್ಲಿ ತಮ್ಮ ಮೊದಲ ಕಾರನ್ನು ಕೇವಲ ಇಷ್ಟು ಹಣ ನೀಡಿ ಖರೀದಿಸಿದ್ದರು; ಅಚ್ಚರಿಯ ಮಾಹಿತಿ ಇಲ್ಲಿದೆ