ನವದೆಹಲಿ: ಮಸೀದಿಯೊಳಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಹಾಕಲಾಗಿದ್ದ ನಾಮಫಲಕವನ್ನು ಕೊನೆಗೂ ದೆಹಲಿಯ ಜಾಮಾ ಮಸೀದಿಯ(Delhi Jama Masjid) ಆಡಳಿತ ಮಂಡಳಿ ತೆರವುಗೊಳಿಸಿದೆ. ದೆಹಲಿ ಮಹಿಳಾ ಆಯೋಗ ನೋಟಿಸ್ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಾಮಾ ಮಸೀದಿಯ ಆಡಳಿತ ಮಂಡಳಿ, ಮಹಿಳೆಯರಿಗೆ ಪ್ರವೇಶವಿಲ್ಲ ಎಂದು ಹಾಕಲಾಗಿದ್ದ ಬೋರ್ಡ್ನ್ನು ತೆಗೆದುಹಾಕಿದೆ.
ದೆಹಲಿಯ ಜಾಮಾ ಮಸೀದಿಗೆ ಪುರುಷರಿಲ್ಲದೆ ಬರುವ ಮಹಿಳೆಯರಿಗೆ ನಿಷೇಧ; ವಿವಾದಾತ್ಮಕ ಆದೇಶಕ್ಕೆ ಭಾರೀ ವಿರೋಧ
ಜಾಮಾ ಮಸೀದಿಗೆ ಒಂಟಿ ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಕುಟುಂಬದ ಪುರುಷ ಸದಸ್ಯರ ಜೊತೆ ಬರಬೇಕೆಂದು ಇಂದು(ನವೆಂಬರ್ 24) ದೆಹಲಿಯ ಜಾಮಾ ಮಸೀದಿ ಪ್ರವೇಶ ದ್ವಾರದಲ್ಲಿ ನಾಮಫಲಕ ಹಾಕಲಾಗಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿವಾದದ ಹೆಚ್ಚಾಗುತ್ತಿದ್ದಂತೆಯೇ ದೆಹಲಿ ಮಹಿಳಾ ಆಯೋಗ ಎಂಟ್ರಿ ಕೊಟ್ಟಿದ್ದು, ಇಂತಹ ನಿಷೇಧವನ್ನು ಹೊರಡಿಸುವ ಹಕ್ಕು ಯಾರಿಗೂ ಇಲ್ಲ ಎಂದು ಮಸೀದಿಗೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ನೋಟಿಸ್ ನೀಡಿದ್ದರು.
ಇದರಿಂದ ಕೊನೆಗೆ ಎಚ್ಚೆತ್ತುಕೊಂಡಿರುವ ದೆಹಲಿಯ ಜಾಮಾ ಮಸೀದಿಯ ಆಡಳಿತ ಮಂಡಳಿ, ಮಹಿಳೆಯರಿಗೆ ಮಸೀದಿಯೊಳಗೆ ಪ್ರವೇಶವಿಲ್ಲ ಎನ್ನುವ ನಾಮಫಲಕವನ್ನು ತೆರವುಗೊಳಿಸಿದೆ.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಹ ಈ ಆದೇಶವನ್ನು ಖಂಡಿಸಿತ್ತು. ಇದನ್ನು ಮಹಿಳಾ ವಿರೋಧಿ ಕೃತ್ಯ ಎಂದು ಬಣ್ಣಿಸಿತ್ತು. ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗವನ್ನು ವಿಎಚ್‌ಪಿ ಒತ್ತಾಯಿಸಿತ್ತು.
ನೂತನ ಆದೇಶ ತೀವ್ರ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ್ದ ಆಡಳಿತ ಮಂಡಳಿ ಸದಸ್ಯ ಶಾಹಿ ಇಮಾಮ್, ಯುವತಿಯರು ತಮ್ಮ ಗೆಳೆಯರೊಂದಿಗೆ ಮಸೀದಿಗೆ ಬರುತ್ತಾರೆ ಎಂಬ ದೂರುಗಳು ಬರುತ್ತಿವೆ. ಈ ಕಾರಣಕ್ಕಾಗಿ ಅಂತಹ ಮಹಿಳೆಯರು ಒಂಟಿಯಾಗಿ ಬರುವುದಕ್ಕೆ ನಿರ್ಬಂಧ ಹೇರಲಾಗಿದೆ. ಒಂದು ವೇಳೆ ಮಹಿಳೆ ಜಾಮಾ ಮಸೀದಿಗೆ ಬರಲು ಬಯಸಿದರೆ ಆಕೆ ತನ್ನ ಕುಟುಂಬ ಅಥವಾ ಪತಿಯೊಂದಿಗೆ ಮಾತ್ರ ಬರಬೇಕು ಎಂದು ಶಾಹಿ ಇಮಾಮ್ ಹೇಳಿದ್ದರು. ಆದರೆ, ನಮಾಜ್ ಮಾಡಲು ಬರುವ ಮಹಿಳೆಯನ್ನು ನಾವು ತಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.