
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಪತ್ನಿ, ವಿಶ್ವಸಂಸ್ಥೆಯ ಮಾಜಿ ಸಹಾಯಕ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಪುರಿ ವಿರುದ್ಧ ಮಾಡಿದ್ದ ಅಕ್ರಮ ಆಸ್ತಿ ಗಳಿಕೆ ಆರೋಪದ ಟ್ವೀಟ್ನ್ನು ಕೂಡಲೇ ಡಿಲೀಟ್ ಮಾಡಬೇಕು ಎಂದು ದೆಹಲಿ ಹೈಕೋರ್ಟ್ ಆರ್ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರಿಗೆ ಸೂಚಿಸಿದೆ. ಅಲ್ಲದೆ, ಇನ್ನು ಮುಂದೆ ಲಕ್ಷ್ಮೀಪುರಿ ಮತ್ತು ಅವರ ಪತಿ ಹರ್ದೀಪ್ ಸಿಂಗ್ ಪುರಿ ವಿರುದ್ಧ ಮಾನಹಾನಿ, ಹಗರಣ ಅಥವಾ ವಾಸ್ತವದಲ್ಲಿ ತಪ್ಪಾಗಿರುವ ಯಾವುದೇ ಟ್ವೀಟ್ಗಳನ್ನು ಮಾಡದಂತೆ ಸಾಕೇತ್ಗೆ ನಿರ್ಬಂಧ ಹೇರಿದೆ. ಲಕ್ಷ್ಮೀಪುರಿ ವಿರುದ್ಧ ಮಾಡಿರುವ ಟ್ವೀಟ್ನ್ನು 24ಗಂಟೆಯಲ್ಲಿ ಸಾಕೇತ್ ಗೋಖಲೆ ಡಿಲೀಟ್ ಮಾಡದಿದ್ದರೆ ಟ್ವಿಟರ್ ಮುಂದಾಗಿ ಅದನ್ನು ಡಿಲೀಟ್ ಮಾಡಬೇಕು ಮತ್ತು ಮುಂದಿನ ವಿಚಾರಣೆಯ ದಿನಾಂಕದೊಳಗೆ ಒಂದು ಅನುಸರಣಾ ದೂರನ್ನು ಕೋರ್ಟ್ಗೆ ನೀಡಬೇಕು ಎಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸಿ.ಹರಿಶಂಕರ್ ಟ್ವಿಟರ್ಗೆ ಸೂಚಿಸಿದ್ದಾರೆ.
ಸಾಕೇತ್ ಗೋಖಲೆ ಆರ್ಟಿಐ ಕಾರ್ಯಕರ್ತ ಮತ್ತು ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಲಕ್ಷ್ಮೀಪುರಿ ತಮ್ಮ ಆದಾಯಕ್ಕೂ ಮೀರಿ ಆಸ್ತಿ ಮಾಡಿದ್ದಾರೆ. ಸ್ವಿಜರ್ಲ್ಯಾಂಡ್ನಲ್ಲಿ ಬಹುಮೊತ್ತದ ಆಸ್ತಿ ಖರೀದಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ನಂತರ ತಮ್ಮ ವಿರುದ್ಧ ಗಂಭೀರ ಆರೋಪ ಮಾಡಿದ ಸಾಕೇತ್ ಗೋಖಲೆ ವಿರುದ್ಧ ಲಕ್ಷ್ಮೀ ಪುರಿ ದೆಹಲಿ ಹೈಕೋರ್ಟ್ನಲ್ಲಿ 5 ಕೋಟಿ ರೂ.ನ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅದರ ವಿಚಾರಣೆ ನಡೆಸಿದ್ದ ನ್ಯಾ.ಸಿ.ಹರಿಶಂಕರ್ ತೀರ್ಪು ಕಾಯ್ದಿರಿಸಿದ್ದರು. ಹಿಂದಿನ ವಾರವೇ ಟ್ವೀಟ್ ಡಿಲೀಟ್ ಮಾಡುವಂತೆ ಗೋಖಲೆಗೆ ಕೋರ್ಟ್ ಸೂಚಿಸಿತ್ತು. ಆದರೆ ಅದನ್ನು ನಿರಾಕರಿಸಿದ್ದರು. ಈ ಬಾರಿ ಮತ್ತೆ ಟ್ವೀಟ್ ತೆಗೆದು ಹಾಕಲು ನ್ಯಾಯಾಧೀಶರು ಹೇಳಿದ್ದಾರೆ. ಒಂದೊಮ್ಮೆ ಸಾಕೇತ್ ಗೋಖಲೆ 24 ಗಂಟೆಯೊಳಗೆ ಅದನ್ನು ಡಿಲೀಟ್ ಮಾಡದೆ ಇದ್ದರೆ, ಟ್ವಿಟರ್ ಅದನ್ನು ಡಿಲೀಟ್ ಮಾಡಿ, ಮತ್ತೆ ನ್ಯಾಯಾಲಯಕ್ಕೆ ದೂರು ಸಲ್ಲಿಸಲಿದೆ.
ಕಳೆದ ತಿಂಗಳು ಸಾಕೇತ್ ಗೋಖಲೆ ಲಕ್ಷ್ಮೀ ಪುರಿ ವಿರುದ್ಧ ಗಂಭೀರ ಆರೋಪ ಮಾಡಿ ಟ್ವೀಟ್ ಮಾಡಿದ್ದರು. ಲಕ್ಷ್ಮೀಪುರಿ ಸ್ವಿಜರ್ರ್ಲ್ಯಾಂಡ್ನಲ್ಲಿ ಆದಾಯಕ್ಕೂ ಮೀರಿ ಆಸ್ತಿ ಖರೀದಿ ಮಾಡಿದ್ದಾರೆ ಎಂದು ಹೇಳಿದ್ದ ಅವರು ಲಕ್ಷ್ಮೀಪುರ ಮತ್ತು ಹರ್ದೀಪ್ ಸಿಂಗ್ ಪುರಿ ಆಸ್ತಿ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಲ್ಲದೆ, ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರನ್ನೂ ಟ್ಯಾಗ್ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಲಕ್ಷ್ಮೀ ಪುರಿ ಹೈಕೋರ್ಟ್ ಮೆಟ್ಟಿಲೇರಿ, ಗೋಖಲೆ ವಿರುದ್ಧ 5 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ನನ್ನ ವಿರುದ್ಧ ಮಾಡಲಾದ ಆರೋಪಗಳು ದುರುದ್ದೇಶದಿಂದ ಕೂಡಿದ್ದು, ಸತ್ಯವನ್ನು ತಿರುಚಲ್ಪಟ್ಟಿವೆ ಎಂದು ಹೇಳಿದ್ದರು. ಲಕ್ಷ್ಮೀ ಪುರಿ ಪರ ಹಿರಿಯ ನ್ಯಾಯವಾದಿ ಮನೀಂದರ್ ಸಿಂಗ್ ಮತ್ತು ಸಾಕೇತ್ ಗೋಖಲೆ ಪರ ಸರೀಮ್ ನವೇದ್ ವಾದ ಮಂಡಿಸಿದ್ದರು.
Delhi Highcourt directs RTI Activist Saket Gokhale to delete tweets against Lakshmi Puri
Published On - 12:36 pm, Tue, 13 July 21